ರಾಜ್ಯದ ನಕ್ಸಲ್ ಗ್ಯಾಂಗೇ ಶರಣಾಗತಿಗೆ ಸಜ್ಜು: ಮಾತುಕತೆ ಫಲಪ್ರದ

ಸಮಾಜದ ಮುಖ್ಯವಾಹಿನಿಗೆ ಬರಲು ನಿರ್ಧರಿಸಿರುವ ಭೂಗತರಾಗಿದ್ದ 6 ಮಂದಿ ನಕ್ಸಲೀಯರು ಈ ವಾರದ ಕೊನೆಯಲ್ಲಿ ಚಿಕ್ಕಮಗಳೂರಿನ ಜಿಲ್ಲಾಡಳಿತ ಮುಂದೆ ಶರಣಾಗಲು ಮುಂದಾಗಿದ್ದಾರೆ. ಆದರೆ, ಶರಣಾಗಲು ಅಧಿಕೃತ ದಿನಾಂಕ ನಿಗಧಿ ಮಾತ್ರ ಬಾಕಿ ಉಳಿದಿದೆ. 

Karnatakas Naxal Gangs Ready to Surrender At Chikkamagaluru

ಚಿಕ್ಕಮಗಳೂರು (ಜ.06): ಸಮಾಜದ ಮುಖ್ಯವಾಹಿನಿಗೆ ಬರಲು ನಿರ್ಧರಿಸಿರುವ ಭೂಗತರಾಗಿದ್ದ 6 ಮಂದಿ ನಕ್ಸಲೀಯರು ಈ ವಾರದ ಕೊನೆಯಲ್ಲಿ ಚಿಕ್ಕಮಗಳೂರಿನ ಜಿಲ್ಲಾಡಳಿತ ಮುಂದೆ ಶರಣಾಗಲು ಮುಂದಾಗಿದ್ದಾರೆ. ಆದರೆ, ಶರಣಾಗಲು ಅಧಿಕೃತ ದಿನಾಂಕ ನಿಗಧಿ ಮಾತ್ರ ಬಾಕಿ ಉಳಿದಿದೆ. ಮುಂಡಗಾರು ಲತಾ , ಸುಂದರಿ ಕುಲ್ಲೂರು, ವನಜಾಕ್ಷಿ ಬಾಳೆಹೊಳೆ, ಆಂಧ್ರ ಪ್ರದೇಶ ಮೂಲದ ಮಾರೆಪ್ಪ ಅರೋಲಿ, ಕೆ. ವಸಂತ, ದಕ್ಷಿಣ ಭಾರತದ ಮೋಸ್ಟ್ ವಾಂಟೆಡ್ ನಕ್ಸಲ್ ಜೀಶ ಶರಣಾಗುತ್ತಿದ್ದಾರೆ. ಮಲೆನಾಡಿನ ಸಮಸ್ಯೆಗಳು ಹಾಗೂ ಆದಿವಾಸಿ ಜನರ ರಕ್ಷಣೆಗೆ ಬಂದೂಕು ಹಿಡಿದು ಹೋರಾಟ ನಡೆಸುತ್ತಾ ಭೂಗತರಾಗಿದ್ದ ನಕ್ಸಲೀಯರಲ್ಲಿ ಹಲವು ಮಂದಿ ಎನ್‌ ಕೌಂಟರ್‌ಗೆ ಬಲಿಯಾಗಿದ್ದಾರೆ. ಕೆಲವು ಮಂದಿ ಶರಣಾಗಿದ್ದಾರೆ. ಇದೀಗ ಬಾಕಿ ಉಳಿದಿರುವ 6 ಮಂದಿ ಶರಣಾಗತಿಗೆ ಮುಂದೆ ಬಂದಿದ್ದು, ಅವರು ಮುಖ್ಯ ವಾಹಿನಿಗೆ ಬಂದರೆ ಮಲೆನಾಡು ಮತ್ತು ಕರಾವಳಿಯಲ್ಲಿ ನಕ್ಸಲೀಯರ ಅಧ್ಯಾಯ ಕೊನೆಯಾಗಲಿದೆ.

ಮಾತುಕತೆ ಫಲಪ್ರದ: ಮುಂಡಗಾರು ಲತಾ ಹಾಗೂ ಇತರೆ ನಕ್ಸಲೀಯರನ್ನು ಸಮಾಜದ ಮುಖ್ಯ ವಾಹಿನಿಗೆ ಕರೆ ತರಬೇಕೆಂಬ ಉದ್ದೇಶದಿಂದ ಶಾಂತಿಗಾಗಿ ನಾಗರಿಕ ವೇದಿಕೆ ಅವರನ್ನು ಸಂಪರ್ಕಿಸುವ ಜತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ರಾಜ್ಯದ ಹಿರಿಯ ಪೊಲೀಸ್‌ ಅಧಿಕಾರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿತ್ತು. ಹಲವು ಹಂತಗಳಲ್ಲಿ ಮಾತುಕತೆ ನಡೆಸಲಾಗಿದ್ದು, ಯಾವ ದಿನದಂದು ಎಲ್ಲಿಗೆ ಶರಣಾಗಬೇಕೆಂಬ ಚರ್ಚೆಗೂ ಕೂಡ ಉತ್ತರ ಸಿಕ್ಕಿದ್ದು, ಈ ವಾರದ ಕೊನೆಯಲ್ಲಿ 6 ಮಂದಿ ನಕ್ಸಲೀಯರು ಚಿಕ್ಕಮಗಳೂರಿನ ಜಿಲ್ಲಾಡಳಿತ ಎದುರು ಹಾಜರಾಗಲಿದ್ದಾರೆ.

ವಿಕ್ರಂಗೌಡ ಸಹಚರರು ಕೊಡಗಿನತ್ತ ಬಂದಿರುವ ಸಾಧ್ಯತೆ: ನಕ್ಸಲರಿಗಾಗಿ ತೀವ್ರ ಕೂಂಬಿಂಗ್

ಶರಣಾಗತಿ ಆಗಲಿರುವ ನಕ್ಸಲೀಯರಿಗೆ ರಾಜ್ಯ ಸರ್ಕಾರ ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಿದೆ. ಈ ಪ್ಯಾಕೇಜ್‌ ನೀಡುವ ಜತಗೆ ತಮ್ಮ ಮೇಲಿರುವ ಪ್ರಕರಣಗಳನ್ನು ಕೈಬಿಡಬೇಕೆಂಬ ಬೇಡಿಕೆಯನ್ನು ನಕ್ಸಲೀಯರು ಸರ್ಕಾರದ ಮುಂದೆ ಇಟ್ಟಿದ್ದಾರೆ. ಆದರೆ, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರ್ಕಾರದ ವಿರುದ್ಧ ಬಂದೂಕು ಹಿಡಿದು ಹೋರಾಟ ನಡೆಸಿರುವುದು ಅಪರಾಧ. ಹಾಗಾಗಿ ಕೇಸ್‌ಗಳನ್ನು ಹಿಂದಕ್ಕೆ ಪಡೆಯುವುದಿಲ್ಲ ಎಂದು ಸರ್ಕಾರ ಹೇಳಿದೆ ಎನ್ನಲಾಗುತ್ತಿದೆ. ಈಗಾಗಲೇ ಶರಣಾಗಿರುವ ನಕ್ಸಲೀಯರು ವಿವಿಧ ಪ್ರಕರಣಗಳ ಸಂಬಂಧ ನ್ಯಾಯಾಲಯಕ್ಕೆ ಓಡಾಡಲು ಬಸ್‌ನಲ್ಲಿ ಟಿಕೆಟ್‌ ಪಡೆಯಲು ಹಣ ಇಲ್ಲದ ಪರದಾಡುತ್ತಿದ್ದಾರೆ. ತಮಗೂ ಈ ಸ್ಥಿತಿ ಬರಬಹುದು. ಹಾಗಾಗಿ ಕೇಸುಗಳನ್ನು ಹಿಂದಕ್ಕೆ ಪಡೆಯ ಬೇಕೆಂದು ಕೇಳಿದ್ದಾರೆ. ಮುಖ್ಯವಾಹಿನಿಗೆ ಬಂದ ಬಳಿಕ ಬೇಗನೆ ಜಾಮೀನಿನ ಮೇಲೆ ಹೊರಗೆ ಬರಲು ಸಹಕರಿಸಬೇಕು ಎಂಬ ಮನವಿಗೂ ಸರ್ಕಾರ ಸ್ಪಂದಿಸಿದೆ. ಕಾನೂನು ಸೇವಾ ಪ್ರಾಧಿಕಾರದಿಂದ ನೆರವು ಕೊಡಿಸುವ ಭರವಸೆಯನ್ನೂ ನೀಡಿದೆ ಎಂದು ಮೂಲಗಳು ಹೇಳಿವೆ. ಹಾಗಾಗಿ ವೇದಿಕೆ ಸಿದ್ಧವಾಗುತ್ತಿದೆ.

