'ಎಲ್ಲವೂ ಉಲ್ಟಾಪಲ್ಟಾ : ಎರಡೂ ಕಡೆ ಕೈ ಗೆಲುವು ಖಚಿತ'
ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಈಗ ಸಾಕಷ್ಟು ಚರ್ಚೆಯಲ್ಲಿದ್ದು ಇದೇ ವೇಳೆ ಚುನಾವಣೆಯಲ್ಲಿ ಕೈ ಗೆಲುವು ಖಚಿತ ಎನ್ನಲಾಗಿದೆ.
ಶಿವಮೊಗ್ಗ (09): ಸಮೀಕ್ಷೆ ಏನೇ ಬರಲಿ ಶಿರಾ ಮತ್ತು ಆರ್.ಆರ್.ನಗರ ಉಪಚುನಾವಣೆಯಲ್ಲಿ ಎರಡೂ ಕಡೆ ಗೆಲುವು ನಮ್ಮದೇ ಎಂದು ಮಾಜಿ ಮುಖ್ಯಮಂತ್ರಿ ವಿಪಕ್ಷ ನಾಯಕ ಸಿದ್ಧರಾಮಯ್ಯ ವಿಶ್ವಾಸ ವ್ಯಕ್ತಪಡಿಸಿದರು.
ಶಿವಮೊಗ್ಗ ನಗರಕ್ಕೆ ಆಗಮಿಸಿದ ಅವರು ಹೆಲಿಪ್ಯಾಡ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿ ವೋಟರ್ಸ್ ಸಮೀಕ್ಷೆಯಲ್ಲಿ ಬಿಜೆಪಿ ಗೆಲ್ಲುತ್ತದೆ ಎಂದು ಹೇಳಿದ್ದಾರೆ. ಆದರೆ, ಅವರು ಯಾವ ಆಧಾರದ ಮೇಲೆ ಹಾಗೆ ಹೇಳಿದ್ದಾರೋ ಗೊತ್ತಿಲ್ಲ. ನಾನು ಕೂಡಾ ಎರಡೂ ಕ್ಷೇತ್ರಗಳಲ್ಲೂ ಪ್ರಚಾರ ನಡೆಸಿದ್ದೇನೆ. ಜನರ ಒಲವು ಕಾಂಗ್ರೆಸ್ ಪರ ಇರುವುದು ನನಗೆ ಕಂಡು ಬಂದಿದೆ ಎಂದು ಹೇಳಿದರು.
ಬಿಜೆಪಿಯವರು ಪ್ರಚಾರಕ್ಕಿಂತಲೂ ದುಡ್ಡು ಕೊಟ್ಟು ಚುನಾವಣೆ ಮಾಡಿದ್ದಾರೆ. ಆದರೆ, ನಾವು ಜನರ ಬಳಿಗೆ ಹೋಗಿದ್ದೇವೆ. ಎರಡೂ ಕಡೆಯಲ್ಲೂ ನಾವೇ ಗೆಲ್ಲುತ್ತೆವೆಂಬ ವಿಶ್ವಾಸವಿದೆ ಎಂದು ಹೇಳಿದರು.
ವಿನಯ್ ಬಂಧನ ರಾಜಕೀಯ ಪ್ರೇರಿತ: ವಿನಯ್ ಕುಲಕರ್ಣಿ ಬಂಧನ ರಾಜಕೀಯ ಪ್ರೇರಿತವಾಗಿದೆ. ವಿನಯ್ ಕುಲಕರ್ಣಿ ಬಂಧನದ ಹಿಂದೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಒತ್ತಡವಿದೆ. ಪ್ರಹ್ಲಾದ್ ಜೋಶಿ ವಿರುದ್ಧ ಚುನಾವಣೆಗೆ ಸ್ಪರ್ಧಿಸಿದ್ದ ಕಾರಣಕ್ಕೆ ಈ ರೀತಿ ಸೇಡು ತೀರಿಸಿಕೊಂಡಿದ್ದಾರೆ ಎಂದು ನೇರ ಆರೋಪ ಮಾಡಿದರು.
ನಾವೀಗ ಕೆಟ್ಟ ಕಾಲದಲ್ಲಿ ಇದ್ದೇವೆ, ನಮಗೂ ಒಳ್ಳೆಯ ಕಾಲ ಬರುತ್ತೆ ಎಂದ ಕಾಂಗ್ರೆಸ್ ನಾಯಕ ..
ಸರ್ಕಾರ ಸಿಬಿಐ ತನಿಖಾ ಸಂಸ್ಥೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆ. ಹಿಂದೆ ಪೊಲೀಸರು ಚಾಜ್‌ರ್‍ಶೀಟ್ ಹಾಕಿದ್ದ ವೇಳೆ ವಿನಯ್ ಕುಲಕರ್ಣಿ ಹೆಸರಿರಲಿಲ್ಲ. ಸಿಬಿಐನವರು ತನಿಖೆ ನಡೆಸಿದಾಗ ಇವರ ಹೆಸರು ಕೇಳಿ ಬಂದಿದೆ. ಇದೊಂದು ಬೆದರಿಕೆ ತಂತ್ರವಾಗಿದ್ದು, ನಾವು ಹೆದರುವ ಪ್ರಶ್ನೆಯೇ ಇಲ್ಲ ಎಂದು ಹೇಳಿದರು.
ಬಿಹಾರ ಜನ ಮೋದಿ ವಿರುದ್ಧ: ಬಿಹಾರ ಚುನಾವಣೆ ಊಹಿಸಿದಂತೆಯೇ ಆಗಲಿದೆ. ಜನರು ಹಾಗೂ ಯುವಕರು ಈ ಬಾರಿ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ವಿರುದ್ಧವಿದ್ದಾರೆ. ಬಿಹಾರದ ಜನರು ಬದಲಾವಣೆ ಬಯಸಿದ್ದಾರೆ. ಯುವಕರು ಮೋದಿ ಸರ್ಕಾರದ ವಿರುದ್ಧ ಭ್ರಮನಿರಸನಗೊಂಡಿದ್ದಾರೆ. ಇದು ಬಿಹಾರ ಚುನಾವಣಾ ಫಲಿತಾಂಶ ಎಂದು ಹೇಳಿದರು.
ಸಿಎಂ ಬದಲಾವಣೆ ಟ್ವೀಟ್‌ಗೆ ಸಮರ್ಥನೆ: ರಾಜ್ಯದಲ್ಲಿ ಸಿಎಂ ಬದಲಾವಣೆ ಟ್ವೀಟ್ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ನನಗೆ ಈ ಬಗ್ಗೆ ಮೊದಲೇ ಮಾಹಿತಿ ಬಂದಿದ್ದು, ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರ ಕಳೆದ 6 ತಿಂಗಳಿನಿಂದ ಕೇಳಿ ಬರುತ್ತಿದೆ. ರಾಜ್ಯ ಬಿಜೆಪಿಯಲ್ಲಿ 2-3 ಗುಂಪುಗಳಿವೆ. ಸಿಎಂ ಬದಲಾಯಿಸಬೇಕೆಂದು ಕಳೆದ 6 ತಿಂಗಳಿನಿಂದ ಕಸರತ್ತು ನಡೆಯುತ್ತಲೇ ಇದೆ ಎಂದು ಹೇಳಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ಭ್ರಷ್ಟಾಚಾರ ತಾಂಡವಾಡುತ್ತಿದೆ. ಸಿಎಂ ಯಡಿಯೂರಪ್ಪ ಅಪರೇಷನ್ ಕಮಲದ ಜನಕ. ಆಪರೇಷನ್ ಕಮಲ ಹುಟ್ಟು ಹಾಕಿದ್ದೆ ಯಡಿಯೂರಪ್ಪ. 2008ರಿಂದ ಬಿಜೆಪಿಯವರೇ ಇದನ್ನು ಚಾಲ್ತಿಗೆ ತಂದಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸ್ಥಳೀಯ ಸಂಸ್ಥೆಗಳಲ್ಲೂ ಬಿಜೆಪಿಯವರು ಅಪರೇಷನ್ ಕಮಲ ಮಾಡುತ್ತಿದ್ದಾರೆ. ಅಪರೇಷನ್ ಕಮಲದ ಮೂಲಕ ಯಡಿಯೂರಪ್ಪ ಪ್ರಜಾಪ್ರಭುತ್ವದ ಕಗ್ಗೊಲೆ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.