38 ದೇಶದ ಕನ್ನಡಿಗರೊಂದಿಗೆ ಸಚಿವ ಸಿ.ಟಿ. ರವಿ ಸಂವಾದ
ಕೊರೋನಾ ವೈರಸ್‌ನಿಂದ 38 ವಿವಿಧ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರೊಂದಿಗೆ ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ತಮ್ಮ ಸ್ವಗೃಹದಿಂದಲೇ ಸ್ಕೈಪ್ ಮೂಲಕ ಸಂವಾದ ನಡೆಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
ಚಿಕ್ಕಮಗಳೂರು(ಮೇ.04): ಕೋವಿಡ್-19 ನಿಂದಾಗಿ ದೇಶಗಳಲ್ಲಿ ನೆಲೆಸಿರುವ ಕನ್ನಡಿಗರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಲು ರಾಜ್ಯದಿಂದ ಸಹಾಯವಾಣಿಯನ್ನು ಆರಂಭಿಸಲಾಗುವುದು ಎಂದು ರಾಜ್ಯ ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ ಹೇಳಿದರು.
ಪ್ರಸ್ತುತ ಹೋಂ ಕ್ವಾರಂಟೈನ್‌ನಲ್ಲಿರುವ ಸಚಿವರು ತಮ್ಮ ಸ್ವಗೃಹದಲ್ಲಿದ್ದುಕೊಂಡೇ ದೇಶದಲ್ಲಿ ನೆಲೆಸಿರುವ ಕನ್ನಡಿಗರೊಂದಿಗೆ ಸ್ಕೈಫ್ ಆ್ಯಪ್ ಮೂಲಕ ಸುಮಾರು 38 ವಿದೇಶಗಳ 56 ಕನ್ನಡಿಗ ಪ್ರತಿನಿಧಿಗಳೊಂದಿಗೆ ವಿಡಿಯೋ ಸಂವಾದದಲ್ಲಿ ಶನಿವಾರ ಮಾತನಾಡಿದರು.
ಯುರೋಪ್, ಫ್ರಾನ್ಸ್, ದುಬೈ, ಸಿಂಗಾಪುರ್, ಇಟಲಿ, ಅಮೆರಿಕ, ಆಸ್ಪ್ರೇಲಿಯಾ, ಈಜಿಪ್ಟ್, ಕೀನ್ಯಾ, ಡೆನ್ಮಾರ್ಕ್ ಸೇರಿದಂತೆ 38 ದೇಶಗಳಲ್ಲಿ ನೆಲೆಸಿರುವ ಅನಿವಾಸಿ ಕನ್ನಡಿಗರೊಂದಿಗೆ ಮಾತನಾಡಿದ ಅವರು, ವಿದ್ಯಾರ್ಥಿಗಳು, ಪ್ರವಾಸಿಗರು ಹಾಗೂ ಅಲ್ಲಿನ ಉದ್ಯೋಗಿಗಳಿಗೆ ಸಂಕಷ್ಟಎದುರಾಗಿದೆ. ಸಂಬಳ ಕಡಿತದ ಜೊತೆಗೆ ಉದ್ಯೋಗ ಕಳೆದುಕೊಳ್ಳುವ ಭೀತಿಯಿರುವ ಬಗ್ಗೆ ಮಾಹಿತಿ ಪಡೆದು ಇದನ್ನು ಸರ್ಕಾರದ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದು ಹೇಳಿದರು.
ದೇಶಗಳಲ್ಲಿ ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳು ಆರ್ಥಿಕ ಪರಿಸ್ಥಿತಿ ಸುಧಾರಣೆಗಾಗಿ ಪಾರ್ಟ್ ಟೈಮ್ ಕೆಲಸ ನಿರ್ವಹಿಸಿ ತಮ್ಮ ವಿದ್ಯಾಭ್ಯಾಸ ಕೈಗೊಂಡಿದ್ದರು ಇದೀಗ ಲಾಕ್‌ಡೌನ್‌ನಿಂದಾಗಿ ಮತ್ತಷ್ಟುಆರ್ಥಿಕ ಸಂಕಷ್ಟಎದುರಿಸುತ್ತಿದ್ದಾರೆ. ಈ ಬಗ್ಗೆ ನಮ್ಮನ್ನು ಏರ್‌ಲಿಫ್ಟ್ ಅಥವಾ ಪರ್ಯಾಯ ಮಾರ್ಗದ ಮೂಲಕ ದೇಶಕ್ಕೆ ಕರೆಸಿಕೊಳ್ಳುವಂತೆ ಮನವಿ ಮಾಡಿದ್ದಾರೆ ಎಂದು ತಿಳಿಸಿದರು.
ವಿದೇಶದಲ್ಲಿ ನೆಲೆಸಿರುವ ಕನ್ನಡಿಗರಿಗೆ ನಮ್ಮ ರೇಡಿಯೋ ಕಾರ್ಯಕ್ರಮಗಳ ಮೂಲಕ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದೆ, ಜೊತೆಗೆ ಅಕ್ಷಯ ಪಾತ್ರೆ, ಕನ್ನಡ ಸಂಘ, ಭಾರತೀಯ ಸಂಘಟನೆಗಳು ಆಹಾರದ ಕಿಟ್‌ಗಳನ್ನು ವಿತರಿಸುವ ಮೂಲಕ ಧೈರ್ಯ ತುಂಬುವ ಕೆಲಸ ಮಾಡುತ್ತಿದ್ದು ಅಲ್ಲಿನ ಸ್ಥಳೀಯರು ಕೂಡ ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಕೈಲಾದ ಧನಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆಯುತ್ತಿದ್ದಾರೆ ಎಂದರು.
