Utttara Kannada: ರಾಷ್ಟ್ರೀಯ ಹೆದ್ದಾರಿ 63ರ ರಿಪೇರಿಗೆ ಘಳಿಗೆ ಬಂದಿಲ್ವಾ?: ಸಾರ್ವಜನಿಕರ ಆಕ್ರೋಶ
ಕಳೆದ 3 ತಿಂಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನಬಾಗಿಲು ಸಮೀಪದ ನವಗದ್ದೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಕಿರು ಸೇತುವೆ ಅಂಚಿನ ರಸ್ತೆ ಕುಸಿದು ಕಂದಕ ಉಂಟಾಗಿತ್ತು.
ಕಾರವಾರ (ಡಿ.26): ಕಳೆದ 3 ತಿಂಗಳ ಹಿಂದೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಕಂಚಿನಬಾಗಿಲು ಸಮೀಪದ ನವಗದ್ದೆ ರಾಷ್ಟ್ರೀಯ ಹೆದ್ದಾರಿ 63ರಲ್ಲಿ ಕಿರು ಸೇತುವೆ ಅಂಚಿನ ರಸ್ತೆ ಕುಸಿದು ಕಂದಕ ಉಂಟಾಗಿತ್ತು. ಘಟನೆ ಸಂಭವಿಸಿ 3 ತಿಂಗಳು ಕಳೆದರೂ ಕೂಡಾ ಇಲಾಖೆ ಮಾತ್ರ ದುರಸ್ಥಿಗೊಳಿಸದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಅತಿಯಾದ ಮಳೆ, ಭಾರಿ ವಾಹನಗಳ ನಿರಂತರ ಓಡಾಟಗಳಿಂದ ಹೆದ್ದಾರಿ ಸೇತುವೆಯ ರಸ್ತೆ ಒಂದು ಅಂಚಿನಲ್ಲಿ ದೊಡ್ಡ ಕಂದಕ ಉಂಟಾಗಲು ಕಾರಣ ಎನ್ನಲಾಗಿದೆ.
ಘಟನೆ ನಡೆದ ತಕ್ಷಣವೇ ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಬ್ಯಾರಿಕೇಡ್ ಅಳವಡಿಸಿ ರಸ್ತೆಯ ಒಂದು ಬದಿಯಲ್ಲಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು. ಆದರೆ, ಇದೀಗ ಕಳೆದ 3 ತಿಂಗಳಿನಿಂದ ರಸ್ತೆಯ ಒಂದು ಬದಿಯಲ್ಲಿಯೇ ಎರಡು ದಿಕ್ಕಿನ ವಾಹನಗಳು ಓಡಾಟ ನಡೆಸಬೇಕಾದ ಅನಿವಾರ್ಯತೆ ಇದೆ. ಆ ರಸ್ತೆಯೂ ಕೂಡ ಜಲ್ಲಿ ಕಲ್ಲುಗಳಿಂದ ಹದಗೆಟ್ಟು ಹೋಗಿದೆ. ಭಾರಿ ವಾಹನಗಳ ನಿರಂತರ ಓಡಾಟದಿಂದ ಈ ರಸ್ತೆ ಏನಾದರೂ ಸಡಿಲಗೊಂಡು ಕುಸಿದರೆ ಅಂಕೋಲಾ-ಯಲ್ಲಾಪುರ ರಾ.ಹೆ 63 ರಸ್ತೆ ಸಂಚಾರ ಸಂಪೂರ್ಣ ನಿಷ್ಕ್ರಿಯವಾಗುವ ಎಲ್ಲಾ ಸಾಧ್ಯತೆಗಳು ಇವೆ.
