ಬೆಂಗಳೂರು ಜಲಮಂಡಳಿಯ ಆನ್‌ಲೈನ್ ಅರ್ಜಿ ಪೋರ್ಟಲ್‌ಗೆ ಸೈಬರ್ ದಾಳಿ ಯತ್ನ ವಿಫಲ. ದತ್ತಾಂಶ ಕದಿಯುವ ಪ್ರಯತ್ನ ತಡೆದು, ಸೈಬರ್ ಠಾಣೆಗೆ ದೂರು ದಾಖಲು. ಪ್ರಾಥಮಿಕ ತನಿಖೆಯಲ್ಲಿ ಸೂಕ್ಷ್ಮ ಗ್ರಾಹಕ ಮಾಹಿತಿ ಸೋರಿಕೆಯಾಗಿಲ್ಲ. ದತ್ತಾಂಶವನ್ನು ಸುರಕ್ಷಿತ ಸರ್ವರ್‌ಗಳಿಗೆ ವರ್ಗಾಯಿಸಿ, ಭದ್ರತೆ ಹೆಚ್ಚಿಸಲಾಗಿದೆ.
ಬೆಂಗಳೂರು (ಏ.30) : ಬೆಂಗಳೂರು ನೀರಾವರಿ ಮತ್ತು ಒಳಚರಂಡಿ ಮಂಡಳಿಯ (BWSSB) ಆನ್‌ಲೈನ್ ಅರ್ಜಿ ಸಲ್ಲಿಕೆಯ ಪೋರ್ಟಲ್‌ಗೆ ಸೈಬರ್ ದಾಳಿಯ ಯತ್ನ ನಡೆದಿದ್ದು, ಪ್ರಾಥಮಿಕ ಹಂತದ ತನಿಖೆಯಲ್ಲಿ ಸೂಕ್ಷ್ಮ ಗ್ರಾಹಕ ಮಾಹಿತಿ ಸೋರಿಕೆಯಾಗಿಲ್ಲ ಎನ್ನುವುದು ತಿಳಿದು ಬಂದಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ತಿಳಿಸಿದ್ದಾರೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯನ್ನು ನೀಡಿರುವ ಅವರು, ಏಪ್ರಿಲ್ 11 ರಂದು ಬೆಳಿಗ್ಗೆ ಜಲಮಂಡಳಿಯ ಆನ್‌ಲೈನ್ ವಾಟರ್ ಕನೆಕ್ಷನ್ ಅರ್ಜಿ ಸಲ್ಲಿಸುವ ವೆಬ್‌ಸೈಟ್‌ನಿಂದ ದತ್ತಾಂಶ ಕದಿಯುವ ಪ್ರಯತ್ನಗಳನ್ನು ನಡೆಸಲಾಗಿದೆ. ಈ ಬಗ್ಗೆ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ ನ ಮಾಹಿತಿಯ (CERT-In) ನಂತರ ನಮ್ಮ ಇಂಜಿನೀಯರ್‌ಗಳು ದಾಳಿಯನ್ನು ತಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈ ಬಗ್ಗೆ ಹೆಚ್ಚಿನ ತನಿಖೆಯ ದೃಷ್ಟಿಯಿಂದ ಸೈಬರ್ ಠಾಣೆಗೆ ದೂರು ದಾಖಲಿಸಲಾಗಿದೆ.
ಬೆಂಗಳೂರು ಜಲಮಂಡಳಿಯ ಗ್ರಾಹಕರ ದತ್ತಾಂಶಗಳನ್ನು ಕರ್ನಾಟಕ ಸರ್ಕಾರ ನಿರ್ವಹಿಸುವಂತಹ ರಾಜ್ಯ ದತ್ತಾಂಶ ಕೇಂದ್ರದಲ್ಲಿ ಸಂಗ್ರಹಿಸಲಾಗಿದೆ. ನೀರಿನ ಸಂಪರ್ಕಕ್ಕೆ ಅರ್ಜಿಗಳನ್ನು ಸಲ್ಲಿಸುವ ವೆಬ್‌ಸೈಟ್ ಪೋರ್ಟ್‌ಲ್ ಮೇಲೆ ದಾಳಿ ಮಾಡುವ ಪ್ರಯತ್ನ ನಡೆದಿದೆ. ಈ ಸೈಬರ್ ದಾಳಿಯನ್ನು ನಮ್ಮ ಇಂಜಿನಿಯರ್‌ಗಳು ಯಶಸ್ವಿಯಾಗಿ ತಡೆಗಟ್ಟಲಾಗಿದೆ. ಸೈಬರ್ ದಾಳಿಕೋರರು ನಮ್ಮ ಒಟ್ಟಾರೆ ಗ್ರಾಹಕರ ದತ್ತಾಂಶದಲ್ಲಿ ಕೆಲವೇ ಭಾಗದ ಮಾಹಿತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದು, ಪ್ರಾಥಮಿಕ ಹಂತದಲ್ಲಿ ಗ್ರಾಹಕರ ಸೂಕ್ಷ್ಮ ಮಾಹಿತಿಗಳು ಸೋರಿಕೆಯಾಗಿಲ್ಲ ಎನ್ನುವುದು ತಿಳಿದು ಬಂದಿದೆ.
