ಹಣಕ್ಕಾಗಿ ತಮ್ಮ ಸ್ನೇಹಿತ ತುಷಾರ್‌ ಎಂಬಾತನನ್ನು ಅಪಹರಿಸಿ ಕೊಲೆಗೈದ ಪ್ರಕರಣದಲ್ಲಿ ಮುಂಬೈ ಮೂಲದ ಇಬ್ಬರು ಯುವತಿಯರು ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ. 

ಬೆಂಗಳೂರು (ಜ.04): ಹಣಕ್ಕಾಗಿ ತಮ್ಮ ಸ್ನೇಹಿತ ತುಷಾರ್‌ ಎಂಬಾತನನ್ನು ಅಪಹರಿಸಿ ಕೊಲೆಗೈದ ಪ್ರಕರಣದಲ್ಲಿ ಮುಂಬೈ ಮೂಲದ ಇಬ್ಬರು ಯುವತಿಯರು ಸೇರಿ ನಾಲ್ವರಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಹೈಕೋರ್ಟ್‌ ಎತ್ತಿ ಹಿಡಿದಿದೆ. ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಆರೋಪಿಗಳಾದ ಜಾರ್ಖಂಡ್‌ನ ರೋಹಿತ್‌ ಕುಮಾರ್‌, ಮುಂಬೈ ಮೂಲದ ಶಿವಾನಿ ಠಾಕೂರ್‌, ಪ್ರೀತಿ ರಾಜ್‌ ಮತ್ತು ಬಿಹಾರದ ವಾರೀಶ್‌ ಸಲ್ಲಿಸಿದ್ದ ಮೇಲ್ಮನವಿಯನ್ನು ವಜಾಗೊಳಿಸಿದ ನ್ಯಾಯಮೂರ್ತಿ ಬಿ.ವೀರಪ್ಪ ಅವರ ನೇತೃತ್ವದ ವಿಭಾಗೀಯ ಪೀಠ, ನಾಲ್ವರಿಗೆ ಜೀವಾವಧಿ ಶಿಕ್ಷೆ ಕಾಯಂಗೊಳಿಸಿದೆ.

ಬಿಹಾರ ಮೂಲದ ವಾರಿಶ್‌ ಮತ್ತು ತುಷಾರ್‌ ರಾಜಸ್ಥಾನದಲ್ಲಿ ಒಟ್ಟಿಗೆ ಓದಿದ್ದರು. ಎಂಜಿನಿಯರಿಂಗ್‌ ವ್ಯಾಸಂಗ ಮಾಡಲು ತುಷಾರ್‌ ಬೆಂಗಳೂರಿಗೆ ಬಂದಿದ್ದ. ಶ್ರೀಮಂತ ಕುಟುಂಬದ ಹಿನ್ನೆಲೆಯನ್ನು ಹೊಂದಿದ್ದ ತುಷಾರ್‌ನನ್ನು ಅಪಹರಿಸಿ ಹಣ ವಸೂಲಿ ಮಾಡಲು ಯೋಜಿಸಿ ವಾರಿಶ್‌ ಬೆಂಗಳೂರಿಗೆ ಬಂದಿದ್ದ. ನಂತರ ಎಂಜಿನಿಯರಿಂಗ್‌ ಕೋರ್ಸನ್ನು ಅರ್ಧಕ್ಕೆ ಬಿಟ್ಟು ನಗರದಲ್ಲಿ ಉದ್ಯೋಗ ಮಾಡುತ್ತಿದ್ದ ತಮ್ಮ ಸಂಬಂಧಿಕರಾದ ಪ್ರೀತಿ ಮತ್ತು ಶಿವಾನಿಯನ್ನು ತುಷಾರ್‌ಗೆ ವಾರೀಶ್‌ ಪರಿಚಯ ಮಾಡಿಕೊಟ್ಟಿದ್ದ.

