ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಇಬ್ಬರು ಕನ್ನಡಿಗರು ಸೇರಿ ೨೪ ಪ್ರವಾಸಿಗರು ಮೃತಪಟ್ಟಿದ್ದಾರೆ. ಸಿಲುಕಿರುವ ೧೫೦ಕ್ಕೂ ಹೆಚ್ಚು ಕನ್ನಡಿಗರ ರಕ್ಷಣೆಗೆ ಸರ್ಕಾರ ಸಹಾಯವಾಣಿ (೦೮೦-೪೩೩೪೪೩೩೪/೩೫/೩೬) ಆರಂಭಿಸಿದೆ. ಸಚಿವ ಸಂತೋಷ್ ಲಾಡ್ ಕಾಶ್ಮೀರಕ್ಕೆ ತೆರಳಿದ್ದು, ೯೮೪೫೭೩೯೯೯೯ ಸಂಪರ್ಕಿಸಬಹುದು. ಪ್ರವಾಸಿಗರ ಮಾಹಿತಿಯನ್ನು ಸಹಾಯವಾಣಿಗೆ ನೀಡಲು ಕೋರಲಾಗಿದೆ.

ಕಾಶ್ಮೀರ (ಏ.23): ಜಮ್ಮು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಿನ್ನೆ ನಡೆದ ಉಗ್ರರ ದಾಳಿಯಿಂದ ಇಬ್ಬರು ಕನ್ನಡಿಗರು ಸೇರಿ 24 ಪ್ರವಾಸಿಗರು ಸಾವಿಗೀಡಾಗಿದ್ದಾರೆ. ಇನ್ನೂ 150ಕ್ಕೂ ಅಧಿಕ ಕನ್ನಡಿಗರು ಕಾಶ್ಮೀರದಲ್ಲಿ ಪ್ರವಾಸಕ್ಕೆಂದು ಹೋಗಿ ಸಿಲುಕಿದ್ದಾರೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರದಿಂದ ಕನ್ನಡಿಗರ ರಕ್ಷಣೆಗಾಗಿ ಸಹಾಯವಾಣಿ 080-43344334/35/36 ಆರಂಭಿಸಿದ್ದು, ಇದೀಗ ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರನ್ನು ಕೂಡ ಕಾಶ್ಮೀರಕ್ಕೆ ಕಳುಹಿಸಲಾಗಿದೆ. ಜೊತೆಗೆ, ಕನ್ನಡಿಗರ ಸಹಾಯಕ್ಕಾಗಿ ತಮ್ಮದೇ ಮೊಬೈಲ್ ನಂಬರ್ 9845739999 ಅನ್ನು ಕೂಡ ಕೊಟ್ಟಿದ್ದಾರೆ.

ಕಾಶ್ಮೀರಕ್ಕೆ ತೆರಳಿರುವ ಕರ್ನಾಟಕದ ಪ್ರವಾಸಿಗರ ವಿವರ ನೀಡಲು ಸಹಾಯವಾಣಿಯನ್ನು ಆರಂಭಿಸಲಾಗಿದೆ. ಕಾಶ್ಮೀರದ ಪಹಲ್‌ಗಾಮ್‌ನಲ್ಲಿ ಉಗ್ರರ ದಾಳಿಯಿಂದ ಕನ್ನಡಿಗರಿಬ್ಬರು ಸಾವಿಗೀಡಾಗಿರುವುದು ವಿಷಾದನೀಯ ಸಂಗತಿ. ಆದ್ದರಿಂದ ಜಮ್ಮು-ಕಾಶ್ಮೀರದ ಪ್ರವಾಸಕ್ಕೆ ತೆರಳಿರುವ ಕನ್ನಡಿಗರನ್ನು ರಾಜ್ಯಕ್ಕೆ ಮರಳಿ ತರಲು ರಾಜ್ಯ ಸರ್ಕಾರವು ಪ್ರಯತ್ನಿಸುತ್ತಿದೆ. ಆದ್ದರಿಂದ ಕರ್ನಾಟಕದಲ್ಲಿ ಪ್ರವಾಸ ನಿರ್ವಹಿಸುತ್ತಿರುವ ಪ್ರವಾಸಿ ಏಜೆಂಟ್‌ಗಳ (Tour Operators & Travel Agents) ಮೂಲಕ ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿರುವ ಪ್ರಯಾಣಿಕರ ವಿವರಗಳನ್ನು ಈ ಕೆಳಕಂಡ Helpline (ಸಹಾಯವಾಣಿಗೆ) ನೀಡಬೇಕೆಂದು ಕೋರಿದೆ.

ಇದನ್ನೂ ಓದಿ: Sketches of Terrorists: ಪಹಲ್ಗಾಮ್ ದಾಳಿಯ ಮೂವರು ಶಂಕಿತ ಉಗ್ರರ ರೇಖಾಚಿತ್ರ ಬಿಡುಗಡೆ

ಜೊತೆಗೆ, ಜಮ್ಮು-ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿರುವ ಪ್ರವಾಸಿಗರ ಸಂಬಂಧಿಕರು ಅಥವಾ ಪರಿಚಯಸ್ಥರು ಪ್ರವಾಸಕ್ಕೆ ತೆರಳಿರುವವರ ವಿವರಗಳನ್ನು ಈ Helpline - ಸಹಾಯವಾಣಿ ಸಂಖ್ಯೆ 080-43344334 / 35 / 36 / 42 ಗಳನ್ನು ಸಂಪರ್ಕಿಸಿ ನೀಡಬೇಕೆಂದು ಪ್ರವಾಸೋದ್ಯಮ ಇಲಾಖೆಯ ನಿರ್ದೇಶಕರು ಪ್ರಕಟಣೆಯಲ್ಲಿ ಕೋರಿದ್ದಾರೆ.