ಸಿದ್ದು, ಡಿಕೆಶಿ ಇಬ್ಬರಿಗೂ ರಾಹುಲ್ ಬುಲಾವ್
- ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿಯಿಂದ ರಾಜ್ಯ ನಾಯಕರಿಗೆ ಆಹ್ವಾನ
- ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಬುಲಾವ್
- ರಾಹುಲ್ ಗಾಂಧಿ ಅವರು ಇಬ್ಬರು ನಾಯಕರೊಂದಿಗೆ ಪ್ರತ್ಯೇಕವಾಗಿಯೂ ಸಭೆ ನಡೆಸಲಿದ್ದಾರೆ
ಬೆಂಗಳೂರು (ಜು.19): ಮಹತ್ವದ ಬೆಳವಣಿಗೆಯೊಂದರಲ್ಲಿ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ಅವರು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹಾಗೂ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ದೆಹಲಿಗೆ ಬುಲಾವ್ ನೀಡಿದ್ದಾರೆ.
ಈ ಬುಲಾವ್ ಹಿನ್ನೆಲೆಯಲ್ಲಿ ಮುಂದಿನ ವಾರ (ಬಹುತೇಕ ಬುಧವಾರ ಅಥವಾ ಗುರುವಾರ) ಉಭಯ ನಾಯಕರು ದೆಹಲಿಗೆ ತೆರಳಲಿದ್ದಾರೆ. ಈ ಸಂದರ್ಭದಲ್ಲಿ ರಾಹುಲ್ ಗಾಂಧಿ ಅವರು ಇಬ್ಬರು ನಾಯಕರೊಂದಿಗೆ ಪ್ರತ್ಯೇಕವಾಗಿಯೂ ಸಭೆ ನಡೆಸಲಿದ್ದಾರೆ.
ಮುಂದಿನ ಸಿಎಂ ವಿಚಾರಕ್ಕೆ ಸುಸ್ತು: ಸುರ್ಜೇವಾಲಾ ಶೀಘ್ರ ಬದಲು?
ಈ ಭೇಟಿ ವೇಳೆ ಕಾಂಗ್ರೆಸ್ ಪದಾಧಿಕಾರಿಗಳ ನೇಮಕ, ರಾಜ್ಯ ಉಸ್ತುವಾರಿ ಬದಲಾವಣೆ ಸೇರಿದಂತೆ ಎಲ್ಲ ವಿಚಾರಗಳ ಬಗ್ಗೆಯೂ ಚರ್ಚೆ ನಡೆಯಲಿದೆ ಎನ್ನಲಾಗಿದೆ. ಮುಖ್ಯವಾಗಿ ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ಕಾಂಗ್ರೆಸ್ ಪದಾಧಿಕಾರಗಳ ನೇಮಕ ಕುರಿತು ಚರ್ಚೆಗೆ ಹೆಚ್ಚು ಪ್ರಾಧಾನ್ಯತೆ ಸಿಗಲಿದೆ ಎನ್ನಲಾಗಿದೆ.
ವಾಸ್ತವವಾಗಿ ಕೆಪಿಸಿಸಿ ಪದಾಧಿಕಾರಿಗಳು, ಮುಂಚೂಣಿ ಘಟಕಗಳ ಅಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ಬದಲಾವಣೆ ಸೇರಿದಂತೆ ಪಕ್ಷದ ಎಲ್ಲಾ ವಿಚಾರಗಳ ಬಗ್ಗೆಯೂ ಈ ಇಬ್ಬರು ನಾಯಕರು ಪ್ರತ್ಯೇಕವಾಗಿ ಹೈಕಮಾಂಡ್‌ಗೆ ಪಟ್ಟಿಗಳನ್ನು ಕಳುಹಿಸಿದ್ದಾರೆ. ಸಾಮಾನ್ಯವಾಗಿ ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ ನಾಯಕರು ಸೇರಿದಂತೆ ರಾಜ್ಯ ಮುಖಂಡರು ಚರ್ಚೆ ನಡೆಸಿ ಒಂದು ಪಟ್ಟಿಯನ್ನು ದೆಹಲಿಗೆ ರವಾನಿಸುವುದು ಕಾಂಗ್ರೆಸ್ ಪದ್ಧತಿ. ಅದು ಈ ಬಾರಿ ಪಾಲನೆಯಾಗಿಲ್ಲ.
ಜತೆಗೆ, ಮುಂದಿನ ಮುಖ್ಯಮಂತ್ರಿ ವಿಚಾರದ ಬಗ್ಗೆ ಈ ಇಬ್ಬರು ನಾಯಕರ ನಡುವಿನ ಮುಸುಕಿನ ಗುದ್ದಾಟದ ಸಂಗತಿಯೂ ದೆಹಲಿಗೆ ತಲುಪಿದೆ. ಈ ಹಿನ್ನೆಲೆಯಲ್ಲಿ ಹೈಕಮಾಂಡ್ ಉಭಯ ನಾಯಕರಿಗೂ ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.