ಗಡಿನಾಡ ಸಂಚಾರ ತಡೆದ ಕರ್ನಾಟಕ ಸರ್ಕಾರಕ್ಕೆ ಕೇರಳ ಹೈಕೋರ್ಟ್ ತರಾಟೆ
ಅಮಾನವೀಯ ನಾಗರಿಕ ಹಕ್ಕು ಉಲ್ಲಂಘನೆ ಕುರಿತು ಸ್ಪಷ್ಟೀಕರಣ ನೀಡಬೇಕೆಂದು ಕರ್ನಾಟಕಕ್ಕೆ ಕೇರಳ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.
ಮಂಗಳೂರು (ಆ.15): ಕೇರಳದಿಂದ ಕರ್ನಾಟಕಕ್ಕೆ ಆಗಮಿಸುವವರಿಗೆ ರಸ್ತೆ ತಡೆ ಸಹಿತ ನಾಗರಿಕ ಸಂಚಾರ ಅನುಮತಿ ನಿಷೇಧಿಸಿದ ಕರ್ನಾಟಕ ಸರ್ಕಾರದ ಕ್ರಮ ಕೇಂದ್ರದ ಕೋವಿಡ್ ನಿಯಮಾವಳಿಯ ಉಲ್ಲಂಘನೆಯಾಗಿದ್ದು ಇಂತಹ ಅಮಾನವೀಯ ನಾಗರಿಕ ಹಕ್ಕು ಉಲ್ಲಂಘನೆ ಕುರಿತು ಸ್ಪಷ್ಟೀಕರಣ ನೀಡಬೇಕೆಂದು ಕರ್ನಾಟಕಕ್ಕೆ ಕೇರಳ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿಗೊಳಿಸಿದೆ.
ಮಂಜೇಶ್ವರದ ಸಿಪಿಎಂ ಮುಖಂಡ, ಪಕ್ಷದ ಜಿಲ್ಲಾ ಸೆಕ್ರೇಟರಿಯೇಟ್ ಸದಸ್ಯ ಕೆ.ಆರ್.ಜಯಾನಂದ ಅವರು ನಾಗರಿಕ ಹಿತಾಸಕ್ತಿಯಿಂದ ಕೇರಳ ಹೈಕೋರ್ಟಿನಲ್ಲಿ ದಾವೆ ಹೂಡಿದ್ದರು.
ಗಡಿ ಜಿಲ್ಲೆಗಳಲ್ಲಿ ಹೆಚ್ಚಿದ ಕೊರೋನಾ ಕೇಸ್: ಹೆಚ್ಚಿದ ಟೆನ್ಷನ್..!
ಇದರಂತೆ ಕರ್ನಾಟಕ ಸರ್ಕಾರ, ದಕ್ಷಿಣ ಕನ್ನಡ, ಜಿಲ್ಲಾಧಿಕಾರಿ, ಕೇಂದ್ರ ಆರೋಗ್ಯ ಸಚಿವಾಲಯದ ಪ್ರತಿನಿಧಿಗಳು ಆ.17ರಂದು ಕೋರ್ಟಿಗೆ ಹಾಜರಾಗಿ ಅಧಿಕೃತ ಸಮಜಾಯಿಷಿ ನೀಡುವಂತೆ ಮುಖ್ಯ ನ್ಯಾಯಾಧೀಶರನ್ನೊಳಗೊಂಡ ವಿಭಾಗೀಯ ಪೀಠ ಆದೇಶಿಸಿದೆ. ಪ್ರಸ್ತುತ ಕೇರಳದಿಂದ ಯಾರೊಬ್ಬರು ಕರ್ನಾಟಕ ಪ್ರವೇಶಿಸುವುದಿದ್ದರೂ ಅವರು 72 ತಾಸುಗಳ ಒಳಗೆ ಪಡೆದ ಆರ್‌ಟಿಪಿಸಿಆರ್ ಟೆಸ್ಟಿನ ನೆಗೆಟಿವ್ ಸರ್ಟಿಫಿಕೆಟ್ ಕಡ್ಡಾಯ ಹೊಂದಿರಬೇಕು ಎಂಬುದು ಕರ್ನಾಟಕದ ಆದೇಶವಾಗಿದೆ.
ಎರಡು ಡೋಸ್ ಲಸಿಕೆ ಪಡೆದವರ ಸಂಚಾರ ಅನುಮತಿ ನಿಷೇಧಿಸಕೂಡದೆಂದು ಕೇಂದ್ರ ಸರ್ಕಾರ ತಿಳಿಸಿದ್ದರೂ ಅದನ್ನು ಪರಿಗಣಿಸಿಲ್ಲ. ಈ ನಿಲುವನ್ನು ಖಂಡಿಸಿ ತಲಪಾಡಿಯಲ್ಲಿ ಸತ್ಯಾಗ್ರಹ ನಿರತರಾಗುವುದರ ಜತೆಯಲ್ಲೇ ಕೆ.ಆರ್.ಜಯಾನಂದರು ಕೋರ್ಟಿನ ಮೊರೆ ಹೋಗಿದ್ದರು.