ರಾಜ್ಯದಲ್ಲಿ 8 ದಿನಗಳಿಂದ ನಡೆಯುತ್ತಿರುವ ಕಬ್ಬು ಬೆಳೆಗಾರರ ಹೋರಾಟದ ಬಗ್ಗೆ ಕೇಂದ್ರ ಸಚಿವ ವಿ. ಸೋಮಣ್ಣ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. ಹೋರಾಟದ ಸ್ಥಳಕ್ಕೆ ಭೇಟಿ ನೀಡದೆ ಪ್ರಧಾನಿಗೆ ಪತ್ರ ಬರೆದಿರುವುದು ಸಿಎಂ ಅವರ ಉದ್ಧಟತನ ಎಂದು ಸೋಮಣ್ಣ ವಾಗ್ದಾಳಿ ನಡೆಸಿದ್ದಾರೆ.

ದಾವಣಗೆರೆ (ನ.8): ರಾಜ್ಯದಲ್ಲಿ ಕಬ್ಬು ಬೆಳೆಗಾರರು 8 ದಿನಗಳಿಂದ ಹೋರಾಟ ನಡೆಸುತ್ತಿದ್ದು, ಹೋರಾಟ ಸ್ಥಳಕ್ಕೆ ಭೇಟಿ ನೀಡುವ ಬದಲು, ಪ್ರಧಾನಿಗೆ ಪತ್ರ ಬರೆದಿದ್ದೇನೆಂದು ಹಾರಿಕೆ ಉತ್ತರ ನೀಡಿದ್ದಾರೆ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅವರು ಸಿಎಂ ಸಿದ್ದರಾಮಯ್ಯ ವಿರುದ್ಧ ಹರಿಹಾಯ್ದಿದ್ದಾರೆ. 

ನಿಮ್ಮ ನಡೆವಳಿಕೆ ಸರಿ ಇದ್ದರೆ ಎಲ್ಲರೂ ಬರ್ತಾರೆ:

ನಗರದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎಂ ಸಿದ್ದರಾಮಯ್ಯ ಕಬ್ಬು ಬೆಳೆಗಾರರ ವಿಚಾರದಲ್ಲಿ ಜಾಣ ಕುರುಡುತನ ಪ್ರದರ್ಶನ ಮಾಡುವುದನ್ನೂ ನಿಲ್ಲಿಸಲಿ. ಬೇರೆ ಬೇರೆ ರಾಜ್ಯಗಳಲ್ಲಿ ಯಾವ ರೀತಿ ಇದೆ ಎಂಬುದನ್ನೂ ಸಿದ್ದರಾಮಯ್ಯ ನೋಡಬೇಕು. ಪ್ರಧಾನಿಗೆ ಪತ್ರ ಬರೆದಿದ್ದೇನೆ ಎಂದು ಹೇಳಿಕೆ ನೀಡಿರುವುದು ಸಿದ್ದರಾಮಯ್ಯನವರ ಉದ್ಧಟತನದ ಪರಮಾವಧಿಯಾಗಿದೆ. ಮಾತೆತಿದ್ದರೆ ಸಂಸದರು ಬರುವುದಿಲ್ಲ ಎನ್ನುತ್ತೀರಿ. ನಿಮ್ಮ ನಡವಳಿಕೆ ಸರಿ ಮಾಡಿಕೊಂಡರೆ ಎಲ್ಲರೂ ಬರುತ್ತೇವೆ ಎಂದು ವಾಗ್ದಾಳಿ ನಡೆಸಿದರು.

ನೀವು ಮಾಡುವ ಕೆಟ್ಟಕೆಲಸಕ್ಕೆ ಕೇಂದ್ರದ ಮೇಲೆ ಹಾಕೋದಲ್ಲ:

ಸಿದ್ದರಾಮಯ್ಯ ಅವರು ವಾಸ್ತವಾಂಶಗಳನ್ನು ತಿಳಿದುಕೊಂಡು ಮಾತನಾಡಬೇಕು. ಒಳ್ಳೆಯ ಕೆಲಸ ಏನೇ ಇದ್ದರೂ ಅದು ನಿಮ್ಮದು. ನೀವು ಮಾಡುವ ಕೆಟ್ಟ ಕೆಲಸೆಗಳನ್ನೆಲ್ಲಾ ಕೇಂದ್ರ ಸರ್ಕಾರದ ಮೇಲೆ ಹಾಕುತ್ತೀರಾ? ಶುಕ್ರವಾರದ ಸಭೆ ಮುಗಿಸಿ, ದೆಹಲಿದೆ ಬಂದು, ಸಾಧಕ-ಬಾಧಕಗಳ ಬಗ್ಗೆ ಚರ್ಚೆ ಮಾಡಿ ಎಂದು ಸಿದ್ದರಾಮಯ್ಯಗೆ ವಿ.ಸೋಮಣ್ಣ ಸಲಹೆ ನೀಡಿದರು.