ಗುಜರಾತ್‌ಗೆ ಸಿಕ್ಕ ಅರ್ಧ ಲಸಿಕೆಯೂ ನಮಗಿಲ್ಲ: ಡಿ.ಕೆ.ಶಿವಕುಮಾರ್
* ಕೇಂದ್ರ ಸರ್ಕಾರದಿಂದ ಗುಜರಾತ್‌ಗೆ ಮಾತ್ರ ಆದ್ಯತೆ
* ಕೇಂದ್ರದ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ವಾಗ್ದಾಳಿ
* ನಿರುದ್ಯೋಗ ಸೃಷ್ಟಿಸಿದ್ದೇ ಗುಜರಾತ್ ಮಾಡೆಲ್ಲಾ?
ಬೆಂಗಳೂರು(ಜು.17): ಕೇಂದ್ರ ಸರ್ಕಾರ ಗುಜರಾತ್‌ಗೆ ಮಾತ್ರ ಆದ್ಯತೆ ನೀಡುತ್ತಿದೆ. ಗುಜರಾತ್‌ಗೆ ನೀಡಿರುವ ಕೋವಿಡ್ ಲಸಿಕೆಯಲ್ಲಿ ಅರ್ಧದಷ್ಟನ್ನೂ ರಾಜ್ಯಕ್ಕೆ ನೀಡಿಲ್ಲ. ಆದರೆ ಬಿಜೆಪಿಯವರು ಮಾತ್ರ ಗುಜರಾತ್ ಮಾಡೆಲ್ ಎಂದು ಜಪ ಮಾಡುತ್ತಿದ್ದಾರೆ. ನಿರುದ್ಯೋಗ ಸೃಷ್ಟಿಸಿದ್ದೇ ಗುಜರಾತ್ ಮಾಡೆಲ್ಲಾ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ವ್ಯಂಗ್ಯವಾಡಿದ್ದಾರೆ.
ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಶೆಟ್ಟರ್ ನೇತೃತ್ವದಲ್ಲಿ ಅಧಿಕಾರಿಗಳ ತಂಡ ಅಧ್ಯಯನಕ್ಕೆ ಗುಜರಾತ್‌ಗೆ ತೆರಳಲು ನಮ್ಮ ಅಭ್ಯಂತರವಿಲ್ಲ. ಗುಜರಾತ್ ಮಾಡೆಲ್ ಎಲ್ಲಿದೆ. ಕೇಂದ್ರ ಸರ್ಕಾರ ಗುಜರಾತ್ ಉದ್ಧಾರ ಮಾಡಲಿ. ಅದನ್ನು ಬೇಡ ಎನ್ನುವುದಿಲ್ಲ. ಆದರೆ ಲಸಿಕೆ ವಿಚಾರದಲ್ಲಿ ಗುಜರಾತಿಗೆ ಎಷ್ಟು ಲಸಿಕೆ ನೀಡಿದ್ದಾರೋ ಅಷ್ಟನ್ನೇ ರಾಜ್ಯಕ್ಕೂ ನೀಡಲಿ ಎಂದು ಸಿಎಂ ಯಡಿಯೂರಪ್ಪ ಅವರು ಧ್ವನಿ ಎತ್ತಬೇಕು ಎಂದರು.
ರಾಜ್ಯದಲ್ಲಿ ಲಾಕ್‌ಡೌನ್, ಸೀಲ್‌ಡೌನ್ ಸಹ ಮಾಡಲಾಯಿತು. ವ್ಯಾಪಾರಿಗಳು, ಉದ್ಯಮಿಗಳ ಪರ ನಾವಿದ್ದೇವೆ ಎಂದು ಬಿಂಬಿಸಿಕೊಂಡಿದ್ದ ಬಿಜೆಪಿಯವರು ತೆರಿಗೆ ಮನ್ನಾ ಏಕೆ ಮಾಡಲಿಲ್ಲ? ನಿರುದ್ಯೋಗ ಸೃಷ್ಟಿಸಿದ್ದೇ ಗುಜರಾತ್ ಮಾಡೆಲ್ಲಾ ಎಂದು ತಿರುಗೇಟು ನೀಡಿದರು. ಈ ಬಗ್ಗೆ ಎಲ್ಲ ಸಂಸದರೂ ಮಾತನಾಡಬೇಕು. ಯಾವ ಮಾಡೆಲ್ ಆದರೂ ನೀಡಲಿ. ಆದರೆ ನಮ್ಮ ಜನರಿಗೆ ನ್ಯಾಯ ಒದಗಿಸಲಿ. ಸರಿಯಾಗಿ ಕಾನೂನು ಸುವ್ಯವಸ್ಥೆ ಕಾಪಾಡಲಿ ಎಂದು ಒತ್ತಾಯಿಸಿದರು.
ಸಿದ್ದು, ಡಿಕೆಶಿ ಇಬ್ಬರಿಗೂ ರಾಹುಲ್ ಬುಲಾವ್
ಪರಿಹಾರ ತಲುಪಿಸುವಲ್ಲಿ ನಿರ್ಲಕ್ಷ್ಯ:
ಕೋವಿಡ್‌ನಿಂದ ಮೃತಪಟ್ಟವರಿಗೆ ಸಹಜ ಸಾವು ಎಂದು ಮರಣ ಪ್ರಮಾಣ ಪತ್ರ ನೀಡಲಾಗುತ್ತಿದೆ. ಕೋವಿಡ್‌ನಿಂದ ತೊಂದರೆಗೆ ಒಳಗಾದವರಿಗೆ, ಸಾಂಪ್ರದಾಯಿಕ ವೃತ್ತಿ ಉಳಿಸಿಕೊಂಡು ಬಂದವರಿಗೆ, ಅಸಂಘಟಿತ ಕಾರ್ಮಿಕರಿಗೆ ಸರ್ಕಾರ ಘೋಷಿಸಿದ ಪರಿಹಾರ ಸಿಗುವ ಬಗ್ಗೆ ಯಾವುದೇ ಸ್ಪಷ್ಟತೆ, ಭರವಸೆ ಇಲ್ಲ. ಹೇಗೆ ಆನ್‌ಲೈನ್ ನೋಂದಣಿ ಮಾಡಬೇಕು ಎಂದು ಇವರಿಗೆ ಗೊತ್ತಿದ್ದರೆ, ಯಾಕೆ ಇವರ ಮುಂದೆ ಕೈಚಾಚುತ್ತಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದರು.