Asianet Suvarna News Asianet Suvarna News

ವ್ಯಾಪಕ ಮಳೆ: ರಾಜ್ಯದ ಪ್ರಮುಖ ಜಲಾಶಯಗಳು ಶೇ.70 ಭರ್ತಿ..!

* ಒಂದೇ ವಾರದಲ್ಲೇ ಹರಿದುಬಂದಿದೆ ಶೇ.25 ರಷ್ಟು ನೀರು
* ಇದೇ ರೀತಿ ಒಳಹರಿವಿದ್ದರೆ ಮುಂದಿನ ವಾರ ಗರಿಷ್ಠ ಮಟ್ಟಕ್ಕೆ
* ಜಲಾಶಯಗಳಲ್ಲಿ ಹಾಲಿ 592 ಟಿಎಂಸಿ ನೀರು ಸಂಗ್ರಹ
 

Karnatakas Major Dams 70 per cent Full grg
Author
Bengaluru, First Published Jul 25, 2021, 8:47 AM IST
  • Facebook
  • Twitter
  • Whatsapp

ಶ್ರೀಕಾಂತ್‌ ಎನ್‌.ಗೌಡಸಂದ್ರ

ಬೆಂಗಳೂರು(ಜು.25): ರಾಜ್ಯಾದ್ಯಂತ ಕಳೆದ ಒಂದು ವಾರದಿಂದ ವ್ಯಾಪಕವಾಗಿ ಮಳೆಯಾಗುತ್ತಿರುವುದರಿಂದ ರಾಜ್ಯದ 13 ಪ್ರಮುಖ ಜಲಾಶಯಗಳು ಸಂಗ್ರಹ ಸಾಮರ್ಥ್ಯದ ಶೇ. 70ರಷ್ಟು ಭರ್ತಿಯಾಗಿವೆ. ಕಳೆದ ಒಂದು ವಾರದಲ್ಲೇ ಒಟ್ಟು ಸಾಮರ್ಥ್ಯದ ಶೇ.25ರಷ್ಟು ನೀರು ಜಲಾಶಯಗಳಿಗೆ ಹರಿದು ಬಂದಿದೆ.

ಅಲ್ಲದೆ, ಜಲಾಶಯಗಳಿಗೆ 6.82 ಲಕ್ಷ ಕ್ಯುಸೆಕ್‌ನಷ್ಟು ಒಳಹರಿವು ಬರುತ್ತಿದ್ದು 3.27 ಲಕ್ಷದಷ್ಟು ನೀರನ್ನು ಹೊರ ಬಿಡಲಾಗುತ್ತಿದೆ. ಒಳ ಹರಿವು ಇದೇ ರೀತಿಯಲ್ಲಿ ಮುಂದುವರೆದರೆ ಮುಂದಿನ ಒಂದು ವಾರದಲ್ಲೇ ಎಲ್ಲಾ ಜಲಾಶಯಗಳು ಬಹುತೇಕ ಭರ್ತಿಯಾಗಲಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಜಲ ವಿದ್ಯುತ್‌ ಉತ್ಪಾದಿಸುವ ಲಿಂಗನಮಕ್ಕಿ, ಸೂಪಾ, ವಾರಾಹಿ ಜಲಾಶಯಗಳು, ಕಾವೇರಿ ನದಿ ವ್ಯಾಪ್ತಿಯ ಹಾರಂಗಿ, ಹೇಮಾವತಿ, ಕೆಆರ್‌ಎಸ್‌, ಕಬಿನಿ ಹಾಗೂ ಕೃಷ್ಣಾ ಕೊಳ್ಳದ ಭದ್ರಾ, ತುಂಗಭದ್ರಾ, ಘಟಪ್ರಭ, ಮಲಪ್ರಭ, ಆಲಮಟ್ಟಿ, ನಾರಾಯಣಪುರ ಜಲಾಶಯಗಳಲ್ಲಿ ಒಟ್ಟು 860.27 ಟಿಎಂಸಿ ನೀರು ಸಂಗ್ರಹ ಸಾಮರ್ಥ್ಯ ಇದೆ.