ಮೂರು ತಿಂಗಳಿಂದ ಪ್ರಯತ್ನ: ನೆರೆಯ ಕೇರಳ ರಾಜ್ಯದಲ್ಲಿ ನಕ್ಸಲೀಯರ ವಿರುದ್ಧದ ಕಾರ್ಯಾಚರಣೆ ಚುರುಕಾಗುತ್ತಿದ್ದಂತೆ ವಿಕ್ರಂಗೌಡ, ಮುಂಡಗಾರು ಲತಾ ಹಾಗೂ ಇತರೆ ನಕ್ಸಲೀಯರು ಶರಣಾಗಬೇಕೆಂಬ ನಿರ್ಧಾರಕ್ಕೆ ಬಂದು 3 ತಿಂಗಳ ಹಿಂದೆಯ ಶಾಂತಿಗಾಗಿ ನಾಗರಿಕ ವೇದಿಕೆ ಮುಖಂಡರನ್ನು ಸಂಪರ್ಕಿಸಿ, ನಂತರ ತಮ್ಮ ಮೂಲ ಸ್ಥಾನವಾದ ಕರಾವಳಿ ಹಾಗೂ ಮಲೆನಾಡಿಗೆ ಆಗಮಿಸಿದ್ದರು. ವಿಕ್ರಂಗೌಡ ಉಡುಪಿ ಜಿಲ್ಲೆಗೆ ತೆರಳಿದ್ದರೆ, ಮುಂಡಗಾರು ಲತಾ ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸಿದ್ದರು. ಮುಂಡಗಾರು ಲತಾ ಹಾಗೂ ಅವರ ತಂಡದವರು ಕೊಪ್ಪ ತಾಲೂಕಿನ ಜಯಪುರ ಸಮೀಪದ ಮೇಗೂರು ಗ್ರಾಮದ ಕಡೆಗುಂಡಿ ಸುಬ್ಬೇ ಗೌಡರ ಮನೆಗೆ ಬಂದು ರಾತ್ರಿ ಊಟ ಮಾಡಿ ಅಲ್ಲಿಂದ ತೆರಳಿದ್ದರು. ಇದಾದ ಮೂರೇ ದಿನಕ್ಕೆ ವಿಕ್ರಂಗೌಡ ಪೊಲೀಸರು ನಡೆಸಿದ ಎನ್‌ಕೌಂಟರ್‌ಗೆ ಬಲಿಯಾದರು. ಶರಣಾಗಲು ಬಂದವರನ್ನು ಪೊಲೀಸರು ಹತ್ಯೆ ಮಾಡಿದರೆಂಬ ಆರೋಪ ಎಲ್ಲೆಡೆ ಕೇಳಿ ಬಂದಿತು. ಇದರ ನಡುವೆ ಹಾಲಿ ಇದ್ದವರನ್ನು ಸಹ ಎನ್‌ಕೌಂಟರ್‌ ಹೆಸರಿನಲ್ಲಿ ಪೊಲೀಸರು ಹತ್ಯೆ ಮಾಡಬಹುದೆಂಬ ಸಂಶಯದ ಮೇಲೆ ಸರ್ಕಾರದೊಂದಿಗೆ ಶಾಂತಿಗಾಗಿ ನಾಗರಿಕ ವೇದಿಕೆ ಮಾತುಕತೆ ನಡೆಸಿ ಶರಣಾಗತಿಗೆ ವೇದಿಕೆ ಸಿದ್ಧಪಡಿಸಿದೆ.

 ಶರಣಾಗತಿಗಳ ಬೇಡಿಕೆಗಳು
 - ಭೂ ರಹಿತ ಕುಟುಂಬಕ್ಕೆ 5 ಎಕರೆ ಕೃಷಿ ಭೂಮಿ ನೀಡಿ ಶಾಶ್ವತ ಹಕ್ಕು ಪತ್ರ ಕೊಡಬೇಕು.
- ಆದಿವಾಸಿ ಕುಟುಂಬಗಳಿಗೆ ಭೂಮಿ, ವಸತಿ ಕಲ್ಪಿಸಬೇಕು.
- ಕೃಷಿ ಯೋಗ್ಯ ಪಾಳು ಭೂಮಿಯನ್ನು ಭೂ ರಹಿತರಿಗೆ ಹಂಚಬೇಕು.
- ಕಸ್ತೂರಿ ರಂಗನ್ ವರದಿ ರದ್ದುಪಡಿಸಬೇಕು.
- ಹೈಟೆಕ್ ಟೂರಿಸಂ ನಿಲ್ಲಿಸಬೇಕು.

ಶಾಂತಿಗಾಗಿ ನಾಗರಿಕ ವೇದಿಕೆ ಸದಸ್ಯರು
ಕೆ.ಎಲ್‌. ಅಶೋಕ್‌
ನೂರ್‌ ಶ್ರೀಧರ್‌
ಬಿ.ಟಿ. ಲಲಿತಾ ನಾಯಕ್‌
ಎನ್‌. ವೆಂಕಟೇಶ್‌
ನಗರಗೆರೆ ರಮೇಶ್‌

ನಕ್ಸಲ್‌ ಶರಣಾಗತಿ ಪ್ಯಾಕೇಜ್‌ - 2024: ರಾಜ್ಯದಲ್ಲಿ ಶರಣಾಗತಿ ಆಗಲಿರುವ ನಕ್ಸಲೀಯರಿಗಾಗಿ ರಾಜ್ಯ ಸರ್ಕಾರ ನೂತನ ಪ್ಯಾಕೇಜ್‌ ಜಾರಿಗೆ ತಂದಿದೆ. ಅದರಲ್ಲಿ 3 ವಿಭಾಗಗಳಾಗಿ ವಿಂಗಡಿಸಲಾಗಿದೆ.

