‘ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ಕೋಲಾರ ಜಿಲ್ಲೆಯನ್ನು ನಿರ್ಲಕ್ಷಿಸುತ್ತಿವೆ, ಜಿಲ್ಲೆಯಲ್ಲಿ ಇಂದಿಗೂ ಕುಡಿಯುವ ನೀರಿಗು ತತ್ವಾರ ನೀಗಿಲ್ಲ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಳಬಾಗಿಲು ಕ್ಷೇತ್ರದ ಜೆಡಿಎಸ್‌ ಶಾಸಕ ಸಮೃದ್ಧಿ ಮಂಜುನಾಥ್‌, ‘ಇದರ ವಿರುದ್ಧ ಇಡೀ ಜಿಲ್ಲೆ ಒಗ್ಗಟ್ಟಾಗುತ್ತಿದ್ದು ನಾವು ಆಂಧ್ರಪ್ರದೇಶಕ್ಕೆ ಸೇರಲು ತೀರ್ಮಾನ ಮಾಡುತ್ತೇವೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ವಿಧಾನಸಭೆ (ಜು.13) : ‘ಯಾವ ಸರ್ಕಾರ ಅಧಿಕಾರಕ್ಕೆ ಬಂದರೂ ಕೋಲಾರ ಜಿಲ್ಲೆಯನ್ನು ನಿರ್ಲಕ್ಷಿಸುತ್ತಿವೆ, ಜಿಲ್ಲೆಯಲ್ಲಿ ಇಂದಿಗೂ ಕುಡಿಯುವ ನೀರಿಗು ತತ್ವಾರ ನೀಗಿಲ್ಲ’ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಮುಳಬಾಗಿಲು ಕ್ಷೇತ್ರದ ಜೆಡಿಎಸ್‌ ಶಾಸಕ ಸಮೃದ್ಧಿ ಮಂಜುನಾಥ್‌, ‘ಇದರ ವಿರುದ್ಧ ಇಡೀ ಜಿಲ್ಲೆ ಒಗ್ಗಟ್ಟಾಗುತ್ತಿದ್ದು ನಾವು ಆಂಧ್ರಪ್ರದೇಶಕ್ಕೆ ಸೇರಲು ತೀರ್ಮಾನ ಮಾಡುತ್ತೇವೆ’ ಎಂದು ವಿವಾದಾತ್ಮಕ ಹೇಳಿಕೆ ನೀಡಿದರು.

ಇದರ ಬೆನ್ನಲ್ಲೇ ಪಕ್ಷಬೇಧ ಮರೆತು ಬಹುತೇಕ ಸದಸ್ಯರು ಮಂಜುನಾಥ್‌ ವಿರುದ್ಧ ಹರಿಹಾಯ್ದ ನಂತರ ಮಂಜುನಾಥ್‌ ಅವರು ಸದನದ ಕ್ಷಮೆಯಾಚಿಸಿದರು.

ಬುಧವಾರ ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲೆ ಮಾತನಾಡಿದ ಸಮೃದ್ಧಿ ಮಂಜುನಾಥ್‌, ‘ಕೋಲಾರಕ್ಕೆ ಎತ್ತಿನಹೊಳೆ ನೀರು ಕೊಡುವುದಾಗಿ ಕಳೆದ 18 ವರ್ಷಗಳಿಂದ ಹೇಳುತ್ತಲೇ ಇದ್ದಾರೆ. ಇದನ್ನೂ ಬರಲಿಲ್ಲ. ಕಳೆದ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಕೆ.ಸಿ.ವ್ಯಾಲಿ ಮತ್ತು ಎಚ್‌.ಎನ್‌.ವ್ಯಾಲಿ ಮೂಲಕ ಬೆಂಗಳೂರಿನ ಕೊಳಚೆ ನೀರನ್ನು ಕ್ರಮವಾಗಿ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕೆರೆಗಳಿಗೆ ಹರಿಸುತ್ತಿದ್ದಾರೆ. ಇದರಿಂದ ಎರಡೂ ಜಿಲ್ಲೆಗಳ ಜನರ ಪರಿಸ್ಥಿತಿ ಹೇಳತೀರದಾಗಿದೆ. ಕುಡಿಯುವ ನೀರು, ಬೆಳೆಯುವ ಬೆಳೆ ವಿಷಯವಾಗುತ್ತಿದೆ. ಎರಡೂ ಜಿಲ್ಲೆಗಳ ಜನರ ಸ್ಥಿತಿ ಮುಂದಿನ ದಿನಗಳಲ್ಲಿ ಕರಾವಳಿಯ ಎಂಡೋಸಲ್ಫಾನ್‌ ದುರಂತದಂತೆ ಆಗಬಹುದು’ ಎಂದು ಆತಂಕ ವ್ಯಕ್ತಪಡಿಸಿದರು.

