Asianet Suvarna News Asianet Suvarna News

ಮಲಪ್ರಭಾ ಜಲಾಶಯ ಭರ್ತಿಗೆ ಕ್ಷಣಗಣನೆ: ಪ್ರವಾಹ ಭೀತಿ

* ಜಲಾಶಯದಿಂದ ಹೆಚ್ಚುವರಿ ನೀರು ಬಿಟ್ಟರೆ ಪ್ರವಾಹ ಭೀತಿಯಲ್ಲಿ ಹಲವು ಗ್ರಾಮಸ್ಥರು
* ಜಲಾಶಯದಿಂದ ಯಾವುದೇ ಕ್ಷಣದಲ್ಲಿ ಹೆಚ್ಚುವರಿ ನೀರು ನದಿಗೆ ಬರಬಹುದು
*  ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಲು ಕಟ್ಟುನಿಟ್ಟಿನ ಸೂಚನೆ 

Malaprabha Dam Almost Full in Belagavi grg
Author
Bengaluru, First Published Jul 24, 2021, 9:13 AM IST

ನರಗುಂದ(ಜು.24): ಕಳೆದ 4-5 ದಿನಗಳಿಂದ ಮಲಪ್ರಭಾ ಜಲಾಶಯದ ಮೇಲ್ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಲಾಶಯ ಭರ್ತಿಯಾಗುವ ಹಂತಕ್ಕೆ ತಲುಪಿದೆ.

ಈ ಜಲಾಶಯದ ಮೇಲ್ಭಾಗದ ಪಶ್ಚಿಮ ಘಟ್ಟದ ಅರಣ್ಯಭಾಗ, ಬೆಳಗಾವಿ ಹಾಗೂ ಖಾನಾಪುರ ಪ್ರದೇಶದಲ್ಲಿ ಕಳೆದ ಮೂರು ದಿನಗಳಿಂದ ವಾಡಿಕೆಗಿಂತ ಹೆಚ್ಚು ಮಳೆ ಸುರಿಯುತ್ತಿರುವುದರಿಂದ ಮಲಪ್ರಭಾ ನದಿ ಮೂಲಕ ಜಲಾಶಯಕ್ಕೆ ಸಧ್ಯ 40000 ಸಾವಿರ ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಒಟ್ಟು ಜಲಾಶಯದ ಗರಿಷ್ಟಮಟ್ಟ 2079.50 ಅಡಿಯಿದ್ದು, ಸಧ್ಯ ಜಲಾಶಯದಲ್ಲಿ 2070 ಅಡಿ ನೀರು ಸಂಗ್ರಹವಾಗಿದೆ. ಜಲಾಶಯ ಮೇಲ್ಭಾಗದಲ್ಲಿ ಸುರಿಯುತ್ತಿರುವ ಮಳೆ ನೋಡಿದರೆ ಜಲಾಶಯದ ಒಳಹರಿವು ಹೆಚ್ಚಾಗುವ ಸಂಭವವಿದ್ದು, ಇದೇ ರೀತಿ ಮುಂದುವರೆದಲ್ಲಿ ಇನ್ನೆರಡು ದಿನದಲ್ಲಿ ಜಲಾಶಯ ಭರ್ತಿಯಾಗಲಿದೆ.

10 ಅಡಿ ಬಾಕಿ:

ಈ ಜಲಾಶಯ ತುಂಬಲು ಕೇವಲ 10 ಅಡಿ ಮಾತ್ರ ಬಾಕಿಯಿದೆ. ಮಲಪ್ರಭಾ ನದಿಯಿಂದ ಹೆಚ್ಚು ನೀರು ಬರುತ್ತಿರುವುದರಿಂದ ಮುಂಜಾಗ್ರತಾ ಕ್ರಮವಾಗಿ ಜಲಾಶಯದ ಅಧಿಕಾರಿಗಳು ಶುಕ್ರವಾರ ಸಂಜೆ 10 ಸಾವಿರ ಕ್ಯುಸೆಕ್‌ ನೀರನ್ನು ಹೊರ ಬಿಟ್ಟಿದ್ದಾರೆ.

ಇದೇ ರೀತಿ ಜಲಾಶಯದ ಮೇಲ್ಭಾಗದಲ್ಲಿ ಮಳೆ ಮುಂದುವರೆದು ಒಳಹರಿವು ಹೆಚ್ಚಾದಲ್ಲಿ ಜಲಾಶಯದಿಂದ ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಬಿಡುವ ಸಂಭವವಿದ್ದು, ಹೆಚ್ಚಿನ ನೀರು ಬಿಟ್ಟಿದ್ದೇ ಆದಲ್ಲಿ ಹಲವು ಗ್ರಾಮಗಳು ಜಲಾವ್ರತವಾಗುವ ಆತಂಕವಿದೆ.

