Asianet Suvarna News Asianet Suvarna News

KRSನಲ್ಲಿ ನಿರ್ಮಾಣವಾಗಲಿದೆ ಎತ್ತರದ ಪ್ರತಿಮೆ

ಇತ್ತೀಚೆಗಷ್ಟೇ ಸರ್ದಾರ್ ಪಟೇಲ್ ಅವರ ಎತ್ತರ ಪ್ರತಿಮೆ ನಿರ್ಮಾಣವಾಗಿ ದಾಖಲೆ ಬರೆದಿದೆ. ಇದೇ ರೀತಿ ರಾಜ್ಯದಲ್ಲಿಯೂ ಕೂಡ ಕೆ ಆರ್ ಎಸ್ ನಲ್ಲಿ ಕಾವೇರಿ ಪ್ರತಿಮೆ ನಿರ್ಮಾಣ ಮಾಡಲು ರಾಜ್ಯ ಸರ್ಕಾರ ಯೋಜನೆಯೊಂದನ್ನು ರೂಪಿಸಿದೆ. 

Karnataka to build 125feet Cauvery statue in own Disneyland
Author
Bengaluru, First Published Nov 15, 2018, 7:46 AM IST

ಬೆಂಗಳೂರು :  ವಿಶ್ವವಿಖ್ಯಾತ ಕೆಆರ್‌ಎಸ್‌ ಉದ್ಯಾನವನ್ನು ಅಮೆರಿಕದ ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ರಾಜ್ಯ ಸರ್ಕಾರವು ಯೋಜನೆಯೊಂದನ್ನು ಸಿದ್ಧಪಡಿಸಿದೆ.

125 ಅಡಿ ಎತ್ತರದ ಕಾವೇರಿ ಮಾತೆಯ ಪ್ರತಿಮೆಯನ್ನೊಳಗೊಂಡ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಚಯ, ಗೋಪುರಯುಕ್ತ ಗಾಜಿನ ಮನೆ, ವೀಕ್ಷಣೆ ಗೋಪುರ, ಬ್ಯಾಂಡ್‌ ಸ್ಟಾಂಡ್‌, ಒಳಾಂಗಣ ಕ್ರೀಡಾಂಗಣ ಸೇರಿದಂತೆ ಇತರೆ ಇತಿಹಾಸ ಸಾರುವ ಕಟ್ಟಡಗಳು ಡಿಸ್ನಿಲ್ಯಾಂಡ್‌ ಮಾದರಿಯಲ್ಲಿ ಅಭಿವೃದ್ಧಿ ಹೊಂದಲಿರುವ ಕೆಆರ್‌ಎಸ್‌ನಲ್ಲಿ ನಿರ್ಮಾಣವಾಗಲಿವೆ.

ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್‌ ನೇತೃತ್ವದಲ್ಲಿ ಬುಧವಾರ ವಿಕಾಸಸೌಧದಲ್ಲಿ ಉನ್ನತಮಟ್ಟದ ಅಧಿಕಾರಿಗಳ ಸಭೆ ನಡೆಯಿತು. ಸಭೆಯಲ್ಲಿ ಯೋಜನೆಯ ರೂಪುರೇಷೆ ಕುರಿತು ಕೂಲಂಕುಷವಾಗಿ ಚರ್ಚೆ ನಡೆಸಲಾಯಿತು. ಜೈಪುರದ ಸಿನ್ಸಿಯರ್‌ ಆರ್ಕಿಟೆಕ್ಟ್ ಕನ್ಸಲ್ಟೆಂಟ್‌ ಸಂಸ್ಥೆ ನೀಡಿದ ಪ್ರಾತ್ಯಕ್ಷಿಕೆ ಆಧರಿಸಿ ಸಚಿವರು ಯೋಜನೆ ಕುರಿತು ಮತ್ತಷ್ಟುಸಲಹೆ, ಸೂಚನೆಗಳನ್ನು ನೀಡಿದರು. ಪಾರಂಪರಿಕ ತಾಣದ ಮೂಲ ಸ್ವರೂಪಕ್ಕೆ ಧಕ್ಕೆಯಾಗದಂತೆ ಬೃಂದಾವನವನ್ನು ವಿಶ್ವಪ್ರವಾಸಿ ತಾಣಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿ ನಿಲ್ಲಿಸುವುದು ಯೋಜನೆಯ ಮೂಲ ಸಂಕಲ್ಪವಾಗಿರಬೇಕು ಎಂದು ಸಚಿವ ಡಿ.ಕೆ.ಶಿವಕುಮಾರ್‌ ತಿಳಿಸಿದರು.

