ಬೆಂಗಳೂರಿನಲ್ಲಿ ಹೊಸ ವರ್ಷದ ಸಂಭ್ರಮಾಚರಣೆಯ ಕೇಂದ್ರ ಈ ಬಾರಿ ಬದಲಾಗಿದೆ. ಸಾಂಪ್ರದಾಯಿಕ ತಾಣವಾದ ಬ್ರಿಗೇಡ್ ರಸ್ತೆ ಕಳೆಗುಂದಿದ್ದು, ಯುವ ಸಮೂಹ ಕೋರಮಂಗಲದತ್ತ ಮುಖ ಮಾಡಿದೆ. ಜನಸಂದಣಿಯನ್ನು ನಿಯಂತ್ರಿಸಲು ಮತ್ತು ಸುರಕ್ಷತೆ ಖಚಿತಪಡಿಸಲು ಪೊಲೀಸರು ಕೋರಮಂಗಲದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಿದ್ದಾರೆ.
ಬೆಂಗಳೂರು (ಡಿ.31): ಸಿಲಿಕಾನ್ ಸಿಟಿಯಲ್ಲಿ ಹೊಸ ವರ್ಷದ ಸಂಭ್ರಮದ ನಡುವೆಯೇ ಕೋರಮಂಗಲದಲ್ಲಿ ಪಡ್ಡೆಹೈಕಳ ಅಬ್ಬರ ಜೋರಾಗಿದ್ದು, ನಗರದ ಸಾಂಪ್ರದಾಯಿಕ ಪಾರ್ಟಿ ತಾಣವಾದ ಬ್ರಿಗೇಡ್ ರಸ್ತೆ ಈ ಬಾರಿ ಕಳೆಗುಂದಿದಂತೆ ಕಾಣುತ್ತಿದೆ.
ಮಹಿಳೆ ಜೊತೆ ಟೋಯಿಂಗ್ ಚಾಲಕನ ಅಸಭ್ಯ ವರ್ತನೆ
ಎಲೆಕ್ಟ್ರಾನಿಕ್ ಸಿಟಿಯ ನೀಲಾದ್ರಿ ನಗರದಲ್ಲಿ ಅಹಿತಕರ ಘಟನೆಯೊಂದು ನಡೆದಿದೆ. ರಸ್ತೆಯಲ್ಲಿ ವಾಹನಗಳನ್ನು ತೆರವುಗೊಳಿಸುತ್ತಿದ್ದ ಟೋಯಿಂಗ್ ವಾಹನವೊಂದು ಪಾದಚಾರಿ ಮಹಿಳೆಗೆ ತಗುಲಿದೆ. ಇದನ್ನು ಮಹಿಳೆ ಪ್ರಶ್ನಿಸಿದಾಗ ಟೋಯಿಂಗ್ ವಾಹನ ಚಾಲಕ ಆಕೆಯೊಂದಿಗೆ ದುರ್ವರ್ತನೆ ತೋರಿ ಕಿರಿಕ್ ಮಾಡಿದ್ದಾನೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿ ಇಬ್ಬರನ್ನೂ ಕಳುಹಿಸಿಕೊಟ್ಟಿದ್ದಾರೆ.
ಬ್ರಿಗೇಡ್ ರಸ್ತೆಯಲ್ಲಿ ಈ ಬಾರಿ ಸಂಚಾರ ಮುಕ್ತ!
ಸಾಮಾನ್ಯವಾಗಿ ಸಂಜೆ 7 ಅಥವಾ 8 ಗಂಟೆಗೆಲ್ಲಾ ವಾಹನ ಸಂಚಾರಕ್ಕೆ ಬಂದ್ ಆಗುತ್ತಿದ್ದ ಬ್ರಿಗೇಡ್ ರಸ್ತೆಯಲ್ಲಿ ಈ ಬಾರಿ ಅಚ್ಚರಿಯ ಚಿತ್ರಣ ಕಂಡುಬಂದಿದೆ. ರಾತ್ರಿ 10:40 ಕಳೆದರೂ ವಾಹನಗಳ ಸಂಚಾರ ಮುಂದುವರಿದಿದೆ. ನಿರೀಕ್ಷಿತ ಮಟ್ಟದಲ್ಲಿ ಜನ ಸೇರದ ಕಾರಣ ಪೊಲೀಸರು ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ಜನರು ಕೇವಲ ಫುಟ್‌ಪಾತ್‌ಗಳಲ್ಲಿ ಮಾತ್ರ ಓಡಾಡುತ್ತಿದ್ದು, ಈ ಬಾರಿ ಬ್ರಿಗೇಡ್ ರಸ್ತೆಯ ಕ್ರೇಜ್ ಸ್ವಲ್ಪ ಕಡಿಮೆಯಾದಂತೆ ತೋರುತ್ತಿದೆ.
