ವಕ್ಫ್ ಆಸ್ತಿ ವಿವಾದ: ರೈತರ ನೆರವಿಗೆ ಧಾವಿಸಿ, ಸಂಸತ್ ಸಮಿತಿಗೆ ಪತ್ರ ಬರೆದ ಸಂಸದ ತೇಜಸ್ವಿ ಸೂರ್ಯ
ಕರ್ನಾಟಕದಲ್ಲಿ ವಕ್ಫ್ ಮಂಡಳಿಯಿಂದ ರೈತರಿಗೆ ನೋಟಿಸ್ ನೀಡಿರುವ ವಿಚಾರದ ಬಗ್ಗೆ ಸಂಸದ ತೇಜಸ್ವಿ ಸೂರ್ಯ ಜಂಟಿ ಸಂಸದೀಯ ಮಂಡಳಿಗೆ ಪತ್ರ ಬರೆದಿದ್ದಾರೆ. ರೈತರ ಸಮಸ್ಯೆಗಳನ್ನು ಆಲಿಸಲು ಜಂಟಿ ಸಂಸದೀಯ ಸಮಿತಿಗೆ ಮನವಿ ಮಾಡಿದ್ದಾರೆ.
ಬೆಂಗಳೂರು (ಅ.30): ಕರ್ನಾಟಕದಲ್ಲಿ ವಕ್ಫ್ ಮಂಡಳಿಯಿಂದ ರೈತರಿಗೆ ನೋಟಿಸ್ ನೀಡಿರುವ ವಿಚಾರ ತೀವ್ರ ಚರ್ಚೆಗೆ ಮತ್ತು ಪ್ರತಿಭಟನೆಗೆ ಗ್ರಾಸವಾದ ಬೆನ್ನಲ್ಲೇ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಕೇಂದ್ರ ವಕ್ಫ್ ತಿದ್ದುಪಡಿ ಕಾಯ್ದೆ ಜಂಟಿ ಸಂಸದೀಯ ಸಮಿತಿಗೆ ಪತ್ರ ಬರೆದಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಸಂಕಷ್ಟಕ್ಕೆ ಸಿಲುಕಿರುವ ರೈತರ ನೆರವಿಗೆ ಧಾವಿಸಿದ್ದಾರೆ.
ಕೇಂದ್ರ ಸರ್ಕಾರದಿಂದ ಈಗಾಗಲೇ ರಚಿಸಲಾದ ವಕ್ಫ್ ತಿದ್ದುಪಡಿ ಕಾಯ್ದೆಯ ಜಂಟಿ ಸಂಸದೀಯ ಸಮಿತಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಅವರಿಗೆ ಪತ್ರದ ಮೂಲಕ ರಾಜ್ಯದಲ್ಲಿ ಆಗುತ್ತಿರುವ ಬೆಳವಣಿಗೆಗಳ ಬಗ್ಗೆ ಮಾಹಿತಿ ರವಾನಿಸಿ, ಕೂಡಲೇ ಸಮಸ್ಯೆಗಳನ್ನು ಆಲಿಸಲು ರೈತರ ನಿಯೋಗವನ್ನು ಆಹ್ವಾನಿಸಬೇಕು ಎಂದು ಮನವಿ ಮಾಡಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಅವರು, ಬರೆದ ಪತ್ರವನ್ನು ಸಾಮಾಜಿಕ ಜಾಲತಾಣ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
