ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟದ ಬಗ್ಗೆ ಸಭೆ ಕರೆದು ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರದವರೇನು ಕಡ್ಲೆಕಾಯಿ ತಿನ್ನುತ್ತಿದ್ದಾರಾ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದ್ದಾರೆ.

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್

ಕೊಡಗು (ನ.07): ಕಬ್ಬು ಬೆಳೆಗಾರರು ನಡೆಸುತ್ತಿರುವ ಹೋರಾಟದ ಬಗ್ಗೆ ಸಭೆ ಕರೆದು ಸಮಸ್ಯೆ ಬಗೆಹರಿಸುವುದನ್ನು ಬಿಟ್ಟು ಕೇಂದ್ರ ಸರ್ಕಾರದವರೇನು ಕಡ್ಲೆಕಾಯಿ ತಿನ್ನುತ್ತಿದ್ದಾರಾ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಪ್ರಶ್ನಿಸಿದ್ದಾರೆ. ಕೊಡಗಿನ ಪೊನ್ನಂಪೇಟೆ ತಾಲ್ಲೂಕು ಪ್ರಜಾಸೌಧದ ಶಂಕುಸ್ಥಾಪನೆಗೆ ಆಗಮಿಸಿದ್ದ ವೇಳೆ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಕಬ್ಬು ಬೆಳೆಗಾರರ ಹೋರಾಟದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಅವರು ಭಾಗವಹಿಸಿದ್ದ ವಿಚಾರಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದರು.

ಕೇಂದ್ರ ಸರ್ಕಾರಕ್ಕೇನು ರೈತರ ಮೇಲೆ ಜವಾಬ್ದಾರಿ ಇಲ್ಲವೇ.? ಕೇಂದ್ರ ಕೃಷಿ ಸಚಿವರು ಇದರ ಬಗ್ಗೆ ಸಭೆ ಮಾಡಿದ್ದಾರೆಯೇ. ಪ್ರಧಾನಿಯವರು ದೇಶದ ಯಾವುದ್ಯಾವುದೋ ವಿಚಾರವನ್ನು ಟ್ವೀಟ್ ಮಾಡುತ್ತಾರೆ. ಇದರ ಬಗ್ಗೆ ಅವರ ಹೇಳಿಕೆ ಏನು ಎಂದು ಪ್ರಶ್ನಿಸಿದರು. ಎಫ್ಆರ್ ಪಿ ಯನ್ನು ನಿಗಧಿ ಮಾಡುವಂತಹದ್ದು ಕೇಂದ್ರ ಸರ್ಕಾರ, ಸಕ್ಕರೆ ಆಮದು, ರಫ್ತು ನಿಯಮ ಮಾಡುವಂತಹದ್ದು ಕೇಂದ್ರ ಸರ್ಕಾರ. ಆ ನಿಯಮವನ್ನು ಕರ್ನಾಟಕ ಸರ್ಕಾರ ಮಾಡಲ್ಲ. ರಫ್ತು, ಆಮದು ನೀತಿಯಿಂದ ಕಬ್ಬಿನ ದರದ ಮೇಲೆ, ರೈತರ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಹಾಗೂ ಎಥೈನಾಲ್ ಅನ್ನು ಎಷ್ಟು ಬಳಕೆ ಮಾಡಬೇಕು ಎಂದು ತಿರ್ಮಾನ ಮಾಡುವುದು ಕೇಂದ್ರ ಸರ್ಕಾರವೇ.

ಇದು ಕೂಡ ಸಕ್ಕರೆ ಮತ್ತು ಕಬ್ಬಿನ ದರದ ಮೇಲೆ ನೇರ ಪರಿಣಾಮ ಬೀರುತ್ತದೆ. ಎಲ್ಲಾ ತೀರ್ಮಾನಗಳು ಕೇಂದ್ರದ ಕೈಯಲ್ಲಿ ಇವೆ. ಅಧಿಕಾರ ಅವರ ಕೈಯಲ್ಲಿ, ಜವಾಬ್ದಾರಿ ಮಾತ್ರ ಬೇರೆಯವರ ಮೇಲೆ ಅಂದರೆ ಹೇಗೆ ಸಾಧ್ಯ. ಅಧಿಕಾರ ಯಾರ ಕೈಯಲ್ಲಿ ಇದೆಯೋ ಅವರು ಜವಾಬ್ದಾರಿ ತೆಗೆದುಕೊಂಡು ಸಮಸ್ಯೆ ಬಗೆಹರಿಸಬೇಕು. ನಾವು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆ ಕರೆದಿದ್ದೇವೆ. ಸಮಸ್ಯೆ ಬಗೆಹರಿಸಲು ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಕೇಂದ್ರ ಸರ್ಕಾರ ಏನು ಮಾಡಿದೆ ಎಂದರು. ಅವರು ಏನು ಪ್ರಯತ್ನ ಮಾಡಿದ್ದಾರೆ ತೋರಿಸಲಿ ಎಂದು ಆಗ್ರಹಿಸಿದರು. ಬಿಜೆಪಿಯ ಇಲ್ಲಿನ ನಾಯಕರು ರೈತರ ಪ್ರತಿಭಟನಾ ಸ್ಥಳಕ್ಕೆ ಹೋಗಿ ರೈತರೊಂದಿಗೆ ಮಲಗುವುದನ್ನು ಬಿಡಲಿ.

