ಬೆಂಗಳೂರು (ಜೂ.03):  ರಾಜ್ಯದಲ್ಲಿ ಕೊರೋನಾ ಸಂಕಷ್ಟದ ಸಮಯದಲ್ಲಿ ಕಾಂಗ್ರೆಸ್‌ ಪಕ್ಷದಿಂದ ಫುಡ್‌ ಕಿಟ್‌, ಔಷಧಿ ಕಿಟ್‌ ಒದಗಿಸುವುದು ಸೇರಿದಂತೆ ತೊಂದರೆಯಲ್ಲಿರುವ ಜನರಿಗೆ ಸ್ಪಂದಿಸುತ್ತಿರುವುದಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಎಐಸಿಸಿ ನಾಯಕರಿಗೆ ಮಾಹಿತಿ ನೀಡಿದ್ದಾರೆ.

ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್‌ ಅವರು ದೇಶದ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರೊಂದಿಗೆ ನಡೆಸಿದ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದ ಅವರು, ರಾಜ್ಯದ ಎಲ್ಲಾ ಜಿಲ್ಲೆಗಳಿಗೆ ಭೇಟಿ ನೀಡುತ್ತಿದ್ದೇನೆ. ಈಗಾಗಲೇ ಧಾರವಾಡ-ಹುಬ್ಬಳ್ಳಿ ಸೇರಿದಂತೆ ಹಲವು ಜಿಲ್ಲೆಗಳಿಗೆ ಭೇಟಿ ನೀಡಿದ್ದೇನೆ. ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲಿಸಿದ್ದೇನೆ. ಅಸಂಘಟಿತ ಕಾರ್ಮಿಕರ ಸಮಸ್ಯೆ ಆಲಿಸಿದ್ದೇನೆ ಎಂದು ಹೇಳಿದ್ದಾರೆ.

ರಾಜ್ಯದಲ್ಲಿ 30 ಸಾವಿರ ದಾಟಿದ ಕೊರೋನಾ ಸಾವು ...

ರಾಜ್ಯದ ರೈತರಿಂದ ತರಕಾರಿ ಖರೀದಿಸುವಂತೆ ಮುಖ್ಯಮಂತ್ರಿಗೆ ಪತ್ರ ಬರೆದಿದ್ದೇನೆ. ನಮ್ಮ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ತಮ್ಮ ಶಕ್ತಾನುಸಾರ ತರಕಾರಿ ಖರೀದಿಸಿ ಬಡವರಿಗೆ ಹಂಚುತ್ತಿದ್ದಾರೆ. ಜನರ ಸಂಕಷ್ಟಕ್ಕೆ ಎಲ್ಲರೂ ಸ್ಪಂದಿಸುತ್ತಿದ್ದೇವೆ. ಇನ್ನು ಮುಂದೆಯೂ ಜಿಲ್ಲೆಗಳಿಗೆ ಭೇಟಿ ನೀಡಲಿದ್ದೇನೆ ಎಂದು ಎಐಸಿಸಿ ನಾಯಕರಿಗೆ ತಿಳಿಸಿದ್ದಾರೆ.

ಇನ್ನು ರಾಜ್ಯದ ನಮ್ಮ 90 ಮಂದಿ ಶಾಸಕರು ಲಸಿಕೆ ಖರೀದಿಗೆ ಅನುದಾನ ಬಿಡಲು ಮುಂದಾಗಿದ್ದೇವೆ. ಶಾಸಕರ ಅನುದಾನ 90 ಕೋಟಿ ರು. ಹಾಗೂ ಕೆಪಿಸಿಸಿಯಿಂದ 10 ಕೋಟಿ ರು. ಸೇರಿ ಒಟ್ಟು 100 ಕೋಟಿ ರು. ಅನುದಾನ ನೀಡಲು ಸಿದ್ಧರಿದ್ದೇವೆ. ಈ ಹಣದಿಂದ ಲಸಿಕೆ ಖರೀದಿಸಿ ಜನರಿಗೆ ವಿತರಿಸಲು ನಿರ್ಧರಿಸಿದ್ದು, ಈ ಸಂಬಂಧ ಸರ್ಕಾರಕ್ಕೆ ಪತ್ರವನ್ನೂ ಬರೆದಿದ್ದೇವೆ ಎಂದು ಹೇಳಿದ್ದಾರೆ.

ಪಕ್ಷದಿಂದ ರಾಜ್ಯಾದ್ಯಂತ ತೊಂದರೆಯಲ್ಲಿರುವ ಜನರಿಗೆ ಸಹಾಯ ಮಾಡುತ್ತಿದ್ದೇವೆ. ಸಹಾಯ ಮಾಡುವಂತೆ ನಮ್ಮ ಕಾರ್ಯಕರ್ತರಿಗೂ ಸೂಚನೆ ನೀಡಿದ್ದೇವೆ. ಹೀಗಾಗಿ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ತಮ್ಮ ಕ್ಷೇತ್ರದ ಜನರ ರಕ್ಷಣೆ ಮುಂದಾಗಿದ್ದಾರೆ. ಈ ನಿಟ್ಟಿನಲ್ಲಿ ಫುಡ್‌ ಕಿಟ್‌, ಮೆಡಿಕಲ್‌ ಕಿಟ್‌, ಬಡಸೋಂಕಿತರಿಗೆ ಚಿಕಿತ್ಸಾ ಸೌಲಭ್ಯ ಸೇರಿದಂತೆ ಅಗತ್ಯ ನೆರವು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಇನ್ನು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಯಲ್ಲಿರುವ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಆಸ್ಪತ್ರೆಯಿಂದಲೇ ವಿಡಿಯೋ ಸಂವಾದದಲ್ಲಿ ಪಾಲ್ಗೊಂಡಿದ್ದರು

ಏನೇನು ನೆರವು?

ಜಿಲ್ಲಾ ಕೇಂದ್ರಗಳಿಗೆ, ರೈತರ ಜಮೀನಿಗೆ ಭೇಟಿ ನೀಡಿ ಪರಿಶೀಲನೆ

ಪಕ್ಷದ ಕಾರ್ಯಕರ್ತರಿಂದ ತರಕಾರಿ ಖರೀದಿಸಿ ಬಡವರಿಗೆ ವಿತರಣೆ

ಫುಡ್‌, ಮೆಡಿಕಲ್‌ ಕಿಟ್‌, ಬಡಸೋಂಕಿತರಿಗೆ ಚಿಕಿತ್ಸಾ ಸೌಲಭ್ಯ

ಲಸಿಕೆ ಖರೀದಿಸಲು 100 ಕೋಟಿ ರು. ನೀಡುವ ಆಫರ್‌ ಸಲ್ಲಿಕೆ

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona