ಮುಂದುವರಿದ ಹಗ್ಗ ಜಗ್ಗಾಟ: ಮುಷ್ಕರ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದ ಕೋಡಿಹಳ್ಳಿ
ವೇತನ ಕಡಿತ ಮಾಡಿದ್ರೆ ಹಬ್ಬ ಮಾಡೋದು ಬೇಡವೆ?| ಸರ್ಕಾರ ಆರನೇ ವೇತನ ಆಯೋಗ ಜಾರಿ ಮಾಡುವುದಿಲ್ಲ. ಬದಲಾಗಿ ಶೇ.8ರಷ್ಟು ವೇತನ ನೀಡುತ್ತೇವೆ ಎಂದು ಹೇಳುತ್ತಿದೆ. ಈ ರೀತಿ ನೌಕರರನ್ನು ಬೆದರಿಸಿ ಕೆಲಸ ಮಾಡಿಸಬಾರದು: ಕೋಡಿಹಳ್ಳಿ|
ಬೆಂಗಳೂರು(ಏ.09): ರಾಜ್ಯ ಸರ್ಕಾರ ನೌಕರರ ಮುಷ್ಕರವನ್ನು ನೆಪವಾಗಿಟ್ಟುಕೊಂಡು ಸಾರಿಗೆ ಸಂಸ್ಥೆಗಳ ಖಾಸಗೀಕರಣಕ್ಕೆ ಪ್ರಯತ್ನಿಸುತ್ತಿರುವುದು ಸರಿಯಲ್ಲ. ಮುಷ್ಕರ ಕೈಬಿಡುವ ಪ್ರಶ್ನೆಯಿಲ್ಲ. ಶಾಂತಿಯುತ ಹೋರಾಟ ಮುಂದುವರಿಯಲಿದೆ ಎಂದು ರಾಜ್ಯ ರಸ್ತೆ ಸಾರಿಗೆ ನೌಕರರ ಕೂಟದ ಗೌರವಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಹೇಳಿದ್ದಾರೆ.
ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರ ಆರನೇ ವೇತನ ಆಯೋಗ ಜಾರಿ ಮಾಡುವುದಿಲ್ಲ. ಬದಲಾಗಿ ಶೇ.8ರಷ್ಟು ವೇತನ ನೀಡುತ್ತೇವೆ ಎಂದು ಹೇಳುತ್ತಿದೆ. ಈ ರೀತಿ ನೌಕರರನ್ನು ಬೆದರಿಸಿ ಕೆಲಸ ಮಾಡಿಸಬಾರದು. ಯುಗಾದಿ ಹಬ್ಬದ ಹಿನ್ನೆಲೆಯಲ್ಲಿ ಇತರೆ ನಿಗಮಗಳ ನೌಕರರಿಗೆ ಹಬ್ಬಕ್ಕಾಗಿ ಬೋನಸ್ ನೀಡಲಾಗುತ್ತಿದೆ. ಆದರೆ, ಸಾರಿಗೆ ನಿಗಮದ ನೌಕರರಿಗೆ ಮಾರ್ಚ್ ತಿಂಗಳ ವೇತನ ಕಡಿತ ಮಾಡಲಾಗುತ್ತಿದೆ. ಹಾಗಾದರೆ, ಯುಗಾದಿ ಹಬ್ಬ ಮಾಡುವುದು ಹೇಗೆ? ಯಡಿಯೂರಪ್ಪನವರೇ ಮನೆಯಲ್ಲಿ ನೀವು ಯುಗಾದಿಗೆ ಹೋಳಿಗೆ ತುಪ್ಪದ ಊಟ ಮಾಡಿದ ಹಾಗೆ ದುಡಿಯುವ ಜನರು ಕೂಡ ಮಾಡಬೇಕಲ್ವಾ? ನೌಕಕರಿಗೆ ವೇತನ ಕಡಿತದ ಶಿಕ್ಷೆ ಯಾಕೆ? ಹಿಂದಿನ ಸರ್ಕಾರಕ್ಕೆ ನೀವೇ ಬುದ್ಧಿ ಹೇಳಿ, ಈಗ ನಿಮ್ಮ ಸರ್ಕಾರ ಇರುವಾಗ ನೌಕರರ ಮೇಲೆ ಗುಡುಗುತ್ತಿದ್ದೀರಾ? ಇದು ಸರಿನಾ ಎಂದು ಪ್ರಶ್ನಿಸಿದರು.
ಸಾರಿಗೆ ಮುಷ್ಕರ: 'ಸರ್ಕಾರ ಬ್ಲಾಕ್‌ಮೇಲ್ ಸಹಿಸಲ್ಲ'
ನಿವೃತ್ತಿ ಹೊಂದಿದ ಚಾಲಕರಿಗೆ ಕೆಲಸಕ್ಕೆ ಬನ್ನಿ ಎಂದು ಆಹ್ವಾನಿಸಲಾಗಿದೆ. ನಿವೃತ್ತಿಯಾದವರನ್ನು ಕೆಲಸಕ್ಕೆ ಕರೆಯುವುದು ಎಷ್ಟುಸರಿ? ಸರ್ಕಾರ ಯೋಚನೆ ಮಾಡಬೇಕು. ಕೆಲಸಕ್ಕೆ ಹಾಜರಾಗದವರು ಮನೆ ಖಾಲಿ ಮಾಡಿ ಎಂದು ನೋಟಿಸ್ ನೀಡಿದ್ದೀರಿ. ಈ ರೀತಿ ಅಧಿಕಾರ ಚಲಾಯಿಸುವುದು ಸರಿಯಾದ ಕ್ರಮವಲ್ಲ. ಸಾರಿಗೆ ಇಲಾಖೆಯಲ್ಲಿ ಮಲತಾಯಿ ಧೋರಣೆ ಆಗಬಾರದು. ತಪ್ಪು ಮಾಡಿದ್ದರೆ ಶಿಕ್ಷೆ ಕೊಡಿ, ಅದು ಬಿಟ್ಟು ವೇತನ ಕೇಳಿದರೆ ಶೋಷಣೆ ಮಾಡುವುದು ಸರಿಯಲ್ಲ ಎಂದರು.
ಶಾಂತಿಯುತ ಹೋರಾಟ ಮುಂದುವರಿಕೆ:
ನೌಕರರ ಚಳವಳಿ ಹತ್ತಿಕ್ಕಲು ಹಲವು ಮಾರ್ಗಗಳ ಮೂಲಕ ಸರ್ಕಾರ ಯೋಚಿಸುತ್ತಿದೆ. ನಾವು ಶಾಂತ ರೀತಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿದ್ದೇವೆ. ಖಾಸಗಿ ವಾಹನ ಓಡಿಸಿದರೂ ನಾವು ಅಡ್ಡಿಪಡಿಸಿಲ್ಲ. ನಿಲ್ದಾಣಕ್ಕೆ ಬೇರೆ ಬಸ್ ಬಂದಾಗ ಪ್ರತಿಭಟನೆ ಮಾಡಲಿಲ್ಲ. ಶಾಂತಿಯುತ ಮುಷ್ಕರ ಮುಂದುವರಿಯಲಿದೆ. ನೌಕರರ ಮೇಲೆ ಎಸ್ಮಾ ಜಾರಿ ಮಾಡುವುದು ಸರಿಯಲ್ಲ ಎಂದು ಹೇಳಿದರು.