1200 ಕೋಟಿ ರು. ವೆಚ್ಚದ ಯೋಜನೆ:  ಸಭೆಯಲ್ಲಿ ನಡೆದ ಚರ್ಚೆಯ ಪ್ರಕಾರ ಯೋಜನೆಯ ಒಟ್ಟು ವೆಚ್ಚವು 1200 ಕೋಟಿ ರು. ಆಗಿದ್ದು, ಜಾಗತಿಕ ಟೆಂಡರ್‌ ಮೂಲಕ ವಿಶ್ವಮಟ್ಟದ ಸಂಸ್ಥೆಗೆ ಯೋಜನೆ ಗುತ್ತಿಗೆ ವಹಿಸಿಕೊಡಲಾಗುವುದು. ಆದರೆ, ಸ್ಥಳಾವಕಾಶ ಹೊರತುಪಡಿಸಿದರೆ ರಾಜ್ಯ ಸರ್ಕಾರವು ನಯಾಪೈಸೆ ಬಂಡವಾಳ ಹೂಡುವುದಿಲ್ಲ. ಟೆಂಡರ್‌ನಲ್ಲಿ ಭಾಗವಹಿಸುವ ಸಂಸ್ಥೆ ಉತ್ತಮ ಆರ್ಥಿಕ ಹಿನ್ನೆಲೆ ಹೊಂದಿದ್ದು, ಕಲಾತ್ಮಕ ವಿನ್ಯಾಸದಲ್ಲಿ ಜಾಗತಿಕ ಮಟ್ಟದ ನೈಪುಣ್ಯತೆ ಪಡೆದಿರಬೇಕು. ಪ್ರಸ್ತುತ ಇರುವ ದೋಣಿ ವಿಹಾರ ಸರೋವರದ ಪಕ್ಕದಲ್ಲಿ ಮತ್ತೊಂದು ಸರೋವರ ನಿರ್ಮಿಸಿ ಅದರ ಮಧ್ಯದಲ್ಲಿ 360 ಅಡಿ ಎತ್ತರದ ಮ್ಯೂಸಿಯಂ ಸಮುಚ್ಚಯ ಅಸ್ತಿತ್ವಕ್ಕೆ ಬರಲಿದೆ. ಈ ಸಮುಚ್ಚಯದ ಮೇಲ್ಭಾಗದಲ್ಲಿ ಕಾವೇರಿ ಮಾತೆಯ 125 ಅಡಿ ಎತ್ತರದ ಪ್ರತಿಮೆ ಇರಲಿದೆ. ಕಾವೇರಿ ಮಾತೆಯ ಪದತಲದಲ್ಲಿ ಮ್ಯೂಸಿಯಂ ಕಟ್ಟಡ ಇರಲಿದೆ. ಬೃಂದಾವನದ ಕಡೆಯಿಂದ ಇದು ಅಣೆಕಟ್ಟೆಯ ಎತ್ತರವನ್ನು ದಾಟಲಿದೆ. ಅದೇ ರೀತಿ ಗೋಪುರವುಳ್ಳ ಗಾಜಿನಮನೆ ಸಹ ರೂಪುಗೊಳ್ಳಲಿದೆ. ಈ ಎರಡೂ ಕಟ್ಟಡಗಳಿಂದ ಅಣೆಕಟ್ಟೆಯ ವಿಹಂಗಮ ನೋಟ ಗೋಚರವಾಗಲಿದೆ. ಮ್ಯೂಸಿಯಂನಲ್ಲಿ ಕೆಆರ್‌ಎಸ್‌, ಮೈಸೂರು, ರಾಜ್ಯದ ಇತಿಹಾಸ ಸಾರುವ ಕಲಾತ್ಮಕ, ಪ್ರಾಚ್ಯವಸ್ತುಗಳು ಇರಲಿವೆ.

