15 ದಿನ ಕೊಡಿ, ಪರಿಹಾರ ವಿತರಿಸೋದು ತೋರಿಸುತ್ತೇನೆ : ಡಿಕೆಶಿ
- ರಾಜ್ಯದಲ್ಲಿ ಇರುವುದು ರಿಯಲ್ ಸರ್ಕಾರ ಅಲ್ಲ, ಅದು ರೀಲ್ ಸರ್ಕಾರ
- ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ನೀಡಿರುವ ಪ್ಯಾಕೇಜ್ ರೀಲ್ ಪ್ಯಾಕೇಜ್
- ಪ್ಯಾಕೇಜ್ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಲೇವಡಿ
ಹುಬ್ಬಳ್ಳಿ (ಮೇ.31): ರಾಜ್ಯದಲ್ಲಿ ಇರುವುದು ರಿಯಲ್ ಸರ್ಕಾರ ಅಲ್ಲ, ಅದು ರೀಲ್ ಸರ್ಕಾರ. ಕೋವಿಡ್ ಹಿನ್ನೆಲೆಯಲ್ಲಿ ಸರ್ಕಾರ ನೀಡಿರುವ ಪ್ಯಾಕೇಜ್ ರೀಲ್ ಪ್ಯಾಕೇಜ್ ಎಂದು ಲೇವಡಿ ಮಾಡಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಸರ್ಕಾರ ಮೃತಪಟ್ಟವರ ಸಂಖ್ಯೆಯನ್ನು ಮುಚ್ಚಿಡುತ್ತಿದ್ದು, ಡೆತ್ ಆಡಿಟ್ ಆಗಬೇಕು ಎಂದು ಒತ್ತಾಯಿಸಿದರು.
ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೋವಿಡ್ ನಿರ್ವಹಣೆಯಲ್ಲಿ ಸಂಪೂರ್ಣ ನಿರ್ವಹಣೆಯಲ್ಲಿ ವಿಫಲವಾಗಿರುವ ಸರ್ಕಾರ ಸಿನಿಮಾ ರೀಲು ಬಿಡುವಂತೆ ಪ್ಯಾಕೇಜ್ ಘೋಷಿಸಿದೆ. ಸರಿಯಾದ ಯೋಜನೆ, ಮುಂಜಾಗ್ರತೆ, ಅಗತ್ಯ ಔಷಧ ಕೊಡದ ಕಾರಣ, ಆಕ್ಸಿಜನ್ ವ್ಯವಸ್ಥೆ ಮಾಡಿಕೊಳ್ಳದೆ ಸರ್ಕಾರ ವಿಫಲವಾಗಿದೆ ಎಂದರು.
ದೇಶದಲ್ಲೇ ಕರ್ನಾಟದಲ್ಲಿ ಅತಿ ಹೆಚ್ಚು ಜನ ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ದಿನ 100 ಜನ ಸಾಯುತ್ತಿದ್ದರೆ, ಕೇವಲ 30 ಸಂಖ್ಯೆಯನ್ನು ಮಾತ್ರ ತೋರಿಸಲಾಗುತ್ತಿದೆ. ನನ್ನ ಕ್ಷೇತ್ರದಲ್ಲೇ ಹೀಗಾಗಿದೆ. ಕೋವಿಡ್ ಎಂದು ತೋರಿಸದೆ ಸಾವು ಎಂದು ಮೃತದೇಹ ಕಳಿಸಲಾಗಿದೆ. ಅದಕ್ಕಾಗಿ ನಮ್ಮ ಕಾರ್ಯಕರ್ತರು, ಶಾಸಕರು, ಮಾಜಿ ಶಾಸಕರಿಗೆ ಡೆತ್ ಆಡಿಟ್ ಮಾಡುವಂತೆ ತಿಳಿಸಿದ್ದೇವೆ. ಸರ್ಕಾರ ಬದುಕಿದೆಯೊ, ಸತ್ತಿದೆಯೋ ಗೊತ್ತಿಲ್ಲ. ಮೃತಪಟ್ಟವರ ಸಂಖ್ಯೆಗಳನ್ನು ಸರ್ಕಾರ ಉದ್ದೇಶಪೂರ್ವಕವಾಗಿ ಮುಚ್ಚಿಡುತ್ತಿದೆ. ಸರ್ಕಾರ ನೀಡಿರುವ ಡೆತ್‌ರೇಟ್ ಬಗ್ಗೆ ತಕ್ಷಣವೇ ಆಡಿಟ್ ಆಗಬೇಕು. ಆ ವರದಿ ಬಹಿರಂಗವಾಗಬೇಕು ಎಂದು ಆಗ್ರಹಿಸಿದರು.
