ಎಐಸಿಸಿ, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಯ ಹಿರಿಯ ವೀಕ್ಷಕರ ಜವಾಬ್ದಾರಿ ನೀಡಿದೆ. ರಾಜ್ಯದಲ್ಲಿ ಮುಖ್ಯಮಂತ್ರಿ ಪಟ್ಟದ ಚರ್ಚೆ ನಡೆಯುತ್ತಿರುವಾಗಲೇ ಈ ನೇಮಕಾತಿ ನಡೆದಿದ್ದು, ಸಿಎಂ ಚರ್ಚೆಗೆ ಹೈಕಮಾಂಡ್ ಹಾಕಿದ ಪೂರ್ಣವಿರಾಮವೇ ?

ಬೆಂಗಳೂರು(ಜ.7): ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಬದಲಾವಣೆ ಮತ್ತು ಅಧಿಕಾರ ಹಂಚಿಕೆಯ ಕುರಿತು ಭಾರಿ ಚರ್ಚೆ ನಡೆಯುತ್ತಿರುವ ಬೆನ್ನಲ್ಲೇ, ಎಐಸಿಸಿ (AICC) ಮಹತ್ವದ ತೀರ್ಮಾನವೊಂದನ್ನು ಕೈಗೊಂಡಿದೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರಿಗೆ ಅಸ್ಸಾಂ ವಿಧಾನಸಭಾ ಚುನಾವಣೆಯ ಜವಾಬ್ದಾರಿಯನ್ನು ಹೊರಿಸಲಾಗಿದೆ.

ಅಸ್ಸಾಂ ಚುನಾವಣೆಗೆ ಡಿಕೆ ಶಿವಕುಮಾರ್ 'ಹಿರಿಯ ವೀಕ್ಷಕ'

ಮುಂಬರುವ ಅಸ್ಸಾಂ ವಿಧಾನಸಭಾ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಕಾಂಗ್ರೆಸ್ ಹೈಕಮಾಂಡ್, ಡಿಕೆ ಶಿವಕುಮಾರ್ ಅವರನ್ನು ಹಿರಿಯ ವೀಕ್ಷಕರನ್ನಾಗಿ (Senior Observer) ನೇಮಕ ಮಾಡಿದೆ. ಇವರೊಂದಿಗೆ ಕೇರಳ ವಿಧಾನಸಭಾ ಚುನಾವಣೆಯ ಹಿರಿಯ ವೀಕ್ಷಕರಾಗಿ ರಾಜ್ಯದ ಸಚಿವ ಕೆ.ಜೆ. ಜಾರ್ಜ್ ಅವರನ್ನೂ ನೇಮಕ ಮಾಡಿ ಎಐಸಿಸಿ ಆದೇಶ ಹೊರಡಿಸಿದೆ.

ಡಿಕೆಶಿಗೆ ಇದು 'ಶಾಕ್' ಅಥವಾ 'ಗೌರವ'?

ರಾಜ್ಯದಲ್ಲಿ ಸಿಎಂ ಪಟ್ಟಕ್ಕಾಗಿ ಕಾಯುತ್ತಿರುವ ಡಿಕೆ ಶಿವಕುಮಾರ್ ಅವರಿಗೆ ಈ ನೇಮಕಾತಿ ಪರೋಕ್ಷವಾಗಿ ಶಾಕ್ ನೀಡಿದಂತಿದೆ ಎಂಬ ಚರ್ಚೆ ಶುರುವಾಗಿದೆ. ಪಂಚರಾಜ್ಯಗಳ ಚುನಾವಣೆ ಮುಗಿಯುವವರೆಗೆ ಕರ್ನಾಟಕದಲ್ಲಿ ಅಧಿಕಾರ ಹಂಚಿಕೆಯ ಚರ್ಚೆಯೇ ಇಲ್ಲ ಎಂಬ ಸ್ಪಷ್ಟ ಸಂದೇಶವನ್ನು ಹೈಕಮಾಂಡ್ ಈ ಮೂಲಕ ರವಾನಿಸಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಅಧಿಕಾರ ಹಂಚಿಕೆ ಚರ್ಚೆಗೆ ಹೈಕಮಾಂಡ್ ಫುಲ್ ಸ್ಟಾಪ್?

