Asianet Suvarna News Asianet Suvarna News

ನಾಳೆ, ನಾಡಿದ್ದು ಕೆಇಎ ಸ್ಪರ್ಧಾತ್ಮಕ ಪರೀಕ್ಷೆ: ಸುಗಮವಾಗಿ ನಡೆಸೋದೇ ದೊಡ್ಡ ಸವಾಲು..!

ಪಿಸ್‌ಐ ನೇಮಕಾತಿ, ಕಳೆದ ತಿಂಗಳ ನಡೆದ ಕೆಇಎ ನೇಮಕಾತಿ ಪರೀಕ್ಷೆಗಳಲ್ಲಿ ಬ್ಲೂಟೂತ್‌ ಬಳಸಿ ಅಕ್ರಮ ನಡೆದ ಹಿನ್ನೆಲೆ ಹಾಗೂ ಅಕ್ರಮಕ್ಕೆ ಕಲಬುರಗಿಯೇ ಕೇಂದ್ರವಾಗಿ ಹೊರಹೊಮ್ಮಿರುವುದರಿಂದಾಗಿ ಇಲ್ಲಿನ ಜಿಲ್ಲಾಡಳಿತಕ್ಕೆ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸೋದು ಬಿಸಿ ತುಪ್ಪವಾದಂತಾಗಿದೆ.

KEA Competitive Exam Will Be Held on November 18 and 19th in Kalaburagi grg
Author
First Published Nov 17, 2023, 10:45 PM IST

ಕಲಬುರಗಿ(ನ.17):  ಕಳೆದ ಅ.28 ಹಾಗೂ 29ರಂದು ನಡೆದ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಬ್ಲೂಟೂತ್‌ ಬಳಸಿ ಅಕ್ರಮಗಳು ನಡೆದು, ತನಿಖೆ ಹಂತದಲ್ಲಿರುವಾಗಲೇ ಮತ್ತೆ ಕಲಬುರಗಿಯಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಿವಿಧ ನಿಗಮ-ಮಂಡಳಿಯಲ್ಲಿನ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ನಡೆಯುತ್ತಿವೆ. ಇದೇ ನ.18, 19ರಂದು ಕಲಬುರಗಿ ನಗರದ 16 ಪರೀಕ್ಷಾ ಕೇಂದ್ರಗಳಲ್ಲಿ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿರೋದರಿಂದ ಜಿಲ್ಲಾಡಳಿತ ಕಟ್ಟೆಚ್ಚರಕ್ಕೆ ಮುಂದಾಗಿದೆ.

ಪಿಸ್‌ಐ ನೇಮಕಾತಿ, ಕಳೆದ ತಿಂಗಳ ನಡೆದ ಕೆಇಎ ನೇಮಕಾತಿ ಪರೀಕ್ಷೆಗಳಲ್ಲಿ ಬ್ಲೂಟೂತ್‌ ಬಳಸಿ ಅಕ್ರಮ ನಡೆದ ಹಿನ್ನೆಲೆ ಹಾಗೂ ಅಕ್ರಮಕ್ಕೆ ಕಲಬುರಗಿಯೇ ಕೇಂದ್ರವಾಗಿ ಹೊರಹೊಮ್ಮಿರುವುದರಿಂದಾಗಿ ಇಲ್ಲಿನ ಜಿಲ್ಲಾಡಳಿತಕ್ಕೆ ನೇಮಕಾತಿ ಸ್ಪರ್ಧಾತ್ಮಕ ಪರೀಕ್ಷೆ ನಡೆಸೋದು ಬಿಸಿ ತುಪ್ಪವಾದಂತಾಗಿದೆ.

ಸಿಐಡಿ ಮುಂದೆ ಸ್ಫೋಟಕ ಮಾಹಿತಿ ಬಾಯಿಬಿಟ್ಟ ಆರ್‌.ಡಿ. ಪಾಟೀಲ್‌ ಬಲಗೈ ಬಂಟರು..!

ಕೆಪಿಎಸ್ಸಿ, ಕೆಇಎಯಂತಹ ಪರೀಕ್ಷೆಗಳಿಗೆ ಇನ್ವಿಜಿಲೇಟರ್‌ ಆಗಲಿಕ್ಕೂ ಸರ್ಕಾರಿ ನೌಕರರು ಹಿಂದೇಟು ಹಾಕುವಂತಹ ವಾತಾವರಣ ಇಲ್ಲಿ ಮೂಡಿದೆ. ಈ ಹಿಂದೆ ನಡೆದ ಕೆಪಿಎಸ್‌ಸಿ ಪರೀಕ್ಷೆಗಳಲ್ಲಿ ಅನೇಕ ಕೇಂದ್ರಗಳಲ್ಲಿ ಸಿಬ್ಬಂದಿ ಕೋಣೆ ಪ್ರಭಾರ ವಹಿಸಿಕೊಂಡು ಕಾರ್ಯನಿರ್ವಹಿಸಲೂ ಹಿಂದೇಟು ಹಾಕಿದ್ದಾರೆ. ಇಂತಹ ವಾತಾವರಣದಲ್ಲಿ ಮತ್ತೊಂದು ಸುತ್ತು ಕೆಇಎ ಪರೀಕ್ಷೆಗಳನ್ನು ಇಲ್ಲಿ ನಡೆಸುತ್ತಿದ್ದು ಮತ್ತೆ ಗಮನ ಸೆಳೆದಿದೆ.

