ಮುಂದಿನ ಒಂದು ವಾರ ರಾಜ್ಯದಲ್ಲಿ ಮಳೆ ಮುಂದುವರೆಯಲಿದ್ದು, ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ತಿಂಗಳಾಂತ್ಯದವರೆಗೆ ಮುಂದುವರೆಯಲಿದೆ.

ಬೆಂಗಳೂರು (ಜು.23): ಮುಂದಿನ ಒಂದು ವಾರ ರಾಜ್ಯದಲ್ಲಿ ಮಳೆ ಮುಂದುವರೆಯಲಿದ್ದು, ಕರಾವಳಿ ಸೇರಿದಂತೆ ವಿವಿಧ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ರಾಜ್ಯದಲ್ಲಿ ಉತ್ತಮ ಮಳೆಯಾಗುತ್ತಿದ್ದು, ತಿಂಗಳಾಂತ್ಯದವರೆಗೆ ಮುಂದುವರೆಯಲಿದೆ. ಕರಾವಳಿಯ ಮೂರು ಜಿಲ್ಲೆ, ಉತ್ತರ ಒಳನಾಡಿನ ಬೆಳಗಾವಿ, ಬಾಗಲಕೋಟೆ, ಬೀದರ್‌, ಕಲಬುರಗಿ, ವಿಜಯಪುರ, ಯಾದಗಿರಿ, ದಕ್ಷಿಣ ಒಳನಾಡಿನ ಬಳ್ಳಾರಿ, ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಹಾಗೂ ಮೈಸೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಮುನ್ಸೂಚನೆ ನೀಡಲಾಗಿದೆ.

ಮಂಗಳವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡ ವರದಿ ಪ್ರಕಾರ ಕಳೆದ 24 ಗಂಟೆಯಲ್ಲಿ ಸೇಡಂನಲ್ಲಿ ಅತಿ ಹೆಚ್ಚು 8 ಸೆಂ.ಮೀ., ಶಹಾಪುರ 7, ಕಾರವಾರ, ಗಬ್ಬೂರು, ಅಂಕೋಲಾದಲ್ಲಿ ತಲಾ 6, ಉಡುಪಿ, ಕುಮಟಾ, ಜಗಳೂರು, ಗೋಕರ್ಣ, ಬೀದರ್‌, ಔರಾದ್‌ನಲ್ಲಿ ತಲಾ 5, ಕೆರೂರು, ಮುದ್ದೇಬಿಹಾಳ್, ಗೇರುಸೊಪ್ಪ, ಚಿಂಚೋಳಿ, ಬಂಟ್ವಾಳದಲ್ಲಿ ತಲಾ 4, ಯಲಬುರ್ಗಾ, ಶಿರಾಲಿ, ಶಕ್ತಿನಗರ, ಪುತ್ತೂರು, ಮೂಲ್ಕಿ, ಮೂಡಬಿದರೆ, ಮಂಕಿಯಲ್ಲಿ ತಲಾ 3 ಸೆಂ.ಮೀ. ಮಳೆಯಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಭಾರಿ ಮಳೆ, ಗಾಳಿ ಮುನ್ಸೂಚನೆ: ಭಾರತೀಯ ಹವಾಮಾನ ಇಲಾಖೆ ಜು. 27ರ ವರೆಗೆ ಕರಾವಳಿಯಲ್ಲಿ ಭಾರಿ ಮಳೆ, ಗಾಳಿಯಾಗುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು, ಮೀನುಗಾರರು ಹೆಚ್ಚಿನ ಮುಂಜಾಗ್ರತೆ ವಹಿಸುವಂತೆ, ವಿಪತ್ತು ನಿರ್ವಹಣಾ ಸಮಿತಿಯಲ್ಲಿರುವ ಅಧಿಕಾರಿಗಳು ಸನ್ನದ್ಧರಾಗಿರುವಂತೆ ಜಿಲ್ಲಾಧಿಕಾರಿ ಸೂಚಿಸಿದ್ದಾರೆ. ಈ ಅವಧಿಯಲ್ಲಿ ಸಮುದ್ರದಲ್ಲಿ ಗಂಟೆಗೆ 50 ಕಿ.ಮೀ. ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆ ಇದೆ. ಆದ್ದರಿಂದ ಮೀನುಗಾರರು ಸಮುದ್ರಕ್ಕೆ ಇಳಿಯದಂತೆ, ಸಮುದ್ರ, ನದಿ ತೀರದ ಮತ್ತು ತಗ್ಗುಪ್ರದೇಶದ ಜನರು ಎಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಮನೆ ಸಂಪೂರ್ಣ ನಾಶ: ಕೆಲವು ದಿನಗಳಿಂದ ಬಿಡದೆ ಜಿಲ್ಲೆಯಾದ್ಯಂತ ಉತ್ತಮ ಮಳ‍ೆಯಾಗುತ್ತಿದ್ದು, ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 68 ಮಿ.ಮೀ. ಮಳೆಯಾಗಿದೆ. ಇದರಿಂದ ಒಂದು ಮನೆ ಸಂಪೂರ್ಣ ನಾಶವಗಿದ್ದು ಮತ್ತು 5 ಮನೆಗಳಿಗೆ ಸಾಕಷ್ಟು ಹಾನಿಯಾಗಿದೆ. ಕುಂದಾಪುರ ತಾಲೂಕಿನ ಕುಂದಬಾರಂದಾಡಿ ಗ್ರಾಮದ ರಾಘವೇಂದ್ರ ಜೋಗಿ ಅವರ ಮನೆ ಮಳೆಯಿಂದ ಸಂಪೂರ್ಣ ಕುಸಿದಿದ್ದು ಅವರಿಗೆ ಸುಮಾರು 10 ಲಕ್ಷ ರು. ನಷ್ಟ ಸಂಭವಿಸಿದೆ. ಗಂಗೊಳ್ಳಿ ಗ್ರಾಮದ ರೇಖಾ ಖಾರ್ವಿ ಮನೆಗೆ ಗಾಳಿ, ಮಳೆಯಿಂದ 2,50,000 ರು., ಕಾಪು ತಾಲೂಕಿನ ನಡ್ಸಾಲು ಗ್ರಾಮದ ಸೂರ್ಯಪ್ರಕಾಶ್ ಮನೆಗೆ ಮಳೆಯಿಂದ 1,00,000 ರು.ಗಳಷ್ಟು ನಷ್ಟವಾಗಿದೆ.