ಒಂದು ವೇಳೆ ಹೈಕಮಾಂಡ್ ಡಿಕೆ ಶಿವಕುಮಾರ್ ಅವರಿಗೆ ಸದ್ಯದಲ್ಲೇ ಸಿಎಂ ಪಟ್ಟ ನೀಡುವ ಉದ್ದೇಶ ಹೊಂದಿದ್ದರೆ, ಇಷ್ಟೊಂದು ದೊಡ್ಡ ಮಟ್ಟದ ಚುನಾವಣಾ ಜವಾಬ್ದಾರಿಯನ್ನು ನೀಡುತ್ತಿರಲಿಲ್ಲ ಎನ್ನಲಾಗುತ್ತಿದೆ. ಐದು ರಾಜ್ಯಗಳ ಚುನಾವಣೆ ಮುಗಿಯುವವರೆಗೂ ರಾಜ್ಯ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂಬುದು ಈ ನೇಮಕಾತಿಯಿಂದ ಪರೋಕ್ಷವಾಗಿ ಸಾಬೀತಾದಂತಿದೆ.

ಎಐಸಿಸಿ ಲೆಕ್ಕಾಚಾರವೇನು?

ಸಾಮಾನ್ಯವಾಗಿ ಮುಖ್ಯಮಂತ್ರಿ ಆಗಿರುವವರನ್ನು ಕೇವಲ ಚುನಾವಣಾ ಪ್ರಚಾರಕ್ಕೆ ಮಾತ್ರ ಬಳಸಿಕೊಳ್ಳುವ ಪರಿಪಾಠವಿದೆ. ಆದರೆ, ಚುನಾವಣಾ ಸಂಘಟನೆ ಮತ್ತು ವೀಕ್ಷಕರ ಕೆಲಸಗಳಿಗೆ ಸಿಎಂ ಆದವರನ್ನು ಬಳಸಿಕೊಳ್ಳುವುದು ಅಪರೂಪ. ಈಗ ಡಿಕೆ ಶಿವಕುಮಾರ್ ಅವರಿಗೆ ಸಂಘಟನಾತ್ಮಕ ಹೊಣೆ ನೀಡಿರುವುದು ನೋಡಿದರೆ, ಸದ್ಯಕ್ಕೆ ಅವರು ಡಿಸಿಎಂ ಸ್ಥಾನದಲ್ಲೇ ಮುಂದುವರಿಯಲಿದ್ದಾರೆ ಎಂಬ ಸೂಚನೆ ಸಿಕ್ಕಂತಿದೆ.

ರಾಜಕೀಯ ಪಡಸಾಲೆಯಲ್ಲಿ ತೀವ್ರ ಚರ್ಚೆ

ಸಿಎಂ ಮಾಡುವ ಉದ್ದೇಶ ಹೈಕಮಾಂಡ್‌ಗೆ ಇದ್ದಿದ್ದರೆ ಈ ಜವಾಬ್ದಾರಿ ನೀಡುತ್ತಿರಲಿಲ್ಲ' ಎಂಬ ಮಾತುಗಳು ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿವೆ. ಹೈಕಮಾಂಡ್ ಈ ನಡೆಯ ಮೂಲಕ ರಾಜ್ಯದ ಸಿದ್ದರಾಮಯ್ಯ ಬೆಂಬಲಿಗರಿಗೆ ಸಮಾಧಾನ ನೀಡಿ, ಡಿಕೆ ಶಿವಕುಮಾರ್ ಬಣದ ನಿರೀಕ್ಷೆಗಳಿಗೆ ಸದ್ಯಕ್ಕೆ ತಣ್ಣೀರೆರಚಿದಂತಿದೆ.