ಕೊಡಗಿನ ಕುಶಾಲನಗರದ ತಾವರೆ ಕೆರೆಯಲ್ಲಿ ವಾಟರ್ ಹಯಸಿಂಥ್ ಎಂಬ ತ್ಯಾಜ್ಯ ಗಿಡ ಹರಡಿ ಲಕ್ಷಾಂತರ ಹೂವುಗಳು ಅರಳಿವೆ. ಇದು ನೋಡುಗರನ್ನು ಆಕರ್ಷಿಸುತ್ತಿದ್ದರೂ, ನೀರಿನ ಗುಣಮಟ್ಟ ಹಾಳುಮಾಡುವ ಅಪಾಯಕಾರಿ ಗಿಡವಾಗಿದೆ.
ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಡಗು (ಜು.2) : ಹೂವು ಅಂದರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ. ಅದರಲ್ಲೂ ಒಂದೆಡೆಯೇ ಲಕ್ಷಾಂತರ ಹೂವುಗಳು ಅರಳಿದರೆ, ಹೂವಿನ ಲೋಕವೇ ಸೃಷ್ಟಿಯಾಯಿತ್ತೆಂದರೆ. ಎಂತಹ ಅರಸಿಕರನ್ನಾದರೂ ಸೆಳೆದು ಬಿಡುತ್ತದೆ ಅಲ್ಲವಾ,? ಇಲ್ಲೂ ಅದೇ ಆಗಿದೆ.
ಹೌದು ಕೊಡಗು ಜಿಲ್ಲೆ ಕುಶಾಲನಗರದಲ್ಲಿ ಇರುವ ತಾವರೆ ಕೆರೆಯಲ್ಲಿ ವಾಟರ್ ಹಯಸಿಂಥ್ ಎಂಬ ತ್ಯಾಜ್ಯ ಗಿಡವೊಂದು ಇಡೀ ಕೆರೆ ಪೂರ್ತಿ ಹರಡಿ, ಲಕ್ಷಾಂತರ ಹೂವು ಅರಳಿ ಪ್ರವಾಸಿಗರನ್ನು ತನ್ನತ್ತ ಸೂಜಿಗಲ್ಲಿನಂತೆ ಸೆಳೆಯುತ್ತಿದೆ. ತಾವರೆ ಕೆರೆ ಈಗ ಪ್ರವಾಸಿಗರ ಅಷ್ಟೇ ಅಲ್ಲ, ಸ್ಥಳೀಯ ಜನರ ಹಾಟ್ಸ್ಪಾಟ್ ಎನ್ನುವಂತೆ ಆಗಿದೆ. ಕೆರೆಯಲ್ಲಿ ಅರಳಿರುವ ಲಕ್ಷಾಂತರ ಹೂವಿನಿಂದ ಇಡೀ ಕೆರೆ ತಿಳಿನೀಲಿ ಬಣ್ಣದಿಂದ ಕಂಗೊಳಿಸುತ್ತಿದ್ದು, ತಕ್ಷಣವೇ ಸಿದ್ದಗೊಂಡ ಸ್ವರ್ಗ ಎನ್ನುವಂತಾಗಿದೆ.

ಸ್ಥಳೀಯವಾಗಿ ಹಾಡು ಭಾಷೆಯಲ್ಲಿ ನೀರುಬಳ್ಳಿ ಎಂದು ಕರೆಸಿಕೊಳ್ಳುವ ಈ ಬಳ್ಳಿ ಮೂಲತಃ ದಕ್ಷಿಣ ಅಮೆರಿಕದ್ದು. ಆದರೆ ಆಕರ್ಷಣೀಯ ಹೂವಾಗಿ ಆಕಸ್ಮಿಕವಾಗಿ ನಮ್ಮ ದೇಶಕ್ಕೆ ಬಂದ ಈ ಗಿಡ ಇದೀಗ ಕೊಡಗು ಜಿಲ್ಲೆಯ ಕುಶಾಲನಗರದ ತಾವರೆ ಕೆರೆಗೂ ತನ್ನ ಕಬಂಧ ಬಾಹು ಚಾಚಿದೆ. ಕೆಲವು ತಿಂಗಳ ಹಿಂದೆ ಕೆರೆಯ ಒಂದು ಭಾಗದಲ್ಲಿ ಇದ್ದ ಈ ಗಿಡ ಈಗ ಇಡೀ ಕೆರೆಗೆ ಹರಡಿದೆ. ಹೀಗೆ ಹರಡಿದ ಗಿಡದಲ್ಲಿ ಅರಳಿರುವ ಕಲರ್ ಫುಲ್ ಹೂವು ಜನರನ್ನು ಕೈಬೀಸಿ ಕರೆಯುತ್ತಿದೆ.