‘ಅಡ್ಜಸ್ಟ್‌ಮೆಂಟ್‌’ ಸಾಬೀತಾದ್ರೆ ನಿವೃತ್ತಿ: ಸಿದ್ದು ಸವಾಲು

‘ಎಲ್ಲ ಸರ್ಕಾರಗಳೂ ನಮ್ಮ ಜಿಲ್ಲೆಯನ್ನು ನಿರ್ಲಕ್ಷಿಸಿವೆ. ಯಾವ ಸರ್ಕಾರ ಬಂದರೂ ನಮ್ಮ ಜಿಲ್ಲೆಗಳಿಗೆ ಶುದ್ಧ ಕುಡಿಯುವ ನೀರು ಸಿಕ್ಕಿಲ್ಲ. ಹಾಗಾಗಿ ನಾವು ಇಡೀ ಜಿಲ್ಲೆ ಒಗ್ಗಟ್ಟಾಗುತ್ತಿದ್ದು ನಾವು ಆಂಧ್ರಪ್ರದೇಶಕ್ಕೆ ಸೇರಲು ತೀಮಾನ ಮಾಡುತ್ತೇವೆ’ ಎಂದರು.

ತಕ್ಷಣ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಆಡಳಿತ ಪಕ್ಷದ ಸದಸ್ಯ ನರೇಂದ್ರಸ್ವಾಮಿ, ‘ನೀವು ರಾಜ್ಯಕ್ಕೆ ಧಕ್ಕೆ ತರುವ ಮಾತುಗಳನ್ನು ಆಡಬೇಡಿ’ ಎಂದರು. ಇದಕ್ಕೆ ಸಚಿವ ಪ್ರಿಯಾಂಕ್‌ ಖರ್ಗೆ ಕೂಡ ದನಿಗೂಡಿಸಿ, ‘ನೀವು ಈ ಸದನದ ಜವಾಬ್ದಾರಿಯುತ ಸದಸ್ಯರು, ನಿಮ್ಮ ನೋವು ಅರ್ಥವಾಗುತ್ತದೆ. ಅದನ್ನು ವ್ಯಕ್ತಪಡಿಸಲು ನಿಮಗೆ ಹಕ್ಕಿದೆ. ಆದರೆ, ರಾಜ್ಯದ ಹಿತಕ್ಕೆ ಹಾನಿಯಾಗುವಂತಹ ಹೇಳಿಕೆ ನೀಡುವುದು ಸರಿಯಲ್ಲ’ ಎಂದರು.

ಬಳಿಕ ಮಾತನಾಡಿದ ಸಮೃದ್ಧಿ ಮಂಜುನಾಥ್‌, ‘ನಾನು ಯಾರಿಗೂ ನೋವುಂಟು ಮಾಡಲು ಈ ಮಾತು ಹೇಳಲಿಲ್ಲ. ನನ್ನ ಜಿಲ್ಲೆಯ ಜನರ ಕೂಗು ಅದು. ನಾನು ತಪ್ಪು ಮಾತನಾಡಿದ್ದರೆ ಸದನದ ಕ್ಷಮೆ ಕೇಳುತ್ತೇನೆ. ಆದರೆ, ಕೆ.ಸಿ.ವ್ಯಾಲಿ ಮತ್ತು ಎಚ್‌.ಎನ್‌.ವ್ಯಾಲಿಯ ನೀರನ್ನು ಮೂರನೇ ಹಂತದ ಶುದ್ಧೀಕರಿಸದೆ ಹೋದರೆ ಜಿಲ್ಲೆಯ ಜನ ವಿಷದ ನೀರು ಕುಡಿಯುವಂತಾಗುತ್ತದೆ. ಇದನ್ನು ಸರಿಪಡಿಸಲು ಸರ್ಕಾರ ಕ್ರಮ ವಹಿಸಬೇಕು’ ಎಂದು ಮನವಿ ಮಾಡಿದರು.

ಯಾವುದೇ ಕಾರಣಕ್ಕೂ ಯತ್ನಾಳ್ ಪ್ರತಿಪಕ್ಷ ನಾಯಕ ಆಗಲ್ಲ ಎಂದ ಸಿಎಂ: 100% ನಾನೇ ವಿಪಕ್ಷ ನಾಯಕ ಎಂದ ಯತ್ನಾಳ್!