ಪ್ರಧಾನಿಯಿಂದ ಕ್ಷೇತ್ರದ ಜನರ ಚಿಕಿತ್ಸೆಗೆ ಅರ್ಧ ಕೋಟಿ ಹಣ ತಂದ ಸಂಸದ ಕೋಟಾ!
ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ತಮ್ಮ ಕ್ಷೇತ್ರದ 21 ಜನರ ಚಿಕಿತ್ಸೆಗಾಗಿ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಅರ್ಧ ಕೋಟಿ ರೂ. ಮಂಜೂರು ಮಾಡಿಸಿದ್ದಾರೆ. ಫಲಾನುಭವಿಗಳ ಹೆಸರು ಮತ್ತು ಹಣದ ವಿವರಗಳನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಬೆಂಗಳೂರು (ಅ.30): ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ತಮ್ಮ ಕ್ಷೇತ್ರದ 21 ಜನರ ಚಿಕಿತ್ಸೆಗಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಪರಿಹಾರ ನಿಧಿಯಿಂದ ಬರೋಬ್ಬರಿ ಅರ್ಧ ಕೋಟಿ ಹಣವನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ. ಯಾರಾರಿಗೆ ಎಷ್ಟು ಹಣ ಹೋಗಿದೆ ಎಂಬ ಪಟ್ಟಿಯನ್ನೂ ಹಂಚಿಕೊಂಡಿದ್ದಾರೆ.
ಇತ್ತೀಚೆಗೆ ಲೋಕಸಭಾ ಚುನಾವಣೆ ನಡೆದು ಸಂಸದರಾಗಿ ಆಯ್ಕೆಯಾಗಿ ಸಂಸತ್ತಿಗೆ ಹೋದ ನಾಯಕರು ನಮಗಾಗಿ ಏನು ಮಾಡಿದ್ದಾರೆ ಎಂದು ಪ್ರಶ್ನೆ ಸಹಜವಾಗಿ ಹುಟ್ಟಿಕೊಳ್ಳುತ್ತದೆ. ಕೆಲವೊಬ್ಬರು ಸಂಸತ್ತಿನಿಂದ ಕ್ಷೇತ್ರಕ್ಕೆ ಯಾವೆಲ್ಲಾ ಅನುದಾನಗಳನ್ನು ತರಬಹುದು ಎಂಬುದು ಗೊತ್ತಿಲ್ಲದೇ 5 ವರ್ಷಗಳನ್ನು ಕಳೆದುಬಿಡುತ್ತಾರೆ. ಇನ್ನು ಕೆಲವರು ಎಲ್ಲ ಸಣ್ಣಪುಟ್ಟ ಯೋಜನೆಗಳ ಬಗ್ಗೆಯೂ ಅಧಿಕಾರಿಗಳಿಂದ ಮಾಹಿತಿ ಪಡೆದು ಸಂಸತ್ತಿನಿಂದ ಸಿಗುವ ಅನುದಾನಗಳನ್ನು ತಂದು ತನ್ನ ಕ್ಷೇತ್ರದ ಜನರಿಗೆ ತಲುಪಿಸುತ್ತಾರೆ. ಇನ್ನು ಕೆಲವರು ದೊಡ್ಡ ದೊಡ್ಡ ಯೋಜನೆಗಳನ್ನು ತಮ್ಮ ಕ್ಷೇತ್ರಕ್ಕೆ ಮಂಜೂರು ಮಾಡಿಸಿಕೊಂಡು ಬಂದು, ಕೋಟ್ಯಾಂತರ ರೂ. ಯೋಜನೆಗಳನ್ನು ಸಾಕಾರಗೊಳಿಸುತ್ತಾರೆ. ಇದೀಗ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು ತನ್ನ ಕ್ಷೇತ್ರದ ಕೇವಲ 21 ಜನರ ಆರೋಗ್ಯಕ್ಕೆ ಅರ್ಧ ಕೋಟಿ ಹಣ ತಂದಿದ್ದಾರೆ.
ಇದನ್ನೂ ಓದಿ: ರಾಜ್ಯದ 4 ಯೋಜನೆಗಳಿಗೆ ಪ್ರಧಾನಿ ಮೋದಿ ಚಾಲನೆ: ಆರೋಗ್ಯ ಭಾಗ್ಯ- ವೈದ್ಯಕೀಯ ಕ್ಷೇತ್ರಕ್ಕೆ ಭಾರಿ ಕೊಡುಗೆ
ರಾಜ್ಯದಲ್ಲಿ ವಿಧಾನ ಪರಿಷತ್ ಸದಸ್ಯರಾಗಿದ್ದ ಕೋಟಾ ಶ್ರೀನಿವಾಸ ಪೂಜಾರಿ ಅವರು ಕಳೆದ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಚಿವರಾಗಿ ಕಾರ್ಯ ನಿರ್ವಹಿಸಿದ್ದರು. ಇದರ ಬೆನ್ನಲ್ಲಿಯೇ ಕಳೆದ ಲೋಕಸಭಾ ಚುನಾವಣೆಯಲ್ಲಿ ಉಡುಪಿ-ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಿಂದ ಗೆದ್ದು ಸಂಸತ್ತಿಗೆ ಹೋದ ಕೋಟಾ ಶ್ರೀನಿವಾಸ ಪೂಜಾರಿ ಅವರು ಇದೀಗ ಪುನಃ ತನ್ನ ಜನರಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನಿಧಿಯಿಂದ ಬರೋಬ್ಬರಿ 51.50 ಲಕ್ಷ ರೂ. ನಿಧಿಯನ್ನು ತಂದಿದ್ದಾರೆ. ಈ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಫಲಾನುಭವಿಗಳ ಹೆಸರಿರುವ ಮಾಹಿತಿ ಹಾಗೂ ಯಾರಾರಿಗೆ ಎಷ್ಟು ಹಣ ಹಂಚಿಕೆ ಆಗಿದೆ ಎಂಬ ವಿವರವನ್ನು ಹಂಚಿಕೊಂಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರು, ನನ್ನ ಶಿಫಾರಸ್ಸಿನ ಮೇರೆಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ ಹಲವಾರು ರೋಗಿಗಳ ಚಿಕಿತ್ಸೆಗಾಗಿ ಬಿಡುಗಡೆಗೊಂಡ ಪರಿಹಾರ ಮೊತ್ತ... ಎಂದು ಬರೆದುಕೊಂಡು ಪೋಸ್ಟ್ ಹಂಚಿಕೊಂಡಿದ್ದಾರೆ. ಈ ಪತ್ರದಲ್ಲಿ ಉಡುಪಿ-ಚಿಕ್ಕಮಗಳೂರು ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಅವರ ಶಿಫಾರಸ್ಸಿನ ಮೇರೆಗೆ ಪ್ರಧಾನಮಂತ್ರಿ ಪರಿಹಾರ ನಿಧಿಯಿಂದ 21 ಜನರಿಗೆ ಹಣವನ್ನು ಮಂಜೂರು ಮಾಡಲಾಗಿದೆ ಎಂದು ಪತ್ರದಲ್ಲಿ ತಿಳಿಸಲಾಗಿದೆ.