ಕೇಂದ್ರೀಕೃತ ಸರ್ವರ್ ಗಳಿಗೆ ದತ್ತಾಂಶ ವರ್ಗಾವಣೆ:
ಜಲಮಂಡಳಿಯ ಪೋರ್ಟಲ್ ಮೇಲೆ ಇಂತಹ ಪ್ರಕರಣಗಳು ಮರುಕಳಿಸದಂತೆ ಎಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈ ವೆಬ್‌ಸೈಟ್‌ನಲ್ಲಿದ್ದಂತಹ ದತ್ತಾಂಶಗಳನ್ನು ಹೆಚ್ಚು ಸುರಕ್ಷಿತ ಕೇಂದ್ರೀಕೃತ ಸರ್ವರ್‌ಗಳಿಗೆ ವರ್ಗಾಯಿಸಲಾಗಿದೆ. ಪಾರದರ್ಶಕ, ಸುರಕ್ಷಿತ ಹಾಗೂ ಟ್ಯಾಂಪರ್ - ರೆಸಿಸ್ಟಾಂಟ್ ಪ್ಲಾಟ್‌ಫಾರಂ ಆಗಿರುವಂತಹ ಬ್ಲಾಕ್‌ಚೈನ್‌ನಂತಹ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಇನ್ನು 'ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳ ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ಬ್ಲಾಕ್‌ಚೇನ್ ತಂತ್ರಜ್ಞಾನವನ್ನು ಭವಿಷ್ಯದ ದೀರ್ಘಕಾಲಿಕ ಕ್ರಮವಾಗಿ ಪರಿಗಣಿಸಲಾಗುತ್ತಿದೆ'. ಈ ಪ್ರಕರಣದ ಹೆಚ್ಚಿನ ತನಿಖೆಗಾಗಿ ಬಗ್ಗೆ ದೂರು ಸಲ್ಲಿಸಲಾಗಿದ್ದು, ದತ್ತಾಂಶದ ಮಾರಾಟ ಹಾಗೂ ಅದರ ದುರುಪಯೋಗ ಪಡೆದುಕೊಳ್ಳುವವರ ವಿರುದ್ದ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಜಲಮಂಡಳಿ ಅಧ್ಯಕ್ಷ ಡಾ.ರಾಮ್ ಪ್ರಸಾತ್ ಮನೋಹರ್ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನು ಗ್ರಾಹಕರ ಮಾಹಿತಿಯ ಭದ್ರತೆಗೆ BWSSB ಬದ್ಧವಾಗಿದ್ದು, ಸಾರ್ವಜನಿಕ ಸೇವೆಗಳ ನಿರ್ವಹಣೆಗೆ ದೃಢವಾದ ಡಿಜಿಟಲ್ ಮೂಲಸೌಕರ್ಯ ನಿರ್ಮಾಣಕ್ಕೆ ಸಕ್ರೀಯವಾಗಿದೆ ಎಂದು ಸಂಸ್ಥೆ ತಿಳಿಸಿದ್ದಾರೆ.
ರಾಜಸ್ಥಾನ ಶಿಕ್ಷಣ ಇಲಾಖೆ ಸೈಬರ್ ಹ್ಯಾಕ್ ಮಾಡಿದ್ದ ಪಾಕಿಸ್ತಾನ:
ರಾಜಸ್ಥಾನ ಶಿಕ್ಷಣ ಇಲಾಖೆಯ ಅಧಿಕೃತ ಪೋರ್ಟಲ್ ಅನ್ನು ಹ್ಯಾಕ್ ಮಾಡಲಾಗಿದ್ದು, ಶಿಕ್ಷಣ ಇಲಾಖೆಯ ವೆಬ್ ಪೋರ್ಟಲ್‌ನ ಮುಖಪುಟದಲ್ಲಿ 'ಪಾಕಿಸ್ತಾನ ಸೈಬರ್ ಫೋರ್ಸ್' ಎಂಬ ಹೆಸರಿನಲ್ಲಿ ಪ್ರಚೋದನಕಾರಿ ಸಂದೇಶಗಳ ಸರಣಿಗಳನ್ನು ಪ್ರದರ್ಶನ ಮಾಡಲಾಗಿತ್ತು. ಅದರಲ್ಲಿ ಒಂದು ಸಂದೇಶವು ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ಆಂತರಿಕವಾಗಿ ಆಯೋಜಿಸಲಾಗಿದೆ. ಇದು'ದೇಶದ ಒಳಗಿನ ಕೃತ್ಯ' ಎಂದು ಹೇಳಿಕೊಂಡಿದೆ. ಜೊತೆಗೆ, ಇನ್ನೊಂದು ಸಂದೇಶವು ಈ ಘಟನೆಯನ್ನು 'ಸಂಘರ್ಷ ಮತ್ತು ಧಾರ್ಮಿಕ ವಿಭಜನೆಯನ್ನು ಪ್ರಚೋದಿಸಲು ವಿನ್ಯಾಸಗೊಳಿಸಲಾದ ಭಾರತ ಸರ್ಕಾರದ ತಂತ್ರ ಎಂದು ಟೀಕೆ ಮಾಡಲಾಗಿತ್ತು. ಪಹಲ್ಗಾಮ್‌ನ ಉಗ್ರರ ದಾಳಿಯಲ್ಲಿ ಹುತಾತ್ಮರಾದ ದಿವಂಗತ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರು ಪತಿಯ ಶವದ ಪಕ್ಕದಲ್ಲಿ ಕುಳಿತ ಫೋಟೋ ಭಾರೀ ವೈರಲ್ ಆಗಿತ್ತು. ಈ ಫೋಟೋವನ್ನು ಪ್ರದರ್ಶನ ಮಾಡಿದ್ದ ಸೈಬರ್ ಹ್ಯಾಕರ್‌ಗಳು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಬರೆದಿದ್ದರು.