ಧರ್ಮವನ್ನು ನಾವು ರಕ್ಷಿಸದರೆ ನಮ್ಮನ್ನು ಧರ್ಮ ರಕ್ಷಿಸುತ್ತದೆ: ಶಾಸಕ ರೇಣುಕಾಚಾರ್ಯ
ಇದೀಗ ವಾಹನ ಸವಾರರು ಈ ಭಾಗದಲ್ಲಿ ಸಂಚರಿಸುವಾಗ ಹೈರಾಣಾಗುವ ಸ್ಥಿತಿ ನಿರ್ಮಾಣಗೊಂಡಿದೆ. ಕಳೆದೊಂದು ವಾರದ ಹಿಂದೆ ಇದೇ ಸ್ಥಳದಲ್ಲಿ ಕಾರೊಂದು ನಿಯಂತ್ರಣ ತಪ್ಪಿ ಪಕ್ಕದ ಹೊಂಡಕ್ಕೆ ಪಲ್ಟಿಯಾದ ಘಟನೆಯೂ ನಡೆದಿದೆ. ಇಲಾಖೆ ಶೀಘ್ರವೇ ಗಮನವಹಿಸಿ ದುರಸ್ಥಿ ಮಾಡದೇ ಇದ್ದಲ್ಲಿ ಮುಂದಾಗಬಹುದಾದ ಭಾರಿ ಅವಘಡಕ್ಕೆ ಹೊಣೆಯಾಗಬೇಕಾದೀತು ಎಂಬುದು ಸ್ಥಳೀಯರ ಅಭಿಪ್ರಾಯ. ಇನ್ನು ಸಂಬಂಧ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಮಹೇಶ ನಾಯ್ಕರನ್ನು ಸಂಪರ್ಕಿಸಿದಾಗ ತಾತ್ಕಾಲಿಕವಾಗಿ ಹದಗೆಟ್ಟ ರಸ್ತೆಯನ್ನು ಸರಿಪಡಿಸುತ್ತೇವೆ.
ಒಕ್ಕಲಿಗ ಮೀಸಲಾತಿ ಹೋರಾಟಕ್ಕೆ ಸದಾ ಬೆಂಬಲ: ಎಚ್.ಡಿ.ಕುಮಾರಸ್ವಾಮಿ
ಜನವರಿ 15ರೊಳಗೆ ರಸ್ತೆಯಲ್ಲಿ ಉಂಟಾದ ಕಂದಕದ ದುರಸ್ಥಿ ಮಾಡುವ ಮೂಲಕ ವಾಹನ ಸಂಚಾರಕ್ಕೆ ಮುಕ್ತಗೊಳಿಸುತ್ತೇವೆ ಅನ್ನೋ ಭರವಸೆ ನೀಡಿದ್ದಾರೆ. 3 ತಿಂಗಳ ಹಿಂದೆ ಘಟನೆ ನಡೆದ ಸಂದರ್ಭ ಸೇತುವೆಯ ಅಡಿಯಲ್ಲಿ ಚಿಕ್ಕ ಹಳ್ಳ ಹರಿಯುತ್ತಿದ್ದ ಕಾರಣ ಕಾಮಗಾರಿ ಕೈಗೊಳ್ಳಲು ಹಿನ್ನೆಡೆ ಆಗಿತ್ತು ಎಂದೆನ್ನಲಾಗಿದೆ. ಅದೇನೆ ಇದ್ದರೂ ನಿತ್ಯ ಸುಮಾರು 15,000 ಕ್ಕೂ ಅಧಿಕ ವಾಹನಗಳು ಓಡಾಟ ನಡೆಸುವ ಈ ರಾಷ್ಟ್ರೀಯ ಹೆದ್ದಾರಿ ನಿರ್ವಹಣೆಯಲ್ಲಿ ನಿರ್ಲಕ್ಷ್ಯ ತೋರುವುದು ಎಷ್ಟು ಸರಿ ? ಏನಾದರೂ ಹೆಚ್ಚು ಕಡಿಮೆ ಆದರೆ ಮುಂದಾಗುವ ಅನಾಹುತಕ್ಕೆ ಹೊಣೆಯಾದರೂ ಯಾರು? ಈ ಬಗ್ಗೆ ಅಧಿಕಾರಿಗಳು ಗಂಭೀರವಾಗಿ ಚಿಂತಿಸಬೇಕಿದೆ. ಆದಷ್ಟು ಬೇಗ ದುರಸ್ಥಿ ಕಾರ್ಯ ಕೈಗೊಳ್ಳಲಿ ಎಂಬುದು ಸಾರ್ವಜನಿಕರ ಆಗ್ರಹವೂ ಆಗಿದೆ.