Asianet Suvarna News Asianet Suvarna News

ಎಲ್ಲಾ ಟ್ರಸ್ಟ್‌, ಪ್ರತಿಷ್ಠಾನಗಳ ನೇಮಕಾತಿ ರದ್ದುಗೊಳಿಸಿದ ರಾಜ್ಯ ಸರ್ಕಾರ

ಎಲ್ಲಾ 21 ಟ್ರಸ್ಟ್‌ ಮತ್ತು ಪ್ರತಿಷ್ಠಾನಗಳ ನೇಮಕಾತಿಯನ್ನು ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ. ನರೇಂದ್ರ ರೈ ದೇರ್ಲ ಮತ್ತು ಚಕ್ರವರ್ತಿ ಸುಲಿಬೆಲೆ ಅವರಿಗೆ ನೀಡಲಾಗಿದ್ದ ಹುದ್ದೆಯನ್ನು ತಿರಸ್ಕರಿಸಿದ್ದರು.  ವಿವಾದಗಳು ಆರಂಭವಾದ ಬೆನ್ನಲ್ಲೇ ನೇಮಕಾತಿಯನ್ನು ಸರ್ಕಾರ ರದ್ದುಗೊಳಿಸಿದೆ.

karnataka state govt u turn on trust nomination revokes order
Author
First Published Aug 25, 2022, 12:15 PM IST

ಬೆಂಗಳೂರು: ಟ್ರಸ್ಟ್, ಪ್ರತಿಷ್ಠಾನಗಳಿಗೆ ಹೊಸ ಅಧ್ಯಕ್ಷರು ಹಾಗೂ ಸದಸ್ಯರನ್ನ ರಾಜ್ಯ ಸರ್ಕಾರ ಬುಧವಾರ ನೇಮಿಸಿತ್ತು. ಈ ಪೈಕಿ ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ಅಧ್ಯಕ್ಷರನ್ನಾಗಿ ನೇಮಕ ಮಾಡಿರುವ ನರೇಂದ್ರ ರೈ ದೇರ್ಲ ಅವರು ಅಧ್ಯಕ್ಷ ಸ್ಥಾನವನ್ನು ತಿರಸ್ಕರಿಸಿದ್ದಾರೆ. ಈ ಸಂಬಂಧ ರಾಜ್ಯ ಸರ್ಕಾರದ ಸಂಸ್ಕೃತಿ ಇಲಾಖೆಗೆ ಅವರು ಕೋರಿಕೆ ಸಲ್ಲಿಸಿದ್ದು, ನನ್ನನ್ನು ಅಧ್ಯಕ್ಷ ಸ್ಥಾನಕ್ಕೆ ಪರಿಗಣಿಸದಂತೆ ಮನವಿ ಮಾಡಿಕೊಂಡಿದ್ದಾರೆ. ಇದೇ ರೀತಿ, ಶ್ರೀಗಳನಾಥ್ ಮತ್ತು ನಾ ಶ್ರೀ ರಾಜಪುರೋಹಿತ ಪ್ರತಿಷ್ಠಾನಕ್ಕೆ ಚಕ್ರವರ್ತಿ ಸೂಲಿಬೆಲೆ ಅವರನ್ನು ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿತ್ತು. ಆದ್ರೆ, ಇದನ್ನು ಚಕ್ರವರ್ತಿ ಸೂಲಿಬೆಲೆ ಅವರು ತಿಸ್ಕರಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವರು ಬರೆದುಕೊಂಡಿದ್ದಾರೆ. ಈ ಎಲ್ಲಾ ವಿವಾದಗಳ ಬೆನ್ನಲ್ಲೇ ಇಡೀ ನೇಮಕಾತಿಯನ್ನು ರಾಜ್ಯ ಸರ್ಕಾರ ರದ್ದುಗೊಳಿಸಿ ಗುರುವಾರ ಆದೇಶಿಸಿದೆ.

ನರೇಂದ್ರ ರೈ ದೇರ್ಲ ಅವರು ಸರ್ಕಾರಕ್ಕೆ ಬರೆದಿರುವ ಪತ್ರ ಹೀಗಿದೆ ನೋಡಿ. ಕರ್ನಾಟಕ ಸರಕಾರದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ 'ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನ'ದ ಅಧ್ಯಕ್ಷನನ್ನಾಗಿ ನನ್ನನ್ನು ನೇಮಕ ಮಾಡಿದ ಸುದ್ದಿ ಮಾಧ್ಯಮಗಳ ಮೂಲಕ ನನಗೆ ತಿಳಿಯಿತು. ತೇಜಸ್ವಿ ಅವರ ಒಡನಾಟ ಮತ್ತು ಅವರ ಕುರಿತು ಒಂದಷ್ಟು ಬರವಣಿಗೆ ಅವರ ಪತ್ರಗಳ ಸಂಪಾದನೆಯನ್ನು ನಾನು ಮಾಡಿರುವುದು ನಿಜ. ಈ ಕಾರಣಕ್ಕಾಗಿಯೇ ಸರಕಾರ ನನ್ನನ್ನು ಆಯ್ಕೆ ಮಾಡಿದೆ ಎಂದು ಅನೇಕ ಸ್ನೇಹಿತರು, ಬಂಧುಗಳು, ತೇಜಸ್ವಿ ಓದುಗರು ಅಭಿನಂದಿಸಿ ನನಗೆ ಸಂದೇಶ ಕಳಿಸಿದ್ದಾರೆ. ಈ ಕುರಿತು ಘನ ಸರಕಾರಕ್ಕೂ ನನ್ನ ಧನ್ಯವಾದಗಳು.

ಇದನ್ನೂ ಓದಿ: ಟ್ರಸ್ಟ್,ಪ್ರತಿಷ್ಠಾನಗಳಿಗೆ ಅಧ್ಯಕ್ಷ- ಸದಸ್ಯರ ನೇಮಕ: ಮೃತಪಟ್ಟವರನ್ನ ನೇಮಸಿ ಎಡವಟ್ಟು ಮಾಡಿಕೊಂಡ ಸರ್ಕಾರ

ಆದರೆ