ವರುಣನ ಅಬ್ಬರ: ಆಲಮಟ್ಟಿ ಡ್ಯಾಂನಿಂದ 2.50 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಈ ಪೈಕಿ ಶನಿವಾರದ ವೇಳೆಗೆ 592.36 ಟಿಎಂಸಿ (ಶೇ. 70) ನೀರು ಸಂಗ್ರಹವಾಗಿದೆ. ಕಳೆದ ವರ್ಷ ಈ ವೇಳೆಗೆ ಕೇವಲ 397.89 ಟಿಎಂಸಿಯಷ್ಟು(ಶೇ.46) ನೀರು ಮಾತ್ರ ಸಂಗ್ರಹವಾಗಿತ್ತು. ಕಳೆದ ಒಂದು ವಾರದಿಂದ ಮಹಾರಾಷ್ಟ್ರ ಹಾಗೂ ಕರ್ನಾಟಕ ಭಾಗದಲ್ಲಿ ವ್ಯಾಪಕ ಮಳೆಯಾಗುತ್ತಿರುವುದರಿಂದ ಕಳೆದ ಒಂದು ವಾರದಲ್ಲೇ ಜಲಾಶಯಗಳ ಸಾಮರ್ಥ್ಯದ ಶೇ. 25 ರಷ್ಟು ನೀರು ಹರಿದು ಬಂದಿದೆ. ಜುಲೈ 17 ರಿಂದ 24ರವರೆಗೆ ಒಟ್ಟು 216 ಟಿಎಂಸಿ ನೀರು ಹರಿದುಬಂದಿದ್ದು, ಮುಂಜಾಗ್ರತಾ ಕ್ರಮವಾಗಿ 83 ಟಿಎಂಸಿ ನೀರು ಹೊರ ಬಿಡಲಾಗಿದೆ ಎಂದು ಜಲಸಂಪನ್ಮೂಲ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಭಾರೀ ಒಳ ಹರಿವು:

13 ಜಲಾಶಯಗಳಲ್ಲಿ ಒಟ್ಟಾಗಿ 6.82 ಲಕ್ಷ ಕ್ಯುಸೆಕ್‌ ದಿನದ ಒಳ ಹರಿವು ವರದಿಯಾಗಿದೆ. 3.27 ಲಕ್ಷ ನೀರನ್ನು ಹೊರ ಬಿಡಲಾಗುತ್ತಿದೆ. ಈ ಪೈಕಿ ಕೃಷ್ಣಾ ವ್ಯಾಪ್ತಿಯಲ್ಲಿ ನಿತ್ಯ 3.76 ಲಕ್ಷ ಕ್ಯುಸೆಕ್‌ ಒಳ ಹರಿವು ದಾಖಲಾಗಿದ್ದು, 2.84 ಲಕ್ಷ ಕ್ಯುಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಕಾವೇರಿ ಕಣಿವೆಯಲ್ಲಿ 90,346 ಕ್ಯುಸೆಕ್‌ ನೀರು ಒಳಹರಿವಿದ್ದರೆ 37,634 ಕ್ಯುಸೆಕ್‌ ನೀರು ಹೊರ ಬಿಡಲಾಗುತ್ತಿದೆ.

ಜಲವಿದ್ಯುತ್‌ ಯೋಜನೆಗಳಾದ ಲಿಂಗನಮಕ್ಕಿ, ಸೂಪಾ, ವಾರಾಹಿ ವ್ಯಾಪ್ತಿಯಲ್ಲಿ ಬರೋಬ್ಬರಿ 2.15 ಲಕ್ಷ ಕ್ಯುಸೆಕ್‌ ನೀರು ಒಳ ಹರಿವಿದ್ದು, 5,490 ಕ್ಯುಸೆಕ್‌ನಷ್ಟು ನೀರನ್ನು ಮಾತ್ರ ಹೊರ ಬಿಡಲಾಗುತ್ತಿದೆ. ಮಹಾರಾಷ್ಟ್ರದಲ್ಲಿ ತೀವ್ರ ಮಳೆಯಾಗುತ್ತಿರುವುದರಿಂದ ಆಲಮಟ್ಟಿ, ನಾರಾಯಣಪುರ, ಲಿಂಗನಮಕ್ಕಿ ಜಲಾಶಯಗಳಲ್ಲಿ ಹಾಗೂ ಕಾಳಿ ನದಿ ತುಂಬಿ ಹರಿಯುತ್ತಿರುವುದರಿಂದ ಸೂಪಾ ಜಲಾಶಯದಲ್ಲಿ ಸಂಗ್ರಹ ವೇಗವಾಗಿ ಹೆಚ್ಚಾಗುತ್ತಿದೆ.