ಅದರ ಬದಲಾಗಿ ದೆಹಲಿಗೆ ಹೋಗಿ ಸಮಸ್ಯೆ ಬಗೆಹರಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿ. ನಾಟಕ ಮಾಡುವುದರಿಂದ ರೈತರಿಗೆ ಅನುಕೂಲ ಆಗಲ್ಲ. ನಿಮ್ಮ ರಾಜಕೀಯ ಬೇಳೆ ಬೇಯಬಹುದು ಅಷ್ಟೇ. ಆದರೆ ರೈತರಿಗೆ ಸಹಾಯ ಆಗಲ್ಲ ಎಂದರು. ಎಲ್ಲಾ ಅಧಿಕಾರ ಕೇಂದ್ರದ ಕೈಯಲ್ಲಿ ಇದೆ. ಹೋಗಿ ಅಲ್ಲಿ ಕುಳಿತು ಪರಿಹರಿಸಿ ರೈತರಿಗೆ ಅನುಕೂಲ ಮಾಡಲಿ, ನಂತರ ಮಾತನಾಡಿದರೆ ನಾವು ಕೂಡ ಉತ್ತರ ಕೊಡುತ್ತೇವೆ ಎಂದರು. ರೈತರ ಬೇಡಿಕೆಯನ್ನು ಈಡೇರಿಸಬೇಕೆಂದು ಸಿಎಂ ಅವರೇ ಸಭೆ ಮಾಡುತ್ತಿದ್ದಾರೆ. ಸಕ್ಕರೆ ಕಾರ್ಖಾನೆಗಳ ಮಾಲೀಕರೊಂದಿಗೆ ನಡೆಸುತ್ತಿರುವ ಸಭೆ ಫಲಪ್ರದವಾಗಬಹುದು ಎಂದು ಕಂದಾಯ ಸಚಿವ ಕೃಷ್ಣಬೈರೇಗೌಡ ಹೇಳಿದರು. ಮಾನ್ಯ ಪ್ರಧಾನ ಪ್ರಧಾನಗಳಿಗೂ ಕೂಡ ಸಿಎಂ ಪತ್ರ ಬರೆದಿದ್ದಾರೆ. ರೈತರ ವಿಷಯ ಮಾತನಾಡಬೇಕು ಎಂದು ಸಮಯ ಕೊಡಿ ಎಂದು ಪತ್ರ ಬರೆದಿದ್ದಾರೆ.

ರೈತರ ಆದಾಯದ ಮೇಲೆ ಪ್ರಭಾವ

ಎಫ್ಆರ್ಪಿ ನಿಗಧಿ ಮಾಡುವುದು ಕೇಂದ್ರ ಸರ್ಕಾರ. ಸಕ್ಕರೆ ಆಮದು, ರಫ್ತು ನೀತಿ ಮಾಡುವುದು ಕೇಂದ್ರ ಸರ್ಕಾರ. ಸಕ್ಕರೆ ರಫ್ತು ಮಾಡಿದರೆ ರೇಟ್ ಜಾಸ್ತಿ ಆಗುತ್ತದೆ. ಇದರಿಂದ ಸಕ್ಕರೆ ಕಾರ್ಖಾನೆ ಮಾಲೀಕರು ರೈತರಿಗೆ ಹೆಚ್ಚಿನ ರೇಟ್ ಕೊಡುತ್ತಾರೆ. ಸಕ್ಕರೆಯನ್ನು ಆಮದು ಮಾಡಿಕೊಂಡರೆ ಸಕ್ಕರೆ ರೇಟ್ ಕಡಿಮೆ ಆಗುತ್ತದೆ. ಆಗ ರೈತರ ಕಬ್ಬಿಗೆ ಸಿಗುವ ರೇಟ್ ಕೂಡ ಕಡಿಮೆ ಆಗುತ್ತದೆ. ಸಕ್ಕರೆ ಆಮದು ರಫ್ತು ನೀತಿಯಿಂದ ರೈತರ ಮೇಲೆ ಪರಿಣಾಮ ಬೀರುತ್ತದೆ. ಅವರ ತೀರ್ಮಾನ ರೈತರ ಆದಾಯದ ಮೇಲೆ ಪ್ರಭಾವ ಬೀರುತ್ತದೆ. ಸರ್ಕಾರ ಎಫ್ ಆರ್ ಪಿಯನ್ನು ಹೆಚ್ಚಿಸಿದರೆ ನಾವು ಕೂಡ ಹೆಚ್ಚಿನ ಬೆಲೆ ಕೊಡಿ ಅಂತ ಕೇಳಬಹುದು. ಕೇಂದ್ರವೇ ಎಫ್ ಆರ್ ಪಿ ನಿಗದಿ ಮಾಡಿ ಕಬ್ಬಿನ ರೇಟನ್ನು ನೀವೇ ಜಾಸ್ತಿ ಮಾಡಿ ಅಂತ ಕೇಳಿದರೆ ಅದು ಕಷ್ಟ ಸಾಧ್ಯ. ಈ ಎಲ್ಲಾ ವಿಷಯಗಳನ್ನು ಪ್ರಧಾನಿಯವರಿಗೆ ರೈತರ ಪರವಾಗಿ ಮನವರಿಕೆ ಮಾಡಲು ಪ್ರಯತ್ನಿಸುತ್ತಿದ್ದೇವೆ ಎಂದರು.