ಎಕ್ಸ್ ಪೋಸ್ಟ್‌ನಲ್ಲಿ ಪತ್ರ ಹಂಚಿಕೊಂಡ ಸಂಸದ ತೇಜಸ್ವಿ ಸೂರ್ಯ ಅವರು, 'ವಿಜಯಪುರ & ಕರ್ನಾಟಕದ ಇತರ ಜಿಲ್ಲೆಗಳ ರೈತರ ಜಮೀನನ್ನು ವಕ್ಫ್ ಆಸ್ತಿಯನ್ನಾಗಿ ಘೋಷಿಸುವ ಕುರಿತು ಬಂದಿರುವ ನೋಟಿಸ್ ಗಳ ಕುರಿತು, ವಕ್ಫ್ ತಿದ್ದುಪಡಿ ವಿಧೇಯಕದ ಜಂಟಿ ಸದನ ಸಮಿತಿ ಚೇರ್ಮನ್ ಆಗಿರುವ ಶ್ರೀ ಜಗದoಬಿಕಾ ಪಾಲ್ ರವರಿಗೆ ಪತ್ರ ಬರೆದು, ವಕ್ಫ್ ಬೋರ್ಡ್ ನಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಗಮನ ಸೆಳೆದಿದ್ದೇನೆ. ನೋಟಿಸ್ ಗಳ ಹೊರತಾಗಿಯೂ ಹಲವರ ಆರ್ ಟಿ ಸಿ, ಪಹಣಿ ಗಳಲ್ಲಿಯೂ ಯಾವುದೇ ಸಮರ್ಪಕ ಕಾನೂನುಗಳನ್ನು ಪಾಲಿಸದೇ ವಕ್ಫ್ ಆಸ್ತಿಗಳೆಂದು ತಿದ್ದುಪಡಿ ಮಾಡಲಾಗಿದ್ದು, ಈ ರೀತಿ ತೊಂದರೆಗೆ ಒಳಗಾಗಿರುವ ರೈತರ ನಿಯೋಗವನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಆಲಿಸುವಂತೆ ಮನವಿ ಮಾಡಿದ್ದು, ಇದರಿಂದ ವಕ್ಫ್ ನಿಂದ ಆಗಿರುವ ಭೂಮಿ ಅತಿಕ್ರಮಣದ ನೇರ ಮಾಹಿತಿ ದೊರಕಲಿದೆ' ಎಂದು ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಐರನ್‌ಮ್ಯಾನ್ ರೇಸ್ ಪೂರ್ಣಗೊಳಿಸಿದ ಮೊದಲ ಜನಪ್ರತಿನಿಧಿ; ದಾಖಲೆ ಬರೆದ ತೇಜಸ್ವಿ ಸೂರ್ಯ!
ಕರ್ನಾಟಕದ ರೈತರಿಗೆ ವಕ್ಫ್ ಬೋರ್ಡ್‌ನಿಂದ ನೋಟಿಸ್‌ಗಳನ್ನು ನೀಡಿದ ನಂತರ ಯಾವುದೇ ಕಾನೂನು ಪ್ರಕ್ರಿಯೆ ಪಾಲಿಸದೇ ನೇರವಾಗಿ ಕೆಲವು ರೈತರ ಜಮೀನುಗಳ ಆರ್‌ಟಿಸಿ, ಪಹಣಿ ಮತ್ತು ಮ್ಯುಟೇಶನ್ ದಾಖಲೆಗಳಲ್ಲಿ ಇದು ವಕ್ಫ್ ಆಸ್ತಿ ಎಂದು ಹೆಸರು ಬದಲಾವಣೆ ಮಾಡಲಾಗಿದೆ. ಹೀಗಾಗಿ, ಜಂಟಿ ಸಂಸದೀಯ ಸಮಿತಿಯ ಮುಂದೆ ಎಲ್ಲ ಮಾಹಿತಿಗಳನ್ನು ಹಾಗೂ ಸಾಕ್ಷಿಗಳನ್ನು ಬಿಚ್ಚಿಡಲು ಸ್ಥಳೀಯ ರೈತರ ನಿಯೋಗವನ್ನು ಆಹ್ವಾನಿಸಿ ಅವರ ಸಮಸ್ಯೆಯನ್ನು ನೇರವಾಗಿ ಆಲಿಸಬೇಕು. ಮುಂದುವರೆದು, ರಾಜ್ಯ ವಕ್ಫ್ ಮಂಡಳಿಯಿಂದ ಬಾಧಿತರಾಗಿರುವ ರೈತರ ಸ್ಥಳಗಳಿಗೆ ನೇರವಾಗಿ ಭೇಟಿ ಮಾಡಿ ಮಾಹಿತಿಯನ್ನು ಕಲೆ ಹಾಕುವಂತೆಯೂ ಮನವಿ ಮಾಡಿಕೊಂಡಿದ್ದಾರೆ.