ಸಾರ್ವಜನಿಕರಿಗೊಂದು ರೂಲ್ಸ್ ಪೊಲೀಸರಿಗೊಂದು ರೂಲ್ಸ್‌ ಎನ್ನುವ ಟೀಕೆಗಳು ಹೆಚ್ಚಾದ ಹಿನ್ನೆಲೆಯಲ್ಲಿ ಪೊಲೀಸರು ಸಹ ಕಡ್ಡಾಯವಾಗಿ ನಿಯಮ ಪಾಲಿಸುವಂತೆ ಖಡಕ್ ಸೂಚನೆ ನೀಡಲಾಗಿದೆ.

ಬೆಂಗಳೂರು, (ಆಗಸ್ಟ್.26): ಸಾರ್ವಜನಿಕರು ಸಂಚಾರ ನಿಯಮ ಪಾಲನೆ ಮಾಡದಿದ್ದರೆ ಪೊಲೀಸರು ತಡೆದು ದಂಡ ಹಾಗೂ ಕಾನೂನುಕ್ರಮ ಜರುಗಿಸುವುದು ಸಾಮಾನ್ಯ. ಆದ್ರೆ, ಪೊಲೀಸರೇ ನಿಯಮಗಳನ್ನು ಉಲ್ಲಂಘಿಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಈ ಹಿನ್ನೆಲೆಯಲ್ಲಿ ಪೊಲೀಸರು ಸಹ ಕಡ್ಡಾಯವಾಗಿ ನಿಯಮ ಪಾಲಿಸುವಂತೆ ಸಾರಿಗೆ ಇಲಾಖೆ ಮಹತ್ವದ ಆದೇಶ ಹೊರಡಿಸಿದೆ.

ಪೊಲೀಸ್ ಇಲಾಖೆಯ ವಾಹನ ಚಾಲಕರು ಮತ್ತು ಅಧಿಕಾರಿ-ಸಿಬ್ಬಂದಿ ವಾಹನ ಚಲಾಯಿಸುವಾಗ ಕಡ್ಡಾಯವಾಗಿ ಸಂಚಾರ ನಿಯಮಗಳನ್ನು ಪಾಲನೆ ಮಾಡುವಂತೆ ಸಾರಿಗೆ ಇಲಾಖೆ ಖಡಕ್ ಸೂಚನೆ ಕೊಟ್ಟಿದೆ.

ಹೆಲ್ಮೆಟ್ ಧರಿಸದ್ದಕ್ಕೆ ದಂಡ: ಸಿಟ್ಟಿಗೆದ್ದು ಬಿಲ್ ಕಟ್ಟದ ಪೊಲೀಸ್ ಠಾಣೆಯ ಪವರ್‌ ಕಟ್ ಮಾಡಿದ ಲೈನ್‌ಮ್ಯಾನ್‌

ಸರ್ಕಾರದ ವಾಹನಗಳು ಮತ್ತು ಚಾಲಕರು ಸಂಚಾರ ನಿಯಮ ಉಲ್ಲಂಘನೆ ಮಾಡುವುದನ್ನು ಸಾರ್ವಜನಿಕರು ಮೊಬೈಲ್‌ ಫೋನ್​ ನಲ್ಲಿ ವಿಡಿಯೋ ಮಾಡಿ ಜಾಲತಾಣದಲ್ಲಿ ಹರಿಬಿಟ್ಟು ವೈರಲ್ ಮಾಡುತ್ತಿದ್ದಾರೆ. ಇದಲ್ಲದೆ, ಇ-ಮೇಲ್, ಪಬ್ಲಿಕ್ ಐ APP ಮತ್ತು ವಾಟ್ಸಪ್‌ನಲ್ಲಿ ಫೋಟೋ ಸಮೇತ ದೂರು ನೀಡುತ್ತಿದ್ದಾರೆ. ಇದರಿಂದ ಇಲಾಖೆಗೆ ಮುಜುಗರ ಉಂಟಾಗುತ್ತಿದೆ.ಆದ್ದರಿಂದ ಪೊಲೀಸ್ ಇಲಾಖೆಯಲ್ಲಿ ವಾಹನ ಚಾಲಕರಾಗಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿ ಸಂಚಾರ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಸೂಚಿಸಲಾಗಿದೆ.

ಸರ್ಕಾರದ ವಾಹನ ಚಾಲನೆ ಮಾಡುವಾಗ ಸೀಟ್ ಬೆಲ್ಟ್ ಧರಿಸುವುದು, ಇಲಾಖಾ ಬೈಕ್‌ಗಳಲ್ಲಿ ಸಾಗುವಾಗ ಸವಾರ/ಹಿಂಬದಿ ಸವಾರ ಇಬ್ಬರೂ ಹೆಲ್ಮೆಟ್ ಧರಿಸಿರುವುದು, ಒನ್‌ವೇನಲ್ಲಿ ಚಾಲನೆ ಮಾಡದೆ ಇರುವುದು, ಮೊಬೈಲ್ ಫೋನ್​ ಬಳಸದಿರುವುದು, ದೋಷಪೂರಿತ ನಂಬರ್ ಪ್ಲೇಟ್ ಹೊಂದಿರದಿರುವುದು, ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆ ಮಾಡದಿರುವುದು ಮುಂತಾದ ನಿಯಮಗಳನ್ನು ಪಾಲಿಸಲೇಬೇಕು.

ಒಂದು ವೇಳೆ ನಿಯಮ ಉಲ್ಲಂಘನೆ ಮಾಡದಿದ್ದರೆ ಸರ್ಕಾರಿ ಅಧಿಕಾರಿ, ನೌಕರರ ವಿರುದ್ಧ ಮೋಟಾರು ವಾಹನ ಕಾಯ್ದೆ ಅನ್ವಯ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲಾಗುತ್ತದೆ. ಆದರಿಂದ ಎಲ್ಲ ಪೊಲೀಸ್ ಠಾಣೆಗಳಲ್ಲಿ ತಮ್ಮ ಸಿಬ್ಬಂದಿಗೆ ತಿಳುವಳಿಕೆ ನೀಡಬೇಕೆಂದು ಸಾರಿಗೆ ಇಲಾಖೆ ಹೇಳಿದೆ.