2-3 ದಿನದಲ್ಲಿ ಇನ್ನೊಂದು ಆರ್ಥಿಕ ಪ್ಯಾಕೇಜ್: ಸಿಎಂ ಯಡಿಯೂರಪ್ಪ! .
ಸರ್ಕಾರ ಕೃಷಿಗೆ ಘೋಷಿಸಿರುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ. ಬೇಸಿಕ್ ಕಾಮನ್ ಸೆನ್ಸ್ ಇಲ್ಲದೆ ಪರಿಹಾರ ಘೋಷಣೆ ಮಾಡಲಾಗಿದೆ. ಕಳೆದ ವರ್ಷದ ಪರಿಹಾರ ಹೆಚ್ಚಿನವರಿಗೆ ತಲುಪಿಯೇ ಇಲ್ಲ. ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಧಾರವಾಡ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಅವರೇ, ಕೋವಿಡ್ ಪರಿಹಾರವನ್ನು ಯಾರಿಗೆ ಕೊಟ್ಟಿದ್ದೀರಿ? ಆ ಕುರಿತು ನಮಗೆ ಲಿಸ್ವ್ ಕೊಡಿ. ಅವರಿಗೆ ನಾನು ಸನ್ಮಾನ ಮಾಡಿ ಹೋಗುತ್ತೇನೆ ಎಂದು ವ್ಯಂಗ್ಯವಾಡಿದರು. ಪರಿಹಾರ ವಿತರಣೆ ಕಾರ್ಯವನ್ನು ನನಗೆ ಪರಿಹಾರದ ಹಣ ಕೊಟ್ಟು ಕೇವಲ 15 ದಿನ ನೀಡಿ, ಎಲ್ಲರಿಗೂ ಹೇಗೆ ತಲುಪಿಸಬೇಕು ಎಂದು ಮಾಡಿ ತೋರಿಸುತ್ತೇವೆ. ಅದರಲ್ಲಿ ಒಂದು ರು. ಭ್ರಷ್ಟಾಚಾರವಾದರೆ ಜೈಲಿಗೆ ಹಾಕಿಬಿಡಿ ಎಂದರು.
ರಾಜ್ಯದಲ್ಲಿ ಕನಿಷ್ಠ ಶೇ. 5ರಷ್ಟುವ್ಯಾಕ್ಸಿನೇಷನ್ ಕೂಡ ಆಗಿಲ್ಲ ಎಂದು ದೂರಿದ ಡಿಕೆಶಿ, ಪ್ರಶ್ನೆಗೆ ಉತ್ತರಿಸಿ ಸರ್ಕಾರದ ಬಳಿ ಲಸಿಕೆ ಇಲ್ಲ. ಅದನ್ನು ಮುಚ್ಚಿಕೊಳ್ಳಲು ಕಾಂಗ್ರೆಸ್‌ನವರು ಲಸಿಕೆ ಬಗ್ಗೆ ಅಪಪ್ರಚಾರ ಮಾಡಿದ್ದರು ಎಂದು ಬಿಜೆಪಿಗರೇ ಅಪಪ್ರಚಾರ ಮಾಡುತ್ತಿದ್ದಾರೆ. ನಾವೇನು ಬಿಜೆಪಿಗರಂತೆ ಕೊರೋನಾಕ್ಕೆ ಆಕಳ ಸೆಗಣಿ ಹೋಮ ಹಾಗೂ ಗಂಜಲ ಬಳಸಿ ಎಂದು ಹೇಳಿ ಜನರ ದಾರಿ ತಪ್ಪಿಸಿಲ್ಲ ಎಂದು ಬೆಳಗಾವಿಯಲ್ಲಿ ಹೊಗೆ ಹಾಕಿದ್ದನ್ನು ಟೀಕಿಸಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಲಸಿಕೆಯನ್ನು ತಕ್ಷಣವೇ ಏಕೆ ತೆಗೆದುಕೊಳ್ಳಲು ಮುಂದಾಗಲಿಲ್ಲ. ಲಸಿಕೆ ಬಂದು ಎರಡು ತಿಂಗಳ ನಂತರವೇಕೆ ಲಸಿಕೆ ತೆಗೆದುಕೊಂಡರು ಎಂದು ಪ್ರಶ್ನಿಸಿದರು.