ಕಟ್ಟೆಚ್ಚರ ವಹಿಸಲು ಖಡಕ್‌ ಸೂಚನೆ:

ಈ ಸಂಬಂಧ ನಡೆದ ಜಿಲ್ಲಾಡಳಿತ ಕಚೇರಿಯಲ್ಲಿ ಪರೀಕ್ಷೆ ಹಿನ್ನೆಲೆ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿ ಮಾತನಾಡಿರುವ ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಕಳೆದ ಪರೀಕ್ಷೆ ಸಂದರ್ಭದಲ್ಲಿ ಜಿಲ್ಲೆಯಲ್ಲಾದ ಕಹಿ ಘಟನೆ ಮತ್ತೆ ಮರುಕಳಿಸದಂತೆ ತೀವ್ರ ಕಟ್ಟೆಚ್ಚರ ವಹಿಸಬೇಕೆಂದು ಅಧಿಕಾರಿಗಳಿಗೆ ಖಡಕ್ ಸೂಚನೆ ರವಾನಿಸಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಪರೀಕ್ಷೆಯಲ್ಲಿ ಜಿಲ್ಲೆಯ 14,058 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. ಯಾವುದೇ ನಕಲು, ಅಹಿತಕರ ಘಟನೆಗೆ ಅವಕಾಶ ನೀಡದಂತೆ ಪರೀಕ್ಷೆಗೆ ನಿಯೋಜಿಸಿದ ಅಧಿಕಾರಿ, ಸಿಬ್ಬಂದಿ, ವೀಕ್ಷಕರು, ರೂಟ್ ಆಫೀಸ್‌ರ ತುಂಬಾ ಎಚ್ಚರಿಕೆಯಿಂದ ಕೆಲಸ ನಿರ್ವಹಿಸಬೇಕು ಎಂದು ಹೇಳಿದರು.

ನಕಲು ತಡೆಗಟ್ಟಲು ಪ್ರತಿ ಕೇಂದ್ರಕ್ಕೆ ಓಬ್ಬರಂತೆ ವೀಕ್ಷಕರನ್ನಾಗಿ ನೇಮಿಸಲಾಗಿದ್ದು, ವೀಕ್ಷಕರು ಪರೀಕ್ಷೆ ಆರಂಭವಾಗುವ ಒಂದು ಗಂಟೆ ಮುಂಚಿತವಾಗಿ ಪರೀಕ್ಷಾ ಕೆಂದ್ರದಲ್ಲಿ ಹಾಜರಿದ್ದು, ತಪಾಸಣೆ (ಫ್ರಿಸ್ಕಿಂಗ್) ಕಾರ್ಯದ ಉಸ್ತುವಾರಿ ನೋಡಿಕೊಳ್ಳಬೇಕು ಎಂದರು.

ಪರೀಕ್ಷಾ ಸಾಮಗ್ರಿ ತಲುಪಿಸಲು 5 ಜನ ರೂಟ್ ಆಫೀಸ್‌ರ ತಂಡ ನೇಮಿಸಲಾಗಿದೆ. ಪರೀಕ್ಷೆ ಹಿಂದಿನ ದಿನವೇ ಪರೀಕ್ಷಾ ಕೇಂದ್ರದಲ್ಲಿ ಆಸನ ವ್ಯವಸ್ಥೆ, ಕುಡಿಯುವ ನೀರು ಇತ್ಯಾದಿ ವ್ಯವಸ್ಥೆ ಕಲ್ಪಿಸಿರುವ ಕುರಿತು ಕೇಂದ್ರದ ಉಪ ಮುಖ್ಯ ಅಧೀಕ್ಷಕರು ಖಾತ್ರಿ ಪಡಿಸಿಕೊಳ್ಳಬೇಕು. ಯಾವುದೇ ಅಹಿತಕರ ಘಟನೆ ನಡೆದಲ್ಲಿ ಪರೀಕ್ಷಾ ಕೇಂದ್ರದ ಮುಖ್ಯಸ್ಥರು ಮತ್ತು ವೀಕ್ಷಕರನ್ನೆ ಹೊಣೆಗಾರನ್ನಾಗಿ ಮಾಡಲಾಗುವುದು ಎಂದರು.