ಮಲಪ್ರಭಾ ಜಲಾಶಯ ಭರ್ತಿಗೆ ಕ್ಷಣಗಣನೆ: ಪ್ರವಾಹ ಭೀತಿ

6 ಜಲಾಶಯ ಶೇ.80ಕ್ಕಿಂತ ಹೆಚ್ಚು ಭರ್ತಿ:

13 ಜಲಾಶಯಗಳ ಪೈಕಿ ಕಬಿನಿ (ಶೇ.89), ಘಟಪ್ರಭ (ಶೇ.88), ಭದ್ರಾ (ಶೇ.82), ಹಾರಂಗಿ (ಶೇ.82), ಹೇಮಾವತಿ (ಶೇ.81), ಮಲಪ್ರಭ (ಶೇ.80) ಜಲಾಶಯಗಳು ಶೇ.80ಕ್ಕಿಂತ ಹೆಚ್ಚು ಭರ್ತಿಯಾಗಿವೆ. ವಾರಾಹಿ (ಶೇ.31), ಕೆಆರ್‌ಎಸ್‌ (ಶೇ.56) ಜಲಾಶಯಗಳಲ್ಲಿ ಕಡಿಮೆ ನೀರು ಸಂಗ್ರಹವಾಗಿದೆ. ಒಟ್ಟಾರೆ ಜೂನ್‌ 1ರಿಂದ 529 ಟಿಎಂಸಿ ನೀರು ಹರಿದು ಬಂದಿದ್ದು, 174 ಟಿಎಂಸಿ ನೀರನ್ನು ಹೊರ ಬಿಡಲಾಗಿದೆ.

ಜಲಾಶಯ ಸಂಗ್ರಹ ಸಾಮರ್ಥ್ಯ (ಟಿ.ಎಂ.ಸಿ.ಗಳಲ್ಲಿ) ಪ್ರಸಕ್ತ ವರ್ಷದ ಸಂಗ್ರಹ (ಜು.24,2021) ಕಳೆದ ವರ್ಷದ ಸಂಗ್ರಹ (ಜು.24,2020) ಶೇ.ವಾರು

ಲಿಂಗನಮಕ್ಕಿ -151.75 -102.67 -40.7 -ಶೇ.68
ಸೂಪಾ -145.33 -87.38 -48.4 -ಶೇ.60
ವಾರಾಹಿ -31.10 -9.74 -6.75 -ಶೇ.31
ಹಾರಂಗಿ -8.50 -6.93 -7.49 -ಶೇ.82
ಹೇಮಾವತಿ -37.10 -30.8 -17.17 -ಶೇ.81
ಕೆಆರ್‌ಎಸ್‌ -49.45 -27.67 -29.42 -ಶೇ.56
ಕಬಿನಿ -19.52 -17.28 -15.28 -ಶೇ.89
ಭದ್ರಾ -71.54 -58.38 -37.41 -ಶೇ.82
ತುಂಗಭದ್ರಾ -100.86 -71.72 -36.66 -ಶೇ.71
ಘಟಪ್ರಭಾ -51.00 -44.90 -25.72 -ಶೇ.88
ಮಲಪ್ರಭಾ -37.73 -30.21 -16.77 -ಶೇ. 80
ಆಲಮಟ್ಟಿ-123.08 -81.90 -85.07 -ಶೇ.67
ನಾರಾಯಣಪುರ -33.31 -23.49 -31.01 -ಶೇ.71
ಒಟ್ಟು - 860.27 -592.36 -397.89 -ಶೇ.70

Follow Us:
Download App:
  • android
  • ios