ಕುಂದಾಪುರ ತಾಲೂಕಿನ ಗಂಗೊಳ್ಳಿ ಗ್ರಾಮದ ಮಹಮದ್ ಜುಬೇರ್ ಅವರ ಮನೆ ಗೋಡೆ ಕುಸಿದು 15,000 ರು., ಹಾರ್ದಳ್ಳಿ ಮಂಡಳಿ ಗ್ರಾಮದ ಭಾರತಿ ಭುಜಂಗ ಶೆಟ್ಟಿ ಅವರ ಮನೆ ಮಳೆಯಿಂದ ಭಾಗಶಃ ಹಾನಿ 25,000 ರು. ಬೈಂದೂರು ತಾಲೂಕಿನ ಹೆರೂರು ಗ್ರಾಮದ ನೀಲು ಮೊಗವೀರ ಅವರ ಮನೆ ಗೋಡೆ 35,000 ರು., ಕಸಬಾ ನಿವಾಸಿ ರಾಧಾ ಬಿ. ಚಂದನ್ ಅವರ ಮನೆ ಮೇಲೆ ತೆಂಗಿನ ಮರ ಬಿದ್ದು 30,000 ರು.ಗಳಷ್ಟು ನಷ್ಟವಾಗಿದೆ. ಕುಂದಾಪುರ ತಾಲೂಕು ಮೊಳಹಳ್ಳಿ ಗ್ರಾಮದ ಲಚ್ಚ ಅವರ ಮನೆಗೆ ಹೊಂದಿಕೊಂಡು ಇರುವ ದನದ ಕೊಟ್ಟಿಗೆ ಹಾನಿಯಾಗಿ 21,000 ರು. ನಷ್ಟವಾಗಿದೆ.