ನ್ಯೂ ಇಯರ್ ಸೆಲೆಬ್ರೇಷನ್‌ಗೆ ಈಗ ಕೋರಮಂಗಲವೇ 'ಹಾಟ್ ಸ್ಪಾಟ್'
ಎಂ.ಜಿ ರೋಡ್ ಮತ್ತು ಬ್ರಿಗೇಡ್ ರಸ್ತೆಗೆ ಗುಡ್ ಬೈ ಹೇಳಿರುವ ಯುವ ಸಮೂಹ ಈ ಬಾರಿ ಕೋರಮಂಗಲಕ್ಕೆ ಲಗ್ಗೆ ಇಟ್ಟಿದೆ. ನಗರದ ಎಲ್ಲಾ ಭಾಗಗಳಿಗಿಂತಲೂ ಅತಿ ಹೆಚ್ಚು ಜನಸಂದಣಿ ಕೋರಮಂಗಲದಲ್ಲಿ ಕಂಡುಬರುತ್ತಿದೆ. ಕಿಲೋಮೀಟರ್‌ಗಟ್ಟಲೆ ಯುವಕ-ಯುವತಿಯರ ಜನಸಾಗರವೇ ಹರಿದು ಬರುತ್ತಿದ್ದು, ಸಂಭ್ರಮಾಚರಣೆಗೆ ಕೋರಮಂಗಲ ಹೊಸ ಕೇಂದ್ರಬಿಂದುವಾಗಿ ಮಾರ್ಪಟ್ಟಿದೆ.
ಕೋರಮಂಗಲದಲ್ಲಿ ಪೊಲೀಸರ ಹರಸಾಹಸ: ಖಾಕಿ ಸರ್ಪಗಾವಲು
ನಿಯಂತ್ರಣಕ್ಕೆ ಸಿಗದಂತೆ ಹರಿದು ಬರುತ್ತಿರುವ ಜನರನ್ನು ಸಾಲಿನಲ್ಲಿ ಕಳುಹಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ. ಸುರಕ್ಷತೆಗಾಗಿ ವಿಶೇಷ ಎಂಟ್ರಿ ಮತ್ತು ಎಕ್ಸಿಟ್ ಗೇಟ್‌ಗಳನ್ನು ನಿರ್ಮಿಸಲಾಗಿದೆ. ಮೆಟಲ್ ಡಿಟೆಕ್ಟರ್, ಬಾಂಬ್ ಸ್ಕ್ವಾಡ್, ಸಿಸಿಟಿವಿ ಹಾಗೂ ಡ್ರೋನ್ ಕ್ಯಾಮೆರಾಗಳ ಮೂಲಕ ಪ್ರತಿಯೊಂದು ಚಲನವಲನದ ಮೇಲೆ ಹದ್ದಿನ ಕಣ್ಣು ಇರಿಸಲಾಗಿದೆ.
ಮಹಿಳಾ ಸುರಕ್ಷತೆಗೆ ಪೊಲೀಸ್ ಪಡೆಯ ಕವಚ
ಕೋರಮಂಗಲದಲ್ಲಿ ಅತಿ ಹೆಚ್ಚು ಯುವತಿಯರು ಮತ್ತು ಮಹಿಳೆಯರು ಸೇರಿರುವ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮಹಿಳಾ ಪೊಲೀಸ್ ಪಡೆಯನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಲಾಗಿದೆ. ಪಬ್ ಮತ್ತು ರೆಸ್ಟೋರೆಂಟ್‌ಗಳ ಬಳಿ ವಿಶೇಷ ನಿಗಾ ವಹಿಸಲಾಗಿದ್ದು, ಸಂಭ್ರಮಾಚರಣೆಯು ಶಾಂತಿಯುತವಾಗಿ ನಡೆಯುವಂತೆ ಖಾಕಿ ಪಡೆ ಸರ್ಪಗಾವಲು ಏರ್ಪಡಿಸಿದೆ.
