ಕಿಯೋನಿಕ್ಸ್ ಭ್ರಷ್ಟಾಚಾರ, ಕೆಇಎ ಪರೀಕ್ಷಾ ಅಕ್ರಮದಲ್ಲಿ ಕೈವಾಡ: ಪ್ರಿಯಾಂಕ್ ರಾಜೀನಾಮೆಗೆ ಬಿಜೆಪಿ ಆಗ್ರಹ
ಪರೀಕ್ಷಾ ಅಕ್ರಮ ಮತ್ತು ಇದರಲ್ಲಿ ಪ್ರಿಯಾಂಕ್ ಖರ್ಗೆಯವರ ಕಬಂಧಬಾಹುಗಳ ಕುರಿತು ಸಿಬಿಐ ತನಿಖೆ ಮಾಡಲು ಗೃಹ ಸಚಿವ ಪರಮೇಶ್ವರ್ ಶಿಫಾರಸು ಮಾಡಬೇಕು. ತಾವು ಪ್ರಾಮಾಣಿಕರಲ್ಲವೇ? ಹಾಗಿದ್ದರೆ ನೀವ್ಯಾಕೆ ಸಿಬಿಐ ತನಿಖೆಗೆ ಹಿಂದೇಟು ಹಾಕುತ್ತೀರಿ ಎಂದು ಪ್ರಿಯಾಂಕ್ ಖರ್ಗೆ ಅವರನ್ನು ವ್ಯಂಗ್ಯವಾಗಿ ಪ್ರಶ್ನಿಸಿದ ಮುಖ್ಯ ವಕ್ತಾರ ಎಂ.ಜಿ.ಮಹೇಶ್
ಬೆಂಗಳೂರು(ನ.08): ಕಿಯೋನಿಕ್ಸ್ ಭ್ರಷ್ಟಾಚಾರ ಹಾಗೂ ಕೆಇಎ ಪರೀಕ್ಷಾ ವ್ಯಾಪಕ ಅಕ್ರಮಕ್ಕೆ ಸಂಬಂಧಿಸಿ ಸಚಿವ ಪ್ರಿಯಾಂಕ್ ಖರ್ಗೆ ಅವರು ತಕ್ಷಣ ರಾಜೀನಾಮೆ ನೀಡಬೇಕು ಎಂದು ರಾಜ್ಯ ಬಿಜೆಪಿ ಒತ್ತಾಯಿಸಿದೆ.
ಮಂಗಳವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಮುಖ್ಯ ವಕ್ತಾರ ಎಂ.ಜಿ.ಮಹೇಶ್, ಪರೀಕ್ಷಾ ಅಕ್ರಮ ಮತ್ತು ಇದರಲ್ಲಿ ಪ್ರಿಯಾಂಕ್ ಖರ್ಗೆಯವರ ಕಬಂಧಬಾಹುಗಳ ಕುರಿತು ಸಿಬಿಐ ತನಿಖೆ ಮಾಡಲು ಗೃಹ ಸಚಿವ ಪರಮೇಶ್ವರ್ ಶಿಫಾರಸು ಮಾಡಬೇಕು. ತಾವು ಪ್ರಾಮಾಣಿಕರಲ್ಲವೇ? ಹಾಗಿದ್ದರೆ ನೀವ್ಯಾಕೆ ಸಿಬಿಐ ತನಿಖೆಗೆ ಹಿಂದೇಟು ಹಾಕುತ್ತೀರಿ ಎಂದು ಪ್ರಿಯಾಂಕ್ ಖರ್ಗೆ ಅವರನ್ನು ವ್ಯಂಗ್ಯವಾಗಿ ಪ್ರಶ್ನಿಸಿದರು.
ಪರೀಕ್ಷಾ ಅಕ್ರಮ ಕಿಂಗ್‌ಪಿನ್ ಪರಾರಿಗೆ ಪೊಲೀಸರ ಸಾಥ್? ತನಿಖೆಗೆ ಸೂಚನೆ!
ರಾಜ್ಯದ ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ. ಎಲ್ಲ ರಾಜಕೀಯ ಪಕ್ಷಗಳ ಬಗ್ಗೆ ದೊಡ್ಡದಾಗಿ ಮಾತನಾಡುವ ಪ್ರಿಯಾಂಕ್ ಖರ್ಗೆ ಅವರು ಇವತ್ತು ಈ ಎಲ್ಲ ವಿದ್ಯಮಾನಗಳ ಕೇಂದ್ರ ಬಿಂದುವಿನಂತಿದ್ದಾರೆ ಎಂದು ಆರೋಪಿಸಿದರು. ಪ್ರಿಯಾಂಕ್ ಖರ್ಗೆ ಸಂಪೂರ್ಣ ಕರ್ತವ್ಯ ವಿಮುಖರಾಗಿದ್ದು, ಸಚಿವರಾಗಿ ಮುಂದುವರೆಯಲು ನೈತಿಕತೆ ಹೊಂದಿಲ್ಲ. ಬೇರೆ ಪಕ್ಷವನ್ನು ಲೀಡರ್‌ಲೆಸ್, ಕೇಡರ್‌ಲೆಸ್ ಪಾರ್ಟಿ ಅನ್ನುವ ನೀವು ಬೇಸ್‍ಲೆಸ್ ಮತ್ತು ಶೇಮ್‍ಲೆಸ್ ವ್ಯಕ್ತಿ ಎಂದು ಟೀಕಿಸಿದರು.
ಕಿಯೋನಿಕ್ಸ್ ಎಂಡಿ, ಗುತ್ತಿಗೆದಾರರ ಬಳಿ ಸುಮಾರು ಶೇ.12 ಕಮಿಷನ್‍ಗಾಗಿ ಒತ್ತಾಯ ಮಾಡಿದ್ದಾರೆ. ಸರ್ಕಾರವು ತನ್ನೆಲ್ಲ ಕರ್ತವ್ಯವನ್ನು ಲೂಟಿ ಮಾಡುವ ಕಡೆ ಗಮನ ಹರಿಸಿದಂತಿದೆ. ಇನ್ನು ಕೆಇಎ ಪರೀಕ್ಷೆಯ ಅಕ್ರಮದಲ್ಲಿ ಕಾಂಗ್ರೆಸ್ ಕಾರ್ಯಕರ್ತ ಆರ್.ಡಿ.ಪಾಟೀಲ್ ಪ್ರಮುಖ ಆರೋಪಿಯಾಗಿದ್ದಾನೆ. ಪರೀಕ್ಷೆಯಲ್ಲಿ ಪಾಲ್ಗೊಂಡ ಅಭ್ಯರ್ಥಿಗಳು ಯಾರನ್ನು ಬೊಟ್ಟು ಮಾಡಿದ್ದಾರೋ ಆ ಆರ್.ಡಿ.ಪಾಟೀಲ್‍ಗೆ ಸರ್ಕಾರವೇ ಕೃಪಾಪೋಷಣೆ ಮಾಡುತ್ತಿದೆ ಎಂದು ಆರೋಪಿಸಿದರು.