2 ವರ್ಷದಲ್ಲಿ ಪೂರ್ಣಗೊಳಿಸುವ ಗುರಿ:  ಮೈಸೂರು ಮತ್ತು ಮಂಡ್ಯದ ಕೆಆರ್‌ಎಸ್‌ ಈಗಾಗಲೇ ಜಗತ್ಪ್ರಸಿದ್ಧವಾಗಿವೆ. ಇವುಗಳನ್ನು ವಿಶ್ವದಲ್ಲಿಯೇ ಅಗ್ರಗಣ್ಯ ಪ್ರವಾಸಿ ಆಕರ್ಷಣೆಯ ತಾಣವಾಗಿ ಪರಿವರ್ತಿಸುವುದು ಯೋಜನೆಯ ಉದ್ದೇಶವಾಗಿದೆ. ಬೃಂದಾವನದಿಂದ ರಾಜ್ಯ ಸರ್ಕಾರಕ್ಕೆ ಬರುತ್ತಿರುವ ವಾರ್ಷಿಕ ಆದಾಯ 6 ಕೋಟಿ ರು. ಆಗಿದೆ. ಹೊಸ ಯೋಜನೆ ಪ್ರಕಾರ ವಾರ್ಷಿಕ 300 ಕೋಟಿ ರು.ಗಿಂತ ಅಧಿಕ ವಹಿವಾಟು ನಡೆಯಲಿದೆ. ಸರ್ಕಾರಕ್ಕೆ 30 ಕೋಟಿ ರು. ವರಮಾನ ಬರಲಿದೆ ಎಂದು ಅಂದಾಜು ಮಾಡಲಾಗಿದೆ. ಎರಡು ವರ್ಷದಲ್ಲಿ ಯೋಜನೆ ಪೂರ್ಣಗೊಳಿಸುವ ಗುರಿ ಹಾಕಿಕೊಳ್ಳಲಾಗಿದೆ. ಯೋಜನಾ ವರದಿ ಮತ್ತು ಒಪ್ಪಂದ ಕುರಿತು ನ.20ರಂದು ಕಾವೇರಿ ನೀರಾವರಿ ನಿಮಗದ ಅಂದಾಜು ಪರಿಶೀಲನಾ ಸಮಿತಿ ಸಭೆ ಅಂತಿಮಗೊಳಿಸಲಿದೆ. ನಂತರ ಕ್ರಮವಾಗಿ ಕಾವೇರಿ ನೀರಾವರಿ ನಿಗಮದ ಆಡಳಿತ ಮಂಡಳಿ ಸಭೆ, ಸರ್ಕಾರದ ಉನ್ನತ ಮಟ್ಟದ ಸಮಿತಿ ಸಭೆಯಲ್ಲಿ ಕೂಲಂಕಷವಾಗಿ ಪರಿಶೀಲನೆ ನಡೆಸಿ ನಂತರ ಸಚಿವ ಸಂಪುಟ ಸಭೆ ಜಾಗತಿಕ ಟೆಂಡರ್‌ ಕುರಿತು ನಿರ್ಣಯ ಕೈಗೊಳ್ಳಲಾಗುತ್ತದೆ.

ಸಭೆಯಲ್ಲಿ ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌, ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಡಾ.ಎಸ್‌.ಸುಬ್ರಹ್ಮಣ್ಯ, ಜಲಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌, ಕಾರ್ಯದರ್ಶಿ ಜೈ ಪ್ರಕಾಶ್‌, ಕಾವೇರಿ ನೀರಾವರಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಎಚ್‌.ಎಲ್‌.ಪ್ರಸನ್ನ ಇತರರು ಉಪಸ್ಥಿತರಿದ್ದರು.

Follow Us:
Download App:
  • android
  • ios