ಕೋರಮಂಗಲ ಕೆಫೆ ಅಗ್ನಿ ದುರಂತದಲ್ಲಿ ಅಧಿಕಾರಿಗಳ ನಿರ್ಲಕ್ಷ್ಯ, ಸೂಕ್ತ ಕ್ರಮ: ಗೃಹ ಸಚಿವ ಪರಮೇಶ್ವರ್
ಕೋರಮಂಗಲದ ಮಡ್ ಕೆಫೆ ಅಗ್ನಿ ದುರಂತ ಬೆನ್ನಲ್ಲೆ ನಗರ ವ್ಯಾಪ್ತಿಯ ಎಲ್ಲ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಅಗ್ನಿ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಬೆಂಗಳೂರು (ಅ.20): ಕೋರಮಂಗಲದ ಮಡ್ ಕೆಫೆ ಅಗ್ನಿ ದುರಂತ ಬೆನ್ನಲ್ಲೆ ನಗರ ವ್ಯಾಪ್ತಿಯ ಎಲ್ಲ ಹೋಟೆಲ್ ಹಾಗೂ ರೆಸ್ಟೋರೆಂಟ್‌ಗಳಲ್ಲಿ ಅಗ್ನಿ ಸುರಕ್ಷತೆ ಬಗ್ಗೆ ಪರಿಶೀಲನೆ ನಡೆಸುವಂತೆ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಕೋರಮಂಗಲದ ಫೋರಂ ಮಾಲ್ ಸಮೀಪ ಮಡ್ ಕೆಫೆಯಲ್ಲಿ ಸಂಭವಿಸಿದ್ದ ಅಗ್ನಿ ದುರಂತ ಸ್ಥಳಕ್ಕೆ ಗುರುವಾರ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಫೆಯಲ್ಲಿ ಯಾವ ರೀತಿ ಸಿಲಿಂಡರ್ ಸ್ಫೋಟವಾಗಿದೆ ಎಂಬುದು ಖಚಿತವಾಗಿಲ್ಲ. ಕೆಫೆಯಲ್ಲಿ ದಾಸ್ತಾನು ಮಾಡಿದ್ದ ಸಿಲಿಂಡರ್‌ಗಳು ಒಂದರ ನಂತರ ಒಂದು ಸಿಡಿದು ಭಾರಿ ಅಗ್ನಿ ಅವಘಡ ಸಂಭವಿಸಿದೆ ಎಂದರು.
ಈ ಕಟ್ಟಡದಲ್ಲಿ ಹೋಟೆಲ್ ನಡೆಸಲು ಮಾತ್ರ ಮಾಲಿಕರಿಗೆ ಅನುಮತಿ ನೀಡಲಾಗಿತ್ತು. ಆದರೆ ಕಾನೂನುಬಾಹಿರವಾಗಿ ಹುಕ್ಕಾ ಬಾರ್ ಅನ್ನು ಕೆಫೆ ಮಾಲೀಕ ನಡೆಸುತ್ತಿದ್ದರು. ಅತ್ತಿಬೆಲೆ ಪಟಾಕಿ ಗೋದಾಮು ಹಾಗೂ ಕೋರಮಂಗಲದ ಕೆಫೆಯಲ್ಲಿ ನಡೆದಿರುವ ಅಗ್ನಿ ದುರಂತ ಘಟನೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ ಎಂದು ತಿಳಿಸಿದರು.
ಬೆಂಗಳೂರಲ್ಲಿ ಪದೇಪದೆ ಬೆಂಕಿ ಅವಘಡ: ಕಠಿಣ ಕ್ರಮಕ್ಕೆ ಮುಂದಾದ ಅಗ್ನಿಶಾಮಕ ದಳ
ಈ ದುರಂತಗಳ ಹಿನ್ನೆಲೆಯಲ್ಲಿ ಬೆಂಗಳೂರಿನ ಹೋಟೆಲ್, ಕೆಫೆಗಳು ಹಾಗೂ ರೆಸ್ಟೋರೆಂಟ್‌ಗಳಲ್ಲಿ ಅಗ್ನಿ ಸುರಕ್ಷತೆ ಸಂಬಂಧ ತಪಾಸಣೆ ನಡೆಸಲಾಗುತ್ತದೆ. ಕೆಲವರ ತಪ್ಪಿನಿಂದ ಅಮಾಯಕರು ಪ್ರಾಣ ಕಳೆದು ಕೊಳ್ಳುತ್ತಾರೆ. ಈ ರೀತಿಯ ಘಟನೆಗಳು ಮರುಕಳಿಸದೆ ಎಚ್ಚರಿಕೆ ವಹಿಸಲಾಗುತ್ತದೆ. ಬೆಂಗಳೂರಿನಲ್ಲಿ ಪಟಾಕಿ ಮಾರಾಟ ಸಂಬಂಧ ಕೆಲ ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೊಳಿಸಲಾಗಿದೆ ಎಂದು ಹೇಳಿದರು.
\Bಅಧಿಕಾರಿಗಳ ನಿರ್ಲಕ್ಷ್ಯ:\B ಕೋರಮಂಗಲ ಕೆಫೆಯಲ್ಲಿ ಅಗ್ನಿ ದುರಂತ ಪ್ರಕರಣದಲ್ಲಿ ಬಿಬಿಎಂಪಿ ಅಧಿಕಾರಿಗಳ ನಿರ್ಲಕ್ಷ್ಯತನ ಕಂಡು ಬಂದಿದೆ. ಹೀಗಾಗಿ ಕರ್ತವ್ಯಲೋಪವೆಸಗಿರುವ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಅತ್ತಿಬೆಲೆ ಪಟಾಕಿ ದುರಂತ 14 ಕಾರ್ಮಿಕರು ಬಲಿ, ಮೃತರಲ್ಲಿ 8 ಮಂದಿ ಒಂದೇ ಗ್ರಾಮದ ವಿದ್ಯಾರ್ಥಿಗಳು!
ಕೆಫೆಗೆ ಅನುಮತಿ ನೀಡಿದ್ದ ಬಿಬಿಎಂಪಿ ಅಧಿಕಾರಿಗಳು, ಆ ಕಟ್ಟಡದಲ್ಲಿ ಅಕ್ರಮವಾಗಿ ಹುಕ್ಕಾ ಬಾರ್ ನಡೆಸುತ್ತಿದ್ದರು ಪರಿಶೀಲಿಸದೆ ಉದಾಸೀನತೆ ತೋರಿದ್ದಾರೆ. ಇದರಿಂದ ಅನಾಹುತ ಸಂಭವಿಸಲು ಕಾರಣರಾಗಿದ್ದಾರೆ ಎಂದು ಕಿಡಿಕಾರಿದರು.