ಬೆಂಗಳೂರಿಗೆ ಕಾವೇರಿ ನೀರು ಸರಬರಾಜು ಮಾಡುವ ತೊರೆಕಾಡನಹಳ್ಳಿ ಬಳಿ ಪೈಪ್‌ಲೈನ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದರಿಂದ ನೀರು ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಿದೆ. ದುರಸ್ತಿ ಕಾರ್ಯ ಆರಂಭವಾಗಿದ್ದು, ಮಧ್ಯಾಹ್ನದೊಳಗೆ ಸರಬರಾಜು ಪುನಃಸ್ಥಾಪನೆಯಾಗುವ ನಿರೀಕ್ಷೆಯಿದೆ.
ಬೆಂಗಳೂರು (ಮೇ 28): ಬೆಂಗಳೂರಿಗೆ ಕಾವೇರಿ ನದಿಯಿಂದ ಕುಡಿಯುವ ನೀರು ಸರಬರಾಜು ಮಾಡುವ ತೊರೆಕಾಡನಹಳ್ಳಿ (ಟಿಕೆ ಹಳ್)ಳಿ ಬಳಿ ನಂಜಾಪುರ ಗ್ರಾಮ ಪ್ರದೇಶದಲ್ಲಿರುವ ಕಾವೇರಿ ಹಂತ 5ರ ಪ್ರಮುಖ ಪೈಪ್‌ಲೈನ್‌ನ ಸ್ಕೌರ್ ವಾಲ್ವ್‌ನಲ್ಲಿ ಇಂದು ಬೆಳಿಗ್ಗೆ ತಾಂತ್ರಿಕ ದೋಷ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ, ಬೆಂಗಳೂರು ನಗರಾದ್ಯಂತ ಕಾವೇರಿ ಕುಡಿಯುವ ನೀರಿನ ಸರಬರಾಜಿನಲ್ಲಿ ತಾತ್ಕಾಲಿಕ ವ್ಯತ್ಯಯ ಉಂಟಾಗಿದೆ ಎಂದು ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯೂಎಸ್‌ಎಸ್‌ಬಿ) ತಿಳಿಸಿದೆ.
ಬೆಂಗಳೂರು ಜಲಮಂಡಳಿ ಪ್ರಕಟಣೆಯ ಪ್ರಕಾರ, ತಕ್ಷಣ ತಾಂತ್ರಿಕ ತಂಡ ಸ್ಥಳಕ್ಕೆ ಧಾವಿಸಿ ದುರಸ್ತಿ ಕಾರ್ಯ ಆರಂಭಿಸಿದೆ. ಮಳೆಯ ನಡುವೆಯೂ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿ, ಮಧ್ಯಾಹ್ನದೊಳಗೆ ಹೊಸ ವಾಲ್ವ್ ಅಳವಡಿಸಿ ಸರಬರಾಜು ಪುನಃಸ್ಥಾಪಿಸಲು ಶ್ರಮಿಸುತ್ತಿದ್ದಾರೆ. ಹಂತ 5 ಮೂಲಕ ನೀರು ಪಡೆಯುವ ಪ್ರದೇಶಗಳಿಗೆ ಈ ವ್ಯತ್ಯಯ ಪರಿಣಾಮ ಬೀರುವ ಸಾಧ್ಯತೆ ಇದ್ದು, ಜನತೆ ಸಹಕಾರ ನೀಡಬೇಕೆಂದು ಜಲಮಂಡಳಿ ವಿನಂತಿಸಿದೆ. ಈ ತಾತ್ಕಾಲಿಕ ಅಡಚಣೆಗೆ ವಿಷಾದ ವ್ಯಕ್ತಪಡಿಸಿರುವ ಜಲಮಂಡಳಿ, ಬೇಗನೇ ಸರಬರಾಜು ಸಹಜಗತಿಗೆ ಬರುವಂತಾಗಲಿದೆ ಎಂಬ ಭರವಸೆ ನೀಡಿದೆ. ಜನತೆ ಸಹಕರಿಸಬೇಕೆಂದು ಜಲಮಂಡಳಿ ಕೋರಿದೆ.