ಎಂಜಿ ರೋಡ್‌ನಲ್ಲಿ ಇಂದು ಖಾಕಿ ಫುಲ್ ಅಲರ್ಟ್!
ಪ್ರತಿಯೊಬ್ಬರನ್ನೂ ಪಿನ್ ಟು ಪಿನ್ ಚೆಕ್ ಮಾಡುತ್ತಿದ್ದಾರೆ. ಜೇಬು ತಿರುವಿ, ಬ್ಯಾಗ್ ತೆರೆದು, ಪಾರ್ಸಲ್‌ಗಳನ್ನು ಒಂದೊಂದು ಆಯಿಟಂ ಆಗಿ ಪರಿಶೀಲಿಸುತ್ತಿದ್ದಾರೆ. ಯುವಕರು ಒಳಗೆ ಹೋಗುವ ಮುನ್ನವೇ ಪ್ರತ್ಯೇಕ ಲೈನ್‌ನಲ್ಲಿ ನಿಲ್ಲಿಸಿ, ದೇಹದ ಎಲ್ಲ ಭಾಗಗಳನ್ನೂ ಸೂಕ್ಷ್ಮವಾಗಿ ತಪಾಸಣೆ. ನೀರಿನ ಬಾಟಲ್ ತೆಗೆದುಕೊಂಡು ಬಂದವರ ಬಾಟಲ್ ತೆರೆಸಿ ಆಘ್ರಾಣಿಸಿ, ಒಳಗೆ ಎಣ್ಣೆ ಮಿಕ್ಸ್ ಮಾಡಿಕೊಂಡು ಬಂದಿರುವ ಯುವಕರನ್ನು ಒಳಗೆ ಬಿಡದೆ ಲಾಕ್ ಮಾಡಿದ್ದಾರೆ.
ಗುಟ್ಕಾ, ಸಿಗರೇಟ್, ಚಿಕ್ಕ ಚಿಕ್ಕ ಪ್ಯಾಕೆಟ್‌ಗಳನ್ನು ತಂದವರ ಖಾತರಿ ಇಲ್ಲ!
ಸಾವಿರಾರು ಸಂಖ್ಯೆಯಲ್ಲಿ ಪಾರ್ಟಿ ಪ್ರಿಯರು ಎಂಜಿ ರೋಡ್ ಕಡೆಗೆ ಧಾವಿಸಿದ್ದರೂ, ಇಂದು ಎಲ್ಲರ ಮುಖದಲ್ಲೂ ಸ್ವಲ್ಪ ಭಯ, ಸ್ವಲ್ಪ ತಾಳ್ಮೆ. ಒಬ್ಬ ಯುವಕ ಜೇಬಿನಿಂದ ಚಿಕ್ಕ ಪ್ಲಾಸ್ಟಿಕ್ ಪ್ಯಾಕೆಟ್ ತೆಗೆದುಕೊಂಡು ಬಂದಾಗ ಪೊಲೀಸ್ ಒಬ್ಬರು 'ಇದೇನಯ್ಯಾ?' ಅಂದು ತೆಗೆದುಕೊಂಡರು. ಹಿಂದಿನ ವಾರದಂತೆ ಇಂದು ಯಾರೂ ಸುಲಭವಾಗಿ ಒಳಗೆ ನುಗ್ಗಲಾರರು. ಖಾಕಿಯ ಈ ಗಟ್ಟಿ ನಿಲುವು ನೋಡಿ ಪಾರ್ಟಿ ಮೂಡ್ ಸ್ವಲ್ಪ ತಣ್ಣಗಾಗಿದೆ. ಆದರೂ ರಾತ್ರಿ ಇನ್ನೂ ದೊಡ್ಡದಾಗಿ ಬರಲಿದೆ... ಎಂಜಿ ರೋಡ್ ಇಂದು ತನ್ನದೇ ಆದ ಥ್ರಿಲ್ಲರ್ ಸಿನಿಮಾ ಆಗಿದೆ!


