ಆನೇಕಲ್ ತಾಲ್ಲೂಕಿನ ಅತ್ತಿಬೆಲೆಯಲ್ಲಿರುವ ಐತಿಹಾಸಿಕ ಗಡಿ ಗೋಪುರಕ್ಕೆ ಮತ್ತೊಮ್ಮೆ ಅಪರಿಚಿತ ವಾಹನ ಡಿಕ್ಕಿ ಹೊಡೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದ ಈ ಸ್ಮಾರಕಕ್ಕೆ ಹಾನಿಯುಂಟಾಗಿರುವುದು ಸ್ಥಳೀಯರಲ್ಲಿ ಬೇಸರ ಮೂಡಿಸಿದೆ. ಈ ಹಿಂದೆಯೂ ಇದೇ ರೀತಿಯ ಘಟನೆ ನಡೆದಿತ್ತು.

ಅದು ಕನ್ನಡ ನೆಲದ ಗತವೈಭವ ಸಾರುವ ಸ್ಮಾರಕ,‌ ಕರ್ನಾಟಕಕ್ಕೆ ಬರುವ ಬೇರೆ ಭಾಷಿಕರಿಗೆ ಕನ್ನಡದ ಪರಿಚಯ ಮಾಡಿಕೊಡುವ ಮೈಲಿಗಲ್ಲಿನ ಗೋಪುರ,‌ ಅಂತಹ ಐತಿಹಾಸಿಕ ಗಡಿ ಗೋಪುರಕ್ಕೆ ಮತ್ತೊಮ್ಮೆ ಹಾನಿಯಾಗಿದೆ. ಕನ್ನಡದ ಗಡಿ ಗೋಪುರ- ನಾಲ್ವಡಿ ಕೃಷ್ಣರಾಜರ ಕಾಲದಲ್ಲಿ ಕಟ್ಟಲಾಗಿದ್ದ ಏಕೈಕ ಮೈಲಿಗಲಿಗೆ ಪದೇ ಪದೇ ಹಾನಿಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ.

ಆನೇಕಲ್ ತಾಲ್ಲೂಕಿನಲ್ಲಿ ಕರ್ನಾಟಕದ ಏಕೈಕ ಗಡಿಗೋಪುರ ಹಾನಿಗೊಳಗಾದ ಘಟನೆ ನಡೆದಿದೆ. ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಕಾಲದಲ್ಲಿ ನಿರ್ಮಾಣಗೊಂಡಿದ್ದ ಈ ಗಡಿಗೋಪುರವು, ಕರ್ನಾಟಕ ಮತ್ತು ತಮಿಳುನಾಡು ಗಡಿಯಲ್ಲಿ ಅತ್ತಿಬೆಲೆಯಲ್ಲಿದೆ. ಇತಿಹಾಸ ಪ್ರಸಿದ್ಧವಾದ ಅತ್ತಿಬೆಲೆ ಗಡಿಗೋಪುರಕ್ಕೆ ಗುರುವಾರ ರಾತ್ರಿ ಅಪರಿಚಿತ ವಾಹನ ಡಿಕ್ಕಿ ಹೊಡೆದು ಹಾನಿ ಉಂಟುಮಾಡಿದೆ.

ರಾತ್ರಿ ವೇಳೆ ಅತ್ತಿಬೆಲೆ ಗಡಿಗೋಪುರಕ್ಕೆ ಡಿಕ್ಕಿ ಹೊಡೆದ ವಾಹನ ಚಾಲಕ, ವಾಹನದೊಂದಿಗೆ ಸ್ಥಳದಿಂದ ಪರಾರಿಯಾಗಿದ್ದಾನೆ. ಘಟನೆ ಸಂಬಂಧ ಅತ್ತಿಬೆಲೆ ಪೊಲೀಸ್ ಠಾಣೆಯಲ್ಲಿ ಅಪರಿಚಿತ ವಾಹನದ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಈ ಹಿಂದೆ ಕೂಡ ಗಡಿಗೋಪುರಕ್ಕೆ ಲಾರಿ ಡಿಕ್ಕಿ ಹೊಡೆದು ಎಡಭಾಗದ ಭಾಗಕ್ಕೆ ಹಾನಿಯಾಗಿತ್ತು. ಅದನ್ನು ಸಂಬಂಧಪಟ್ಟ ಅಧಿಕಾರಿಗಳು ಸರಿಪಡಿಸಿದ್ದರು. ಆದರೆ ಇದೀಗ ಗೋಪುರದ ಬಲಭಾಗಕ್ಕೆ ಅಪರಿಚಿತ ವಾಹನ ಮತ್ತೊಮ್ಮೆ ಹಾನಿ ಉಂಟುಮಾಡಿರುವುದರಿಂದ ಸ್ಥಳೀಯರು ಮತ್ತು ಸಮಾಜ ಹಿತೈಷಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಸ್ಥಳಕ್ಕೆ ಅತ್ತಿಬೆಲೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಂಬಂಧಪಟ್ಟ ಅಧಿಕಾರಿಗಳು ತಕ್ಷಣವೇ ಗಡಿಗೋಪುರವನ್ನು ಪುನಃ ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.

ಈ ಗಡಿ ಗೋಪುರವು ಕರ್ನಾಟಕಕ್ಕೆ ಬರುವ ಇತರ ಭಾಷಿಕರಿಗೆ ಕನ್ನಡ ನೆಲದ ಪರಿಚಯ ಮಾಡಿಕೊಡುವ ಸ್ಮಾರಕವಾಗಿತ್ತು. 2022ರಲ್ಲಿ ಕರ್ನಾಟಕ ತಮಿಳುನಾಡು ಬಾರ್ಡರ್ ಅತ್ತಿಬೆಲೆಯಲ್ಲಿ (Attibele, Anekal) ಕಟ್ಟಲಾದ ಈ ಗಡಿ ಗೋಪುರಕ್ಕೆ ತಮಿಳುನಾಡು ಲಾರಿಯೊಂದು ಗುದ್ದಿದ ಪರಿಣಾಮ ಎಡಭಾಗದ ಗೋಡೆ ಸಂಪೂರ್ಣ ಕುಸಿದು ಇಡೀ ಸ್ಮಾರಕ ಜಖಂಗೊಂಡಿತ್ತು. ಬಳಿಕ ಅದನ್ನು ದುರಸ್ಥಿ ಮಾಡಲಾಗಿತ್ತು.