* ಮೇ 31ರಂದು ಹುಬ್ಬಳ್ಳಿಗೆ ಭೇಟಿ ನೀಡಿದ್ದ ಡಿ.ಕೆ. ಶಿವಕುಮಾರ್‌* ಆ್ಯಂಬುಲೆನ್ಸ್‌, ಕೋವಿಡ್‌ ಸೇವಾ ವಾಹನ, ಆಕ್ಸಿಜನ್‌ ಇತ್ಯಾದಿ ಸೌಲಭ್ಯಗಳಿಗೆ ಚಾಲನೆ ನೀಡಿದ್ದ ಡಿಕೆಶಿ* ದಂಡ ವಿಧಿಸಿರುವುದು ಖಂಡನೀಯ: ಅಲ್ತಾಫ್‌ ಹಳ್ಳೂರು  

ಹುಬ್ಬಳ್ಳಿ(ಜೂ.03): ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಭೇಟಿ ವೇಳೆ ಕೋವಿಡ್‌ ನಿಯಮ ಉಲ್ಲಂಘನೆ ಮಾಡಿದ ಆರೋಪದ ಹಿನ್ನೆಲೆಯಲ್ಲಿ ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಸಂಘಟಕರಿಗೆ 10 ಸಾವಿರ ದಂಡ ವಿಧಿಸಿದೆ.

ಮೇ 31ರಂದು ಸಂಜೆ ಹುಬ್ಬಳ್ಳಿಗೆ ಭೇಟಿ ನೀಡಿದ್ದ ಡಿ.ಕೆ. ಶಿವಕುಮಾರ್‌, ಕೇಶ್ವಾಪುರದ ಸರ್ವೋದಯ ವೃತ್ತದ ಮದರ್‌ ಥೆರೇಸಾ ಪ್ರತಿಮೆ ಬಳಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಆ್ಯಂಬುಲೆನ್ಸ್‌, ಕೋವಿಡ್‌ ಸೇವಾ ವಾಹನ, ಆಕ್ಸಿಜನ್‌ ಇತ್ಯಾದಿ ಸೌಲಭ್ಯಗಳಿಗೆ ಚಾಲನೆ ನೀಡಿದ್ದರು.

ಈ ವೇಳೆ ಸಾಮಾಜಿಕ ಅಂತರ ಕಾಯ್ದುಕೊಂಡಿರಲಿಲ್ಲ. ಜೊತೆಗೆ ಜನಜಂಗುಳಿ ಸೇರಿತ್ತು. ಈ ಹಿನ್ನೆಲೆಯಲ್ಲಿ ಅಂದೇ ಮಹಾನಗರ ಪಾಲಿಕೆ 2 ಸಾವಿರ ದಂಡ ವಿಧಿಸಿತ್ತು. ಇದೀಗ ಮತ್ತೆ 8 ಸಾವಿರ ದಂಡ ವಿಧಿಸಿ ನೋಟಿಸ್‌ ನೀಡಿದೆ. ಇದೇ ವೇಳೆ ಕೇಶ್ವಾಪುರದಲ್ಲಿ ಅನುಮತಿ ಪಡೆಯದೇ ಅಳವಡಿಸಲಾಗಿದ್ದ ಬ್ಯಾನರ್‌, ಬಂಟಿಂಗ್ಸ್‌ ತೆರವುಗೊಳಿಸಲಾಗಿದೆ. ಕಾಂಗ್ರೆಸ್‌ ಕೋವಿಡ್‌ ನಿಯಮ ಉಲ್ಲಂಘಿಸಿತ್ತು. ಈ ಹಿನ್ನೆಲೆಯಲ್ಲಿ 10 ಸಾವಿರ ದಂಡ ವಿಧಿಸಲಾಗಿದೆ ಎಂದು ಪಾಲಿಕೆ ಅಧಿಕಾರಿ ನಯನಾ ತಿಳಿಸಿದ್ದಾರೆ.

ದಷ್ಟಪುಷ್ಟರಾಗಿದ್ದ ಸಹೋದರರನ್ನು ಬಲಿಪಡೆದ ಕೊರೋನಾ

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದ್ಯಾನಗರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಜತ್‌ ಉಳ್ಳಾಗಡ್ಡಿಮಠ, ಒಂದು ಪ್ರಕರಣಕ್ಕೆ ಎರಡು ಬಾರಿ ದಂಡ ವಿಧಿಸಲಾಗಿದ್ದು, ಇದರಲ್ಲಿ ರಾಜಕೀಯ ಅಡಗಿದೆ. ಕಳೆದ ತಿಂಗಳು 30ರಂದು ಕಾರ್ಯಕ್ರಮ ನಡೆದಿದೆ. ವಲಯದ ಆರೋಗ್ಯಾಧಿಕಾರಿ ನಮಗೆ 2 ಸಾವಿರ ದಂಡ ವಿಧಿಸಿದ್ದಾರೆ. ನಾವು ಡಿಕೆಶಿ ಅವರ ಕಾರ್ಯಕ್ರಮದ ಬಗ್ಗೆ ಟ್ವಿಟ್‌ ಮಾಡಿ ಜೋಶಿ ಹಾಗೂ ಶೆಟ್ಟರ್‌ ಅವರನ್ನು ಖಂಡಿಸಿದ್ದೆವು. ಇದು 144 ಬಾರಿ ರಿಟ್ವಿಟ್‌ ಆಗಿತ್ತು. ಇದನ್ನು ಸ್ಪಾಮ್‌ ಎಂದು ಡಿಲಿಟ್‌ ಮಾಡಿಸಲಾಗಿದೆ ಎಂದು ದೂರಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ಬಂದಾಗ ಆಯೋಜಿಸಿದ್ದ ಕಾರ್ಯಕ್ರಮದ ವೇಳೆ ಕೋವಿಡ್‌ ನಿಯಮ ಉಲ್ಲಂಘನೆ ಆರೋಪದ ಮೇಲೆ ಮಹಾನಗರ ಪಾಲಿಕೆ 10 ಸಾವಿರ ದಂಡ ವಿಧಿಸಿದೆ. ನಾವು ಸಾಮಾಜಿಕ ಕಾರ್ಯ ಮಾಡುತ್ತಿದ್ದೇವೆ. ಬಿಜೆಪಿ ಅಧಿಕಾರ ದುರುಪಯೋಗ ಮಾಡಿಸಿಕೊಂಡು ನಮ್ಮ ಮೇಲೆ ಅಧಿಕಾರಿಗಳಿಂದ ದಂಡ ವಿಧಿಸಿದೆ. ಇದು ಖಂಡನೀಯ ಎಂದು ಮಹಾನಗರ ಕಾಂಗ್ರೆಸ್‌ ಸಮಿತಿ ಜಿಲ್ಲಾಧ್ಯಕ್ಷ ಅಲ್ತಾಫ್‌ ಹಳ್ಳೂರು ತಿಳಿಸಿದ್ದಾರೆ. 

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona