ಕಿಯೋನಿಕ್ಸ್‌ಗೆ ಸರ್ಕಾರದಿಂದ ಬಾಕಿ 350 ಕೋಟಿ ರೂ.: ವೆಂಡರ್ಸ್‌ಗಳಿಂದ ದಯಾಮರಣಕ್ಕೆ ಮನವಿ
ರಾಜ್ಯ ಸರ್ಕಾರವು ಕಿಯೋನಿಕ್ಸ್‌ಗೆ 350 ಕೋಟಿ ರೂ. ಗುತ್ತಿಗೆ ಹಣ ಬಾಕಿ ಉಳಿಸಿಕೊಂಡಿದೆ. ಇದರಿಂದಾಗಿ ಕಿಯೋನಿಕ್ಸ್‌ನ ಗುತ್ತಿಗೆದಾರರು ಮತ್ತು ವೆಂಡರ್ಸ್‌ಗಳು ತಮಗೆ ದಯಾಮರಣ ಕೊಡುವಂತೆ ರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಗಳಿಗೆ ಪತ್ರ ಬರೆದಿದ್ದಾರೆ. ಒಂದು ವರ್ಷದಿಂದ ಬಾಕಿ ಬಿಲ್ ಪಾವತಿಯಾಗದೆ ವೆಂಡರ್ಸ್‌ಗಳು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಬೆಂಗಳೂರು (ಜ.14): ರಾಜ್ಯ ಸರ್ಕಾರದಿಂದ ಜನತೆಗೆ 5 ಗ್ಯಾರಂಟಿಗಳನ್ನು ಜಾರಿಗೊಳಿಸಿ ವಾರ್ಷಿಕ ಸುಮಾರು 60 ಸಾವಿರ ಕೋಟಿ ರೂ. ವೆಚ್ಚ ಮಾಡುತ್ತಿದೆ. ಆದರೆ, ಸರ್ಕಾರಕ್ಕೆ ವಿವಿಧ ಸೇವೆಗಳನ್ನು ಒದಗಿಸುತ್ತಿರುವ ಕರ್ನಾಟಕ ರಾಜ್ಯ ಎಲೆಕ್ಟ್ರಾನಿಕ್ಸ್ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ಸಂಸ್ಥೆಗೆ 350 ಕೋಟಿ ರೂ. ಗುತ್ತಿಗೆ ಹಣ ಬಾಕಿ ಉಳಿಸಿಕೊಂಡಿದೆ. ಇದೀಗ ಕಿಯೋನಿಕ್ಸ್ ಸಂಸ್ಥೆಯ ಗುತ್ತಿಗೆದಾರರು ಮತ್ತು ವೆಂಡರ್ಸ್ ಸೇರಿ ತಮಗೆ ದಯಾಮರಣ ಕೊಡಬೇಕು ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹಾಗೂ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.
ಈ ಮೂಲಕ ರಾಜ್ಯ ಸರ್ಕಾರಕ್ಕೆ ಮತ್ತೊಂದು ಸಂಕಷ್ಟ ಶುರುವಾಗಿದೆ. ರಾಜ್ಯದಲ್ಲಿ ಗುತ್ತಿಗೆದಾರರು ಅಯ್ತು, ಇದೀಗ ಕಿಯೋನಿಕ್ಸ್ ವೆಂಡರ್ಸ್ ಸರದಿ ಆರಂಭವಾಗಿದೆ. ಕಿಯೋನಿಕ್ಸ್ ಸಂಸ್ಥೆ ವೆಂಡರ್ಸ್ ಅಸೋಸಿಯೇಷನ್ ವಯಿತಿಂದ ರಾಜ್ಯ ಸರ್ಕಾರ ಬಾಕಿ ಬಿಲ್ ಪಾವತಿ ಮಾಡದ ಹಿನ್ನೆಲೆಯಲ್ಲಿ ಜೀವನ ಮಾಡುವುದೇ ದುಸ್ತರವಾಗಿದ್ದು, ತಮಗೆ ದಯಾಮರಣ ಕೊಡುವಂತೆ ರಾಷ್ಟ್ರಪತಿ ಹಾಗೂ ಪ್ರಧಾನಮಂತ್ರಿ ಅವರಿಗೆ ಮನವಿ ಪತ್ರ ಬರೆದಿದ್ದಾರೆ.
ರಾಜ್ಯದಲ್ಲಿ ಅಧಿಕಾರಕ್ಕೆ ಬರಲೆಂದು ಜನರಿಗೆ 5 ಗ್ಯಾಂಟಿಗಳನ್ನು ಕೊಟ್ಟು ಅದನ್ನು ಈಡೇರಿಸಲು ಸಾಔಇರಾರು ಕೋಟಿ ರೂ. ಖರ್ಚು ಮಾಡುವ ಸರ್ಕಾರ ಕಿಯೋನಿಕ್ಸ್ ವೆಂಡರ್ಸ್‌ಗಳಿಗೆ ಸುಮಾರು 350 ಕೋಟಿ ಬಾಕಿ ಉಳಿಸಿಕೊಂಡಿದೆ. ಕಳೆದ ಒಂದು ವರ್ಷದಿಂದ ಸರ್ಕಾರಕ್ಕೆ ಮನವಿ ಮಾಡಿದರೂ ನಮಗೆ ಬಾಕಿ ಬಿಲ್ ಪಾವತಿ ಮಾಡುತ್ತಿಲ್ಲ. ಕಳೆದ ವರ್ಷ ಬಾಕಿ ಬಿಲ್ ಬಿಡುಗಡೆ ಮಾಡುವಂತೆ ಪ್ರತಿಭಟನೆ ಮಾಡಿದ್ದರೂ, ನಮಗೆ ಯಾವುದೇ ಭರವಸೆಯನ್ನೂ ನೀಡಲಿಲ್ಲ. ಒಂದು ವರ್ಷಗಳ ಕಾಲ ಕಾದರೂ ಬಾಕಿ ಬಿಲ್ ಬಿಡುಗಡೆ ಮಾಡುತ್ತಿಲ್ಲ. ಕಿಯೋನಿಕ್ಸ್ ವೆಂಡರ್ಸ್‌ಗಳು ಭಾರೀ ಸಂಕಷ್ಟದಲ್ಲಿದ್ದಾರೆ. ಹೀಗಾಗಿ, ಕಷ್ಟದಲ್ಲಿ ನಾವು ಜೀವನ ಸಾಗಿಸುತ್ತಾ, ನಮ್ಮನ್ನು ನಂಬಿಕೊಂಡು ಕೆಲಸ ಮಾಡಿದವರಿಗೂ ಹಣ ಕೊಡಲು ಸಾಧ್ಯವಾಗದೇ ಪರದಾಡುತ್ತಿದ್ದೇವೆ. ಹೀಗಾಗಿ, ದಯಾಮರಣ ಕೊಡಿ, ಇಲ್ಲವೇ ಬಾಕಿ ಬಿಲ್ ಬಿಡುಗಡೆಗೆ ರಾಜ್ಯ ಸರ್ಕಾರದ ಮೇಲೆ ಕ್ರಮ ಕೈಗೊಳ್ಳಿ ಎಂದು ಮನವಿ ಮಾಡಿದ್ದಾರೆ.
ಇದನ್ನೂ ಓದಿ: 8 ತಿಂಗಳಿಂದ ಪೇಮೆಂಟ್ ಬಾಕಿ; ವಿಷ ಕುಡಿಯಲು ಮುಂದಾದ ಗುತ್ತಿಗೆದಾರ ಸೈಯದ್
ಕಿಯೋನಿಕ್ಸ್ ಸಂಸ್ಥೆಯನ್ನೇ ನಂಬಿರುವ ಸಾವಿರಾರು ಜನ ಕೆಲಸ ಕಳೆದುಕೊಂಡಿದ್ದಾರೆ. ಸರ್ಕಾರಕ್ಕೆ ಎಷ್ಟೇ ಮನವಿ ಕೊಟ್ಟರೂ ಸಚಿವರು ನಮ್ಮ ಬೇಡಿಕೆ ಈಡೇರುಸುತ್ತಿಲ್ಲ. ನಾವು ಈಗ ಭಾರೀ ಕಷ್ಟದಲ್ಲಿದ್ದೇವೆ. ಯಾರು ಅಕ್ರಮ ಮಾಡಿದ್ದಾರೆ ಅವರ ಮೇಲೆ ಕ್ರಮ ತೆಗೆದುಕೊಳ್ಳಲಿ. ಅದನ್ನ ಬಿಟ್ಟು ನಮ್ಮ ಬಿಲ್ ಗಳನ್ನ ಬಾಕಿ ಉಳಿಸಿಕೊಂಡಿರೋದು ಸರಿಯಲ್ಲ. ಹೀಗಾಗಿ, ನಾವು ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ, ರಾಜ್ಯಪಾಲರಿಗೆ ಪತ್ರ ಬರೆದಿದ್ದೇವೆ ಎಂದು ಕಿಯೋನಿಕ್ಸ್ ವೆಂಡರ್ಸ್ ಅಸೋಸಿಯೇಷನ್ ಅಧ್ಯಕ್ಷ ವಸಂತ್ ಬಂಗೇರಾ ಹೇಳಿದ್ದಾರೆ.
ವೆಂಡರ್ಸ್‌ಗಳು ಆತ್ಮಹತ್ಯೆ ಮಾಡಿಕೊಂಡರೆ ಸಚಿವ ಪ್ರಿಯಾಂಕ್ ಖರ್ಗೆ ಸೇರಿ ನಾಲ್ವರು ಹೊಣೆ: ಇನ್ನು ರಾಷ್ಟ್ರಪತಿಗಳಿಗೆ ದಯಾಮರಣಕ್ಕೆ ಕೋರಿದ ಕಿಯೋನಿಕ್ಸ್ ವೆಂಡರ್ಸ್ ಅಸೋಸಿಯೇಷನ್ ಪತ್ರದಲ್ಲಿ ನಮ್ಮ ಸಂಸ್ಥೆಯ ವೆಂಡರ್ಸ್‌ಗಳು ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಸಚಿವ ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ, ಕಿಯೋನಿಕ್ಸ್ ಸಿಇಓ ಪವನ್ ಕುಮಾರ್ ಹಾಗೂ ಕಿಯೋನಿಕ್ಸ್ ಹಣಕಾಸು ವಿಭಾಗದ ನಿಶ್ಚಿತ್ ಅವರೇ ನೇರವಾಗಿ ಹೊಣೆಗಾರರಾಗುತ್ತಾರೆ. ಕಳೆದ ಒಂದು ವರ್ಷದಿಂದ ತನಿಖೆಯ ನೆಪದಲ್ಲಿ ಬಿಲ್ ಬಿಡುಗಡೆ ಮಾಡದೇ ಕಿರುಕುಳ ನೀಡಲಾಗುತ್ತಿದೆ. ಸುಮಾರು 400-500 ವೆಂಡರ್ಸ್‌ಗಳಿಗೆ ಬಿಲ್ ಪಾವತಿ ಬಾಕಿ ಇಡಲಾಗಿದೆ. ನಮ್ಮ ಕಷ್ಟವನ್ನು ಪ್ರಿಯಾಂಕ್ ಖರ್ಗೆ, ಶರತ್ ಬಚ್ಚೇಗೌಡ ಆಲಿಸುತ್ತಿಲ್ಲ. ಯಾರಾದರೂ ವೆಂಡರ್ಸ್ ಆತ್ಮಹತ್ಯೆ ಮಾಡಿಕೊಂಡರೆ ಅದಕ್ಕೆ ಇವರೇ ಕಾರಣ. ಇಲ್ಲದಿದ್ದರೆ ಸಾವಿರಾರು ಮಂದಿ ವೆಂಡರ್ಸ್‌ಗಳಿಗೆ ದಯಾಮರಣ ನೀಡಿ ಎಂದು ಪತ್ರ ಬರೆಯಲಾಗಿದೆ.
ಇದನ್ನೂ ಓದಿ: ಕಿಯೋನಿಕ್ಸ್ ಭ್ರಷ್ಟಾಚಾರ, ಕೆಇಎ ಪರೀಕ್ಷಾ ಅಕ್ರಮದಲ್ಲಿ ಕೈವಾಡ: ಪ್ರಿಯಾಂಕ್ ರಾಜೀನಾಮೆಗೆ ಬಿಜೆಪಿ ಆಗ್ರಹ