ನೆರೆ ಪರಿಹಾರಕ್ಕೆ ಏನೆಲ್ಲ ಕ್ರಮ? ಅಶೋಕ ಮಾಹಿತಿ

ತಹಸೀಲ್ದಾರ್‌ ಭೇಟಿ:

ಜಲಾಶಯ ತುಂಬುವ ಎಲ್ಲ ಲಕ್ಷಣಗಳು ಈಗ ಗೋಚರಿಸುತ್ತಿದ್ದು, ಹೆಚ್ಚುವರಿ ನೀರನ್ನು ಯಾವುದೇ ಸಮಯದಲ್ಲಿ ಮಲಪ್ರಭಾ ನದಿ ಮೂಲಕ ಹೊರಗೆ ಬಿಡಲಾಗುತ್ತದೆ. ಹಾಗಾಗಿ ಮುಂಜಾಗ್ರತಾ ಕ್ರಮವಾಗಿ ತಹಸೀಲ್ದಾರ್‌ ಎ.ಡಿ. ಅಮರವಾದಗಿ ಅವರು ಶುಕ್ರವಾರ ತಾಲೂಕಿನ ಲಕಮಾಪುರ ಗ್ರಾಮಕ್ಕೆ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಸಭೆ ನಡೆಸಿ ಜಲಾಶಯದಿಂದ ಯಾವುದೇ ಕ್ಷಣದಲ್ಲಿ ಹೆಚ್ಚುವರಿ ನೀರು ನದಿಗೆ ಬರಬಹುದು. ಆದ್ದರಿಂದ, ಗ್ರಾಮಸ್ಥರು ಉಳಿದುಕೊಳ್ಳಲು ಬೆಳ್ಳೇರಿ ಡಿಪ್ಲೋಮಾ ಕಾಲೇಜಿನಲ್ಲಿ ವ್ಯವಸ್ಥೆ ಮಾಡಲಾಗಿದ್ದು, ಗ್ರಾಮಸ್ಥರು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಮನವಿ ಮಾಡಿದರು.

ತೊಂದರೆ:

ಕಳೆದ ಎರಡು ವರ್ಷಗಳ ಹಿಂದೆ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರನ್ನು ಮಲಪ್ರಭಾ ನದಿಗೆ ಬಿಟ್ಟಿದ್ದರಿಂದ ನರಗುಂದ ತಾಲೂಕಿನ ಮಲಪ್ರಭಾ ನದಿಗೆ ಹೊಂದಿಕೊಂಡಿರುವ ಗ್ರಾಮಗಳಾದ ಲಕಮಾಪುರ, ಬೆಳ್ಳೇರಿ, ವಾಸನ, ಕೊಣ್ಣೂರ, ಬೂದಿಹಾಳ, ಕಪ್ಪಲಿ, ಕಲ್ಲಾಪೂರ, ಶಿರೋಳ ಗ್ರಾಮಗಳಲ್ಲಿ ಅಪಾರ ಪ್ರಮಾಣದಲ್ಲಿ ಬೆಳೆಹಾನಿಯಾಗಿತ್ತು. ಗ್ರಾಮಗಳಿಗೆ ನುಗ್ಗಿದ ನೀರಿನಿಂದಾಗಿ ಹಲವಾರು ಜನ ಮನೆ ಕಳೆದುಕೊಂಡು ತೀವ್ರ ಸಂಕಷ್ಟಅನುಭವಿಸಿದ್ದರು. ಆಗ ನಡೆದ ಅವಘಡದಿಂದ ಈ ಭಾಗದ ಜನತೆ ಇನ್ನೂ ಹೊರಬಂದಿಲ್ಲ. ಈಗ ಜಲಾಶಯ ಭರ್ತಿಯಾಗಿ ಹೆಚ್ಚುವರಿ ನೀರು ನದಿ ಮೂಲಕ ಗ್ರಾಮಗಳಿಗೆ ನುಗ್ಗಿದರೆ ಹೇಗೆ ಎಂಬ ಆತಂಕವೀಗ ಗ್ರಾಮಸ್ಥರಲ್ಲಿ ಮನೆಮಾಡಿದೆ.

ಮಲಪ್ರಭಾ ಜಲಾಶಯ ಭರ್ತಿಯಾಗಿ ಯಾವುದೇ ಸಮಯದಲ್ಲಿ ಹೆಚ್ಚುವರಿ ನೀರನ್ನು ಮಲಪ್ರಭಾ ನದಿಗೆ ಬಿಡಬಹುದು. ಹಾಗಾಗಿ ನದಿ ಪಕ್ಕದ ಗ್ರಾಮಗಳ ಜನತೆ ಸುರಕ್ಷಿತ ಸ್ಥಳಕ್ಕೆ ತೆರಳಲು ತಾಲೂಕು ಆಡಳಿತ ಮನವಿ ಮಾಡಿಕೊಂಡಿದೆ. ಇದಕ್ಕೆ ಗ್ರಾಮಸ್ಥರು ಒಪ್ಪಿಕೊಂಡಿದ್ದಾರೆ. ಆದಷ್ಟು ಬೇಗ ಗ್ರಾಮಸ್ಥರು ಸುರಕ್ಷಿತ ಸ್ಥಳಗಳಿಗೆ ತೆರಳಲು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಹಸೀಲ್ದಾರ್‌ ಎ.ಡಿ. ಅಮರವಾದಗಿ ತಿಳಿಸಿದ್ದಾರೆ.  
 

Follow Us:
Download App:
  • android
  • ios