ಬೆಂಗಳೂರು(ಏ.09): ಸಾರಿಗೆ ನೌಕರರು ಯಾರದೋ ಮಾತು ಕೇಳಿ ಬ್ಲಾಕ್‌ಮೇಲ್‌ ಮಾಡುವುದನ್ನು ರಾಜ್ಯ ಸರ್ಕಾರ ಸಹಿಸುವುದಿಲ್ಲ ಎಂದು ಬಿಎಂಟಿಸಿ ಉಪಾಧ್ಯಕ್ಷ ಡಾ.ಎಂ.ಆರ್‌.ವೆಂಕಟೇಶ್‌ ಹೇಳಿದ್ದಾರೆ.

ಸಾರಿಗೆ ನೌಕರರು ಬೇಡಿಕೆ ಇಡಬಾರದು ಎಂದು ಸರ್ಕಾರ ಹೇಳುತ್ತಿಲ್ಲ. ಆದರೆ, ಯಾರದೋ ಒಬ್ಬರ ಮಾತು ಕೇಳಿಕೊಂಡು, ಅವರನ್ನೇ ನಂಬಿಕೊಂಡು ಬ್ಲಾಕ್‌ಮೇಲ್‌ ಮಾಡುವ ಮಟ್ಟಕ್ಕೆ ನೌಕರರು ಇಳಿದಿರುವುದನ್ನು ಸರ್ಕಾರ ಖಂಡಿತ ಸಹಿಸುವುದಿಲ್ಲ. ಬೇಡಿಕೆಗಳನ್ನು ಸರ್ಕಾರದ ಗಮನಕ್ಕೆ ತರಲು ಅನೇಕ ಮಾರ್ಗಗಳಿವೆ. ಆದರೆ, ಕರ್ತವ್ಯಕ್ಕೆ ಹಾಜರಾಗದೇ, ಬಸ್‌ ಓಡಿಸದೆ ಜನಸಾಮಾನ್ಯರಿಗೆ ತೊಂದರೆ ನೀಡುವುದು ನಿಮಗೆ ಗೌರವ ತರುವುದಿಲ್ಲ. ಇದು ಮಾನವೀಯ ನಡೆಯೂ ಅಲ್ಲ ಎಂದಿದ್ದಾರೆ.

ಬಸ್ ಮುಷ್ಕರ;  32 ಸಿಬ್ಬಂದಿಗೆ ಗೇಟ್ ಪಾಸ್.. ಎಲ್ಲರಿಗೂ ನೋಟಿಸ್

ನುಡಿದಂತೆ ನಡೆಯುವ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಮನವಿಗೆ ಸ್ಪಂದಿಸಿ, ಕೂಡಲೇ ಕರ್ತವ್ಯಕ್ಕೆ ಹಾಜರಾಗಿ. ಮೇ 4ರ ಬಳಿಕ ಮುಖ್ಯಮಂತ್ರಿ ಅವರು ನಿಮ್ಮೊಂದಿಗೆ ಮಾತನಾಡಿ ಮನವಿಗೆ ಸ್ಪಂದಿಸಲಿದ್ದಾರೆ. ಈಗಾಗಲೇ ಆಕ್ರೋಶಗೊಂಡಿರುವ ಜನಸಾಮಾನ್ಯರ ಕಟು ನುಡಿಗೆ ಮುಖವಾಣಿ ಆಗಬೇಡಿ ಎಂದು ಡಾ.ಎಂ.ಆರ್‌.ವೆಂಕಟೇಶ್‌ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.