ಮೊಬೈಲ್ ನಿಷೇಧ:

ಕೇಂದ್ರದ ಆವರಣಕ್ಕೆ ಮೋಬೈಲ್, ಕ್ಯಾಲ್ಕುಲೇಟರ್, ವಾಚ್, ಅನಾಲಾಗ್, ಪೇಜರ್, ವೈರ್‌ಲೆಸ್ ಸೆಟ್, ಸ್ಲೈಡ್ ರೂಲ್ ಕ್ಯಾಲ್ಕುಲೇಟರ್, ಲಾಗ್ ಪುಸ್ತಕ, ಮಾರ್ಕರ್ ಪಠ್ಯಪುಸ್ತಕ, ಬ್ಲೂಟೂಥ್ ಸೇರಿ ಯಾವುದೇ ಎಲೆಕ್ಟ್ರಾನಿಕ್ ಉಪಕರಣ ತೆಗೆದುಕೊಂಡು ಹೋಗುವಂತಿಲ್ಲ. ಪರೀಕ್ಷಾ ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶದ ನಿಷೇಧಿತ ಪ್ರದೇಶವೆಂದು ಈಗಾಗಲೆ ಘೋಷಿಸಲಾಗಿದೆ ಎಂದರು.

ಕೆಇಎ ಪರೀಕ್ಷಾ ಅಕ್ರಮ: ಕಲಬುರಗಿಯಲ್ಲಿ ಸಿಐಡಿ ಉನ್ನತ ಮಟ್ಟದ ತಂಡದಿಂದ ತನಿಖೆ ಶುರು

ಮಂಗಳಸೂತ್ರ-ಕಾಲುಂಗುರಕ್ಕಿಲ್ಲ ನಿಷೇಧ:

ಪರೀಕ್ಷೆ ಆರಂಭಕ್ಕು ಮುನ್ನ ಒಂದು ಗಂಟೆ ಮೊದಲೇ ಕೇಂದ್ರದ ಗೇಟ್ ತೆರೆದು ಮೆಟಲ್ ಡಿಟೆಕ್ಟರ್‌ ನೊಂದಿಗೆ ಕಟ್ಟುನಿಟ್ಟಿನ ಫ್ರಿಸ್ಕಿಂಗ್ ಮಾಡಬೇಕು. ಪ್ರತಿಯೊಬ್ಬ ಅಭ್ಯರ್ಥಿಯನ್ನು ಸೂಕ್ಷ್ಮವಾಗಿ ತಪಾಸಣೆ ಮಾಡಿ ಒಳಗಡೆ ಬಿಡಬೇಕು. ಅಭ್ಯರ್ಥಿಗಳು ಫುಲ್ ಶರ್ಟ್, ಜಾಕೆಟ್, ಶೂಸ್, ಕ್ಯಾಪ್, ಕಿವಿ ಮುಚ್ಚುವ ರೀತಿಯಲ್ಲಿ ಯಾವುದೇ ವಸ್ತ್ರ ಧರಿಸಬಾರದು. ಫ್ರಿಸ್ಕಿಂಗ್ ನೆಪದಲ್ಲಿ ಮಹಿಳಾ ಅಭ್ಯರ್ಥಿಗಳಿಗೆ ಕಾಲುಂಗುರ, ಮಾಂಗಲ್ಯ ತೆಗೆಯುವಂತೆ ಸೂಚನೆ ನೀಡಬಾರದು. ಅದಕ್ಕೆ ಅವಕಾಶ ಕಲ್ಪಿಸಲಾಗಿದೆ.

ಕಿವಿ, ಮುಖ ಮುಚ್ಚದಂತೆ ಹಿಜಾಬ್‌ಗೂ ಅವಕಾಶ:

ಸದರಿ ಪರೀಕ್ಷೆಯಲ್ಲಿ ಹಿಜಾಬ್‍ಗೆ ಅವಕಾಶವಿದ್ದು, ಕಿವಿ ಮತ್ತು ಮುಖ ಮುಚ್ಚಿರಬಾರದು. ಕೆಇಎ ಮಾರ್ಗಸೂಚಿಯನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದ ಅವರು, ಯಾವುದೇ ಅಭ್ಯರ್ಥಿ ಅನುಮಾನಸ್ಪದ ರೀತಿಯಲ್ಲಿ ಕಂಡುಬಂದರೆ ಸೂಕ್ತ ತಪಾಸಣೆಗೆ ಒಳಪಡಿಸಬೇಕು ಎಂದು ಅಧಿಕಾರಿಗಳಿಗೆ ಎಡಿಸಿ ರಾಯಪ್ಪ ಸೂಚಿಸಿದ್ದಾರೆ. ಸಭೆಯಲ್ಲಿ ಎಸಿಪಿ ಭೂತೇಗೌಡ, ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ಉಪನಿರ್ದೇಶಕ ಶಿವಶರಣಪ್ಪ ಮೂಳೇಗಾಂವ ಸೇರಿದಂತೆ ವೀಕ್ಷಕರು, ರೂಟ್ ಆಫೀಸರ್‌ ಇದ್ದರು.

Follow Us:
Download App:
  • android
  • ios