ಚಿಕ್ಕಮಗಳೂರಲ್ಲಿ ಇಬ್ಬರ ಪೈಕಿ ಒಬ್ಬರದು ನೆಗಟಿವ್: ಸಿ.ಟಿ.ರವಿ
ಚಿಕ್ಕಮಗಳೂರು ನಿವಾಸಿ ಇಟಲಿಯಲ್ಲಿ ನರ್ಸ್ ಆಗಿ ಸೇವೆ ಸಲ್ಲಿಸುತ್ತಿರುವ ಹೇಮಾ ಗೌಡ ಎಂಬುವವರು ಅಲ್ಲಿ 14 ದಿನಗಳಿಗೊಮ್ಮೆ ಪರೀಕ್ಷೆ ನಡೆಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಆರಂಭದ ಆಘಾತದಿಂದ ಚೇತರಿಸಿಕೊಂಡು ನಿಯಂತ್ರಣಕ್ಕೆ ತರಲು ಸಾಧ್ಯವಾಗಿದೆ ಎಂಬ ಮಾತು ಹೇಳಿದರು.
ಅನಿವಾಸಿ ಕನ್ನಡಿಗರ ಸಹಾಯಕ್ಕಾಗಿ ರಾಜ್ಯ ಸರ್ಕಾರವು ಸಹಾಯವಾಣಿ ಹಾಗೂ ವೆಬ್‌ಸೈಟ್ ತೆರೆಯುವ ಮೂಲಕ ಸಮಸ್ಯೆಗಳನ್ನು ಆಲಿಸಬೇಕು. ಜೊತೆಗೆ ಅಲ್ಲಿಂದ ಬರುವವರಿಗೆ ಸೂಕ್ತ ಮಾರ್ಗದರ್ಶನ ನೀಡುವ ಕೆಲಸ ಮಾಡಬೇಕು ಎಂಬ ಒಕ್ಕೊರಲಿನ ಅಭಿಪ್ರಾಯ ವ್ಯಕ್ತವಾಗಿದೆ. ಕೋವಿಡ್ ನಿಯಂತ್ರಣದ ಬಳಿಕ ಆಯಾ ದೇಶಗಳೊಂದಿಗೆ ಮಾತನಾಡಿ, ಉದ್ಯೋಗ ಭದ್ರತೆಗಾಗಿ ಭಾರತ ಸರ್ಕಾರ ನೆರವಿಗೆ ಧಾವಿಸುವಂತೆ ಕೇಳಿಕೊಂಡಿದ್ದಾರೆ ಎಂದು ತಿಳಿಸಿದರು.
ವಿದೇಶಗಳಲ್ಲಿ ನೆಲೆಸಿ ಆರೋಗ್ಯ ಇಲಾಖೆ ಹಾಗೂ ಇತರೆ ಇಲಾಖೆ ಕರ್ತವ್ಯ ನಿರ್ವಹಿಸುತ್ತಿರುವ ಕನ್ನಡಿಗರು ಮಾಡುತ್ತಿರುವ ಸೇವಾ ಕಾರ್ಯಕ್ಕೆ ವಿದೇಶಗಳಲ್ಲಿಯೂ ಪ್ರಶಂಸೆ ವ್ಯಕ್ತವಾಗಿದೆ. ಆಸ್ಪ್ರೇಲಿಯಾದಲ್ಲಿ ಸಾಕಷ್ಟುಕನ್ನಡಿಗರ ವೀಸಾ ಅವಧಿ ಮುಗಿದಿದೆ. ಅದರ ನವೀಕರಣಕ್ಕೆ 400 ಡಾಲರ್ ನೀಡುವಂತೆ ತಿಳಿಸಿದ್ದಾರೆ. ಇದರಿಂದಾಗಿ ಆರ್ಥಿಕ ಹೊರೆಯಾಗಿದ್ದು, ಇದರ ವಿಸ್ತರಣೆಗೆ ಕಾಲಾವಧಿ ನೀಡುವಂತೆ ಕೇಳಿಕೊಂಡಿದ್ದಾರೆ. ಈ ಕುರಿತು ಸಂಬಂಧಪಟ್ಟಕೇಂದ್ರ ಸಚಿವರೊಂದಿಗೆ ಮಾತನಾಡಿ ಕ್ರಮ ವಹಿಸಲಾಗುವುದು ಎಂದರು.
ಸಂವಾದದಲ್ಲಿ ದೇಶಿ ಕನ್ನಡಿಗರ ಅಹವಾಲುಗಳನ್ನು ಆಲಿಸಿದ ಅವರು ತಮ್ಮ ಸಮಸ್ಯೆಗಳನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಗಮನಕ್ಕೆ ತಂದು ಕ್ರಮ ವಹಿಸಲಾಗುವುದು ಎಂದು ತಿಳಿಸಲಾಗಿದೆ ಎಂದು ಹೇಳಿದರು.