ಪ್ರವಾಸಿಗರು ಹೆಚ್ಚು ಸಂಖ್ಯೆಯಲ್ಲಿ ಕೊಡಗಿಗೆ ಆಗಮಿಸುವ ಸಮಯ ಇದಾಗಿದ್ದು, ಬರುವ ಬಹುತೇಕ ಪ್ರವಾಸಿಗರು ಕೆರೆಯಲ್ಲಿ ಇರುವ ಹೂವನ್ನು ಕಂಡು ಆಕರ್ಷಿತರಾಗುತ್ತಿದ್ದಾರೆ. ಕೆರೆಯ ಮುಂಭಾಗ ನಿಂತು ಸೆಲ್ಫೆ, ಫೋಟೋ ತೆಗೆದುಕೊಂಡು ಎಂಜಾಯ್ ಮಾಡುತ್ತಿದ್ದಾರೆ. ಹೂವಿನಿಂದ ಮತ್ತಷ್ಟು ಉತ್ಸಾಹಿತರಾದ ಜನರು ಕೆರೆಗೆ ಇಳಿದು ಹೂವಿನ ಬಳಿ ನಿಂತು ಫೋಟೋ ತೆಗೆಸಿಕೊಂಡು ಸಂಭ್ರಮಿಸುತ್ತಿದ್ದಾರೆ.
ಹೆದ್ದಾರಿಗೆ ಹೊಂದಿಕೊಂಡಂತೆ ಇರುವ ಈ ಕೆರೆಗೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಬರುತ್ತಿರುವುದರಿಂದ ಅಲ್ಲಿ ವಾಹನ ದಟ್ಟಣೆ ಮತ್ತು ಜನರ ದಟ್ಟಣೆ ಹೆಚ್ಚುತ್ತಿದೆ. ಇದರಿಂದ ಹೆದ್ದಾರಿಯಲ್ಲಿ ಓಡಾಡುವ ಇತರೆ ವಾಹನಗಳ ಓಡಾಟಕ್ಕೆ ತೀವ್ರ ಸಮಸ್ಯೆಯಾಗುತ್ತಿದೆ. ಹೀಗಾಗಿ ಸ್ಥಳಕ್ಕೆ ಪೊಲೀಸರನ್ನು ನಿಯೋಜನೆ ಮಾಡಿ ವಾಹನಗಳ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ತಾವರೆ ಕೆರೆಯಲ್ಲಿ ಮೊದಲು ಹೆಸರಿಗೆ ತಕ್ಕಂತೆ ತಿಳಿ ಗುಲಾಬಿ ಬಣ್ಣದ ತಾವರೆಗಳು ಅರಳುತ್ತಿದ್ದವು. ಆದರೆ ಈ ಹಯಸಿಂಥ್ ಗಿಡ ಹರಡಿದ ಬಳಿಕ ತಾವರೆ ಗಿಡ ಸಂಪೂರ್ಣ ಹೊರಟು ಹೋಗಿದೆ.

ನೋಡುವುದಕ್ಕೆ ತುಂಬಾ ಮನಮೋಹಕವಾಗಿರುವ ಈ ಹಯಸಿಂಥ್ ನೋಡಿದಷ್ಟು ಒಳ್ಳೆಯ ಹೂವು ಇದಲ್ಲ. ನೋಡುವುದಕ್ಕೆ ಕಲರ್ ಫುಲ್ ಹೂವಾದರೂ, ಇದು ನೀರಿನ ಗುಣಮಟ್ಟ ಹಾಳು ಮಾಡುತ್ತದೆ. ನೀರಿನಲ್ಲಿ ಆಮ್ಲಜನಕ ತೀರಾ ಕಡಿಮೆ ಮಾಡಿ ಜಲಚರಗಳನ್ನೇ ಕೊಲ್ಲಬಲ್ಲ ಅಪಾಯಕಾರಿ ಗಿಡ ಇದು. ಜೊತೆಗೆ ಸೊಳ್ಳೆಗಳ ಆವಾಸ ಸ್ಥಾನವೂ ಆಗಬಲ್ಲದು. ಇಂತಹ ಅಪಾಯಕಾರಿ ಗಿಡ ಸ್ವಲ್ಪ ಬೆಳೆದಾಗಲೇ ಕುಶಾಲನಗರ ಪುರಸಭೆ ಸ್ವಚ್ಛಗೊಳಿಸಬೇಕಾಗಿತ್ತು. ಆದರೆ ಕೆರೆಯನ್ನು ಸ್ವಚ್ಛಗೊಳಿಸದೆ ನಿರ್ಲಕ್ಷ್ಯ ವಹಿಸಿದ್ದರಿಂದ ಇಡೀ ಕೆರೆಗೆ ಈ ಅಪಾಯಕಾರಿ ಗಿಡ ಹರಡಿದೆ. ಅಪಾಯಕಾರಿ ಸಸ್ಯದ ಹೂವೇ ಈಗ ನೋಡುಗರ ಆಕರ್ಷಣೀಯವಾಗಿರುವುದಂತು ನಿಜಕ್ಕೂ ವಿಪರ್ಯಾಸ.