ಎ. ವರ್ಗ- ಕರ್ನಾಟಕದಲ್ಲಿ ಜನಿಸಿದ್ದು, ಪ್ರಸಕ್ತ ಭೂಗತರಾಗಿದ್ದರೆ, ಶಸ್ತ್ರ ಸಜ್ಜಿತರಾಗಿದ್ದು, ಯಾವುದಾದರೂ ನಕ್ಸಲ್‌ ಗುಂಪಿನ ಸದಸ್ಯರಾಗಿದ್ದು ಒಂದಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಅವರಿಗೆ ₹7.50 ಲಕ್ಷ ಪ್ಯಾಕೇಜ್‌ 3 ಹಂತ ದಲ್ಲಿ ನೀಡಲಾಗುವುದು. ಅಂದರೆ, ಶರಣಾಗತಿ ಸಂದರ್ಭದಲ್ಲಿ 3 ಲಕ್ಷ, ಒಂದು ವರ್ಷದ ನಂತರ 2 ಲಕ್ಷ, 2 ವರ್ಷದ ನಂತರ 2.50 ಲಕ್ಷ ನೀಡಲಾಗುವುದು.

ಬಿ. ವರ್ಗ - ನಕ್ಸಲೀಯರು ಹೊರ ರಾಜ್ಯದವರಾಗಿದ್ದು ಪ್ರಸಕ್ತ ಕರ್ನಾಟಕ ರಾಜ್ಯದಲ್ಲಿದ್ದರೆ ಅವರ ಬಳಿ ಶಸ್ತ್ರಾಸ್ತ್ರಗಳಿದ್ದರೆ, ಒಂದಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದರೆ ಅಂತಹವರಿಗೆ ₹4 ಲಕ್ಷ ನೀಡಲಾಗುವುದು. ಅಂದರೆ, ಶರಣಾಗತಿ ಸಂದರ್ಭದಲ್ಲಿ ₹2 ಲಕ್ಷ, ಒಂದು ವರ್ಷದ ನಂತರ ₹1 ಲಕ್ಷ, 2 ವರ್ಷಗಳ ನಂತರ ₹1 ಲಕ್ಷ.

ಕರ್ನಾಟಕದ ನಕ್ಸಲರ ಶರಣಾಗತಿಗೆ ಮತ್ತೊಂದು ಚಾನ್ಸ್ ಕೊಟ್ಟ ಸಿಎಂ ಸಿದ್ದರಾಮಯ್ಯ!

ಸಿ. ವರ್ಗ - ಎಡ ಪಂಥೀಯ ಭಯೋತ್ಪಾದನೆ ಬೆಂಬಲಿಸುವವರು, ಅವರ ಮೇಲೆ ಪ್ರಕರಣಗಳು ಇದ್ದರೆ ಅಂತಹವರಿಗೆ ₹2 ಲಕ್ಷ ಪ್ಯಾಕೇಜ್‌ ನೀಡಲಾಗುವುದು. ಶರಣಾಗತಿ ಸಂದರ್ಭದಲ್ಲಿ ₹1 ಲಕ್ಷ, ಒಂದು ವರ್ಷದ ನಂತರ ₹50 ಸಾವಿರ, ಎರಡು ವರ್ಷದ ನಂತರ ₹50 ಸಾವಿರ ನೀಡಲಾಗುವುದು. ಶರಣಾಗತರಾಗಿರುವ ನಕ್ಸಲೀಯರ ಮುಂದಿನ ಭವಿಷ್ಯಕ್ಕಾಗಿ ಅವರು ಯಾವುದಾದರೂ ಉದ್ಯೋಗದಲ್ಲಿ ತೊಡಗಿಸಿ ಕೊಳ್ಳಲು ಇಚ್ಚಿಸಿದರೆ ಅವರಿಗೆ ತರಬೇತಿ ನೀಡಲಾಗುವುದು. ತರಬೇತಿ ಸಂಸ್ಥೆಗೆ ಒಂದು ವರ್ಷದವರೆಗೆ ಪ್ರತಿಯೊಬ್ಬರಿಗೆ₹ 5 ಸಾವಿರ ನೀಡಲಾಗುವುದು.

Latest Videos
Follow Us:
Download App:
  • android
  • ios