ಯೆಜ್ಡಿ ಟ್ರೇಡ್‌ ಮಾರ್ಕ್‌ಗೆ ನಿರ್ಬಂಧ ಹೇರಿ ಹೈಕೋರ್ಟ್‌ ಆದೇಶ

ಆರೋಪಿಗಳು 2011ರ ಜ.14ರಂದು ತುಷಾರ್‌ನನ್ನು ಅಪಹರಿಸಿ ಕೊಲೆಗೈದು ವೀರಸಾಗರ ರಸ್ತೆಯ ನೀಲಗಿರಿ ತೋಪಿನಲ್ಲಿ ಮೃತದೇಹವನ್ನು ವಿಲೇವಾರಿ ಮಾಡಿದ್ದರು. ಜ.16ರಂದು ಆತನ ತಂದೆಗೆ ಕರೆ ಮಾಡಿ ‘ನಿಮ್ಮ ಮಗನನ್ನು ಅಪಹರಣ ಮಾಡಿದ್ದು, .10 ಲಕ್ಷ ನೀಡಿ ಬಿಡಿಸಿಕೊಂಡು ಹೋಗಿ’ ಎಂದು ಸೂಚಿಸಿದ್ದರು. ಇದರಿಂದ ತುಷಾರ್‌ ತಂದೆ ಬಿಹಾರದಿಂದ ಬೆಂಗಳೂರಿಗೆ ಬಂದು ಪೊಲೀಸರಿಗೆ ದೂರು ನೀಡಿದ್ದರು. ತುಷಾರ್‌ ತಂದೆಯಿಂದ 10 ಲಕ್ಷ ಒತ್ತೆ ಹಣವನ್ನು ಪಡೆಯಲು ರೈಲ್ವೇ ನಿಲ್ದಾಣಕ್ಕೆ ಬಂದ ಎರಡನೇ ಆರೋಪಿ ರೋಹಿತ್‌ ಕುಮಾರನನ್ನು ಪೊಲೀಸರು ಬಂಧಿಸಿದ್ದರು. ವಿಚಾರಣೆ ವೇಳೆ ಆತ ತಿಳಿಸಿದ ಮಾಹಿತಿ ಆಧರಿಸಿ ವಾರೀಶ್‌, ಶಿವಾನಿ ಮತ್ತು ಪ್ರೀತಿಯನ್ನು ಬಂಧಿಸಿದ್ದರು. 

ಅಪ್ರಾಪ್ತರ ಪಾಸ್‌ಪೋರ್ಟ್‌ ಗೊಂದಲ ಪರಿಹರಿಸಿ: ಹೈಕೋರ್ಟ್‌

ನಂತರ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿಸಲ್ಲಿಸಿದ್ದರು. ಆರೋಪಿಗಳೇ ಹಣಕ್ಕಾಗಿ ತುಷಾರ್‌ನನ್ನು ಅಪಹರಿಸಿ ಕೊಲೆ ಮಾಡಿರುವುದಾಗಿ ಪ್ರಾಸಿಕ್ಯೂಷನ್‌ ಸಂಶಯತೀತಾತವಾಗಿ ಸಾಬೀತುಪಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದ ಬೆಂಗಳೂರಿನ 15ನೇ ತ್ವರಿತಗತಿ ನ್ಯಾಯಾಲಯ ನಾಲ್ವರು ಆರೋಪಿಗಳಿಗೂ ಜೀವಾವಧಿ ಶಿಕ್ಷೆ ವಿಧಿಸಿ 2014ರ ನ.6ರಂದು ಆದೇಶಿಸಿತ್ತು. ಈ ತೀರ್ಪು ರದ್ದು ಕೋರಿ ಆರೋಪಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು. ಮೇಲ್ಮನವಿಯನ್ನು ವಜಾಗೊಳಿಸಿದ ಹೈಕೋರ್ಟ್‌, ವಿಚಾರಣಾ ನ್ಯಾಯಾಲಯದ ಆದೇಶವನ್ನು ಎತ್ತಿಹಿಡಿದಿದೆ.