Asianet Suvarna News Asianet Suvarna News

ಕಾಶಿ, ಮಥುರಾಗಳ ವಿಮೋಚನೆಯಾಗಲೇಬೇಕು: ಪೇಜಾವರ ಶ್ರೀ

ಮುಸ್ಲಿಮರಿಗೆ ಮೆಕ್ಕ ಹೇಗೋ, ಕ್ರಿಶ್ಚಿಯನ್ನರಿಗೆ ಜೆರುಸುಲೆಂ ಹೇಗೋ ಹಿಂದೂಗಳಿಗೂ ಮಥುರಾ ಕಾಶಿ ಅಯೋಧ್ಯೆಗಳು ಮೋಕ್ಷದಾಯಕ ಕ್ಷೇತ್ರಗಳಾಗಿವೆ. ಅವುಗಳ ವಿಮೋಚನೆಯಾಗಬೇಕಾಗಿದೆ ಎಂದು ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥರಾಗಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದ್ದಾರೆ. 
 

Kashi and Mathura must be liberated Says Vishwaprasanna Theertha Swamiji gvd
Author
First Published Dec 20, 2023, 7:43 AM IST

ಉಡುಪಿ (ಡಿ.20): ಮುಸ್ಲಿಮರಿಗೆ ಮೆಕ್ಕ ಹೇಗೋ, ಕ್ರಿಶ್ಚಿಯನ್ನರಿಗೆ ಜೆರುಸುಲೆಂ ಹೇಗೋ ಹಿಂದೂಗಳಿಗೂ ಮಥುರಾ ಕಾಶಿ ಅಯೋಧ್ಯೆಗಳು ಮೋಕ್ಷದಾಯಕ ಕ್ಷೇತ್ರಗಳಾಗಿವೆ. ಅವುಗಳ ವಿಮೋಚನೆಯಾಗಬೇಕಾಗಿದೆ ಎಂದು ಅಯೋಧ್ಯೆ ರಾಮಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ವಿಶ್ವಸ್ಥರಾಗಿರುವ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀಪಾದರು ಹೇಳಿದ್ದಾರೆ. ಮಂಗಳವಾರ ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕಿದಾಗ ಈ ಧಾರ್ಮಿಕ ಕ್ಷೇತ್ರಗಳು ಕೂಡ ವಿಮೋಚನೆಗೊಳ್ಳಬೇಕಿತ್ತು, ಆಗಲಿಲ್ಲ, ಈಗ ಸ್ವಾತಂತ್ರ್ಯ ದೊರಕಿ 75 ವರ್ಷದ ಮೇಲಾದರೂ ಅವುಗಳು ವಿಮೋಚನೆಗೊಳ್ಳಲಿ ಎಂದವರು ಆಶಿಸಿದರು.

ಅಯೋಧ್ಯೆಗೆ ಸಂಬಂಧಿಸಿದ ತೀರ್ಪಿನಂತೆ ಕಾಶಿ ಮಥುರ ವಿಚಾರದಲ್ಲೂ ನ್ಯಾಯಾಲಯ ಅನುಕೂಲಕರ ತೀರ್ಪು ನೀಡುತ್ತಿದೆ. ಅದನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದ ಶ್ರೀಗಳು, ಈ ಕ್ಷೇತ್ರಗಳ ವಿಮೋಚನೆಯ ಗುರಿ ಮುಟ್ಟುವ ತನಕ ಹೋರಾಟ ನಿಲ್ಲಬಾರದು ಎಂದರು. ನಾವ್ಯಾರು ಬಲತ್ಕಾರವಾಗಿ ಈ ಕ್ಷೇತ್ರಗಳನ್ನು ವಶಪಡಿಸಿಕೊಳ್ಳುತ್ತಿಲ್ಲ, ದೇಶದ ಸಂವಿಧಾನಕ್ಕೆ ಬದ್ಧವಾಗಿ ಈ ಕ್ಷೇತ್ರಗಳನ್ನು ಕೇಳುತಿದ್ದೇವೆ, ಇದನ್ನು ಎಲ್ಲರೂ ಬೆಂಬಲಿಸಬೇಕೇ ಹೊರತು ವಿರೋಧಿಸಬಾರದು ಎಂದು ಅಭಿಪ್ರಾಯಪಟ್ಟರು.

ಡಿ.23ರಿಂದ ನಿತ್ಯ 5000 ಕೋವಿಡ್‌ ಪರೀಕ್ಷೆ: ಸಚಿವ ದಿನೇಶ್‌ ಗುಂಡೂರಾವ್‌

ಅಯೋಧ್ಯೆಯ ರಾಮಮಂದಿರ ನಿರ್ಮಾಣದಲ್ಲಿ ಕರ್ನಾಟಕದ ಪಾತ್ರ ಕೂಡ ಇದೆ, ಕರ್ನಾಟಕದಿಂದಲೂ ಮಂದಿರ ನಿರ್ಮಾಣದಲ್ಲಿ ಅನೇಕ ಸೇವೆಗಳು ಸಲ್ಲುತ್ತಿವೆ. ಮಂದಿರದ ವೇದಿಕೆ ನಿರ್ಮಾಣಕ್ಕೆ ಕರ್ನಾಟಕದ ಕಲ್ಲುಗಳು ಬಳಕೆಯಾಗಿವೆ. ಕರ್ನಾಟಕದ ಅನೇಕ ಇಂಜಿನಿಯರ್ ಗಳು ಉಸ್ತುವಾರಿಗಳು ಅಲ್ಲಿ ಕೆಲಸ ಮಾಡುತ್ತಿದ್ದಾರೆ, ಕರ್ನಾಟಕದವರು ಬೃಹತ್ ಗಾತ್ರದ ಗಂಟೆಗಳನ್ನು ನಿರ್ಮಾಣ ಮಾಡಿ ಕಳುಹಿಸಿಕೊಟ್ಟಿದ್ದಾರೆ ಎಂದು ಶ್ರೀಗಳು ಹೇಳಿದರು.

ಮಥುರಾ ಕೂಡ ವಿಮೋಚನೆ ಆಗಬೇಕು: ಅಯೋಧ್ಯೆ ವಿಮೋಚನೆಯಾದಂತೆ, ಮಥುರಾ ವಿಮೋಚನೆಯೂ ಆಗಬೇಕಾಗಿದೆ. ಅಯೋಧ್ಯೆ ರಾಮಮಂದಿರ ಹೋರಾಟದಂತೆ ಹಿಂದೂಗಳು ಮಥುರಾ ಕೃಷ್ಣಮಂದಿರದ ಹೋರಾಟಕ್ಕೆ ಸಿದ್ಧರಾಗಬೇಕಾಗಿದೆ ಎಂದು ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನ ತೀರ್ಥರು ಕರೆ ನೀಡಿದರು. 60 ಸಂವತ್ಸರಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಪೇಜಾವರ ಮಠಾಧೀಶ ಶ್ರೀ ವಿಶ್ವಪ್ರಸನ್ನ ತೀರ್ಥರಿಗೆ ಉಡುಪಿಯ ರಥಬೀದಿಯಲ್ಲಿ ಸುವರ್ಣಾಭಿಷೇಕ, ಪುಷ್ಪಾಭಿಷೇಕ ನಡೆಸಿ, ಗೌರವ ಕಾಣಿಕೆ ಸಮರ್ಪಿಸಿ ಅಭಿವಂದಿಸಲಾಯಿತು‌. 

ಜಾತಿ ಗಣತಿ ಬಗ್ಗೆ ಅನುಮಾನ: ಸಿದ್ದರಾಮಯ್ಯಗೆ ಸಚಿವ ಈಶ್ವರ ಖಂಡ್ರೆ ಮನವಿ

ತಮ್ಮ ಷಷ್ಠ್ಯಬ್ದಿ ಪೂರ್ತಿ ಸಂದರ್ಭ ಸಾರ್ವಜನಿಕರಿಂದ ಅಭಿವಂದನೆ ಸ್ವೀಕರಿಸಿ ಆಶೀರ್ವಚನ ನೀಡಿದ ಶ್ರೀಗಳು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ಕನಸು ನನಸಾಯಿತು ಎಂದು ಮೈಮರೆತರಾಗಲಿಕ್ಕಿಲ್ಲ. ಮೋದಿ, ಯೋಗಿ ಅವರನ್ನು ಅಧಿಕಾರದಿಂದ ಕೆಳಗಿಳಿಸಿ ರಾಮಮಂದಿರ ಕಿತ್ತೊಗೆಯುತ್ತೇವೆ ಎಂಬ ಭಂಡ ಹೇಳಿಕೆಗಳು ಕೇಳಿ ಬರುತ್ತಿವೆ. ಹಿಂದೂಗಳು ಹಿಂದೂಗಳಾಗಿ ಉಳಿದುಕೊಂಡರೆ ಮಾತ್ರ ಶತಮಾನದ ಹೋರಾಟದಿಂದ ಸಾಕಾರಗೊಂಡ ರಾಮಮಂದಿರ ಉಳಿಯುತ್ತದೆ ಎಂದು ಹೇಳಿದರು. ರಾಮಮಂದಿರ ನಿರ್ಮಾಣ ಆಯಿತು, ಮುಂದೆ ರಾಮರಾಜ್ಯದ ಸ್ಥಾಪನೆಯಾಗಬೇಕು. ಅನಗತ್ಯ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸೂರಿಲ್ಲದವರಿಗೆ ಮನೆ ಕಟ್ಟಿಕೊಡಬೇಕು. ರಾಮಮಂದಿರ ನಿರ್ಮಾಣಕ್ಕೆ ದೇಶ ಕೈಜೋಡಿಸಿದಂತೆ ಬಡವರಿಗೆ ಮನೆ ಕಟ್ಟಿಸಿಕೊಡುವ ಅಭಿಯಾನಕ್ಕೆ ಕೈಜೋಡಿಸಬೇಕು ಎಂದವರು ಮನವಿ ಮಾಡಿದರು.

Follow Us:
Download App:
  • android
  • ios