ಕೋವಿಡ್‌ನಿಂದ ಎಷ್ಟೋ ಜನರು ಕೆಲಸ ಕಳೆದುಕೊಂಡಿದ್ದಾರೆ. ಅವರಿಗೆ ಇಲ್ಲಿಯವರೆಗೂ ಯಾವುದೇ ಪರಿಹಾರ ದೊರೆತಿಲ್ಲ. ನಿರುದ್ಯೋಗಿಗಳ ಬಗ್ಗೆ ಸರ್ಕಾರದಿಂದ ಆಡಿಟ್ ನಡೆದು, ಅವರಿಗೂ ಪರಿಹಾರ ದೊರೆಯಬೇಕು ಎಂದು ಆಗ್ರಹಿಸಿದರು.
ಪರ್ಮಿಷನ್ ಕೊಡಿ; ಲಸಿಕೆ ಕೊಡ್ತೇವಿ
ಕಾಂಗ್ರೆಸ್‌ನಿಂದ ಶಾಸಕರು, ಮಾಜಿ ಶಾಸಕರ ಅನುದಾನವೆಲ್ಲ ಸೇರಿ 100 ಕೋಟಿ ಹಾಕಿ ವ್ಯಾಕ್ಸಿನೇಶನ್ ಮಾಡಿಸುತ್ತೇವೆ ಎಂದರೆ ಸರ್ಕಾರ ಅನುಮತಿ ಕೊಡುತ್ತಿಲ್ಲ. ಅನುದಾನವನ್ನು ಅಭಿವೃದ್ಧಿಗೆ ಬಳಸುವುದು ಬೇಡ. ಮೊದಲು ಜನರ ಜೀವ ಉಳಿಸೋಣ ಎಂದರೆ ಯಡಿಯೂರಪ್ಪ ಒಪ್ಪುತ್ತಿಲ್ಲ. ಭಿಕ್ಷೆ ಎತ್ತಾದರೂ ಹಣ ಸಂಗ್ರಹಿಸಿ ಲಸಿಕೆ ಖರೀದಿಸಿ ಎಂದರೆ ಒಪ್ಪಿಲ್ಲ. ನಮ್ಮ ವೈಯಕ್ತಿಕ ಕೊಡುಗೆಯೇನು? ಎಂದು ಕೇಳ್ತಿದಾರೆ. ಯಡಿಯೂರಪ್ಪ ಏನೂ ತನ್ನ ಕೈಯಿಂದ ಕೊಡ್ತಿದ್ದಾನಾ? ನಾವೇನು ಬಿಜೆಪಿ ಶಾಸಕರ ರೀತಿ ಸರ್ಕಾರಿ ಆಸ್ಪತ್ರೆ ರೀತಿ ಲಸಿಕೆಯನ್ನು ಖಾಸಗಿಗೆ ತೆಗೆದುಕೊಂಡು ಹೋಗಿಲ್ಲ. ಕೋವಿಡ್ ಲಸಿಕೆ ವಿತರಣಾ ವ್ಯವಸ್ಥೆಯನ್ನು ಕಾಂಗ್ರೆಸ್ ಕಾರ್ಯಕರ್ತರಿಂದ ಸ್ವಯಂ ಸೇವಕರಿಂದ ಮಾಡಿಸುತ್ತೇವೆ. ಭ್ರಷ್ಟಾಚಾರ ಮಾಡಿದರೆ ನಮ್ಮನ್ನು ಜೈಲಿಗೆ ಹಾಕಿ ಎಂದು ಸಿಎಂಗೆ ಡಿಕೆಶಿ ಸವಾಲು ಹಾಕಿದರು.