ಕೊಪ್ಪಳ(ಮಾ.17): ಪ್ರೀತಿಗೆ ಜಗತ್ತು ಗೆಲ್ಲುವ ಶಕ್ತಿ ಇದೆ ಅಂತಾರೆ. ಅಂತದ್ದರಲ್ಲಿ ಸ್ವಾಮೀಜಿಯೊಬ್ಬರ ಮನಸ್ಸು ಬದಲಾಯಿಸಲು ಸಾಧ್ಯವಿಲ್ಲವೇ?. ಇದೆ ಅಂತಾರೆ ಕೊಪ್ಪಳದ ಸಿದ್ದೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ.

ಹೌದು, ಪ್ರೀತಿಯ ಬಲೆಗೆ ಸಿಕ್ಕ ಕೊಪ್ಪಳದ ಅಳವಂಡಿ ಗ್ರಾಮದ ಸಿದ್ದೇಶ್ವರ ಮಠದ ಸಿದ್ಧಲಿಂಗ ಸ್ವಾಮೀಜಿ, ಪೀಠತ್ಯಾಗ ಮಾಡಿದ್ದಲ್ಲದೆ ಅವರ ಗೆಳತಿಯೊಡನೆ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುವ ಮೂಲಕ ಸುದ್ದಿಗೆ ಗ್ರಾಸವಾಗಿದ್ದಾರೆ.

ಕಳೆದ ಜನವರಿಯಿಂದ ಪೀಠ ಬಿಟ್ಟು ನಾಪತ್ತೆಯಾಗಿದ್ದ ಸಿದ್ಧಲಿಂಗ ಸ್ವಾಮೀಜಿ, ತಮ್ಮ ಗೆಳತಿಯೊಡನೆ ಸೇರಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ಚಿತ್ರ ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿದೆ.

ಮುಂಡರಗಿ ಕಾಲೇಜಿನಲ್ಲಿ ಪಾಠಮಾಡಲು ತೆರಳುತ್ತಿದ್ದ ಸ್ವಾಮೀಜಿ ಅದೇ ಕಾಲೇಜಿನ ವಿದ್ಯಾರ್ಥಿನಿಯೊಬ್ಬಳನ್ನು ಮೆಚ್ಚಿಕೊಂಡಿದ್ದರು. ಸ್ವಾಮೀಜಿ ಆ ಯುವತಿಗಾಗಿ ಪೀಠ ತ್ಯಾಗ ಮಾಡಿ ನಾಪತ್ತೆಯಾಗಿದ್ದು, ಈ ಕುರಿತಂತೆ ಭಕ್ತರು ಪ್ರಶ್ನಿಸಿದಾಗ ಮಠದ ಆಡಳಿತ ಮಂಡಳಿ ಮೌನಕ್ಕೆ ಶರಣಾಗಿತ್ತು.

ಮೂರು ತಿಂಗಳ ಬಳಿಕ ಈಗ ಸ್ವಾಮೀಜಿ ಹಾಗೂ ಯುವತಿ ಜತೆಯಾಗಿ ಹುಟ್ಟುಹಬ್ಬದ ಕೇಕ್ ಕತ್ತರಿಸುತ್ತಿರುವ ಫೋಟೋ ಸಾಮಾಜಿಕ ತಾಣಗಳಲ್ಲಿ ಕಾಣಿಸಿಕೊಂಡಿದ್ದು ವೈರಲ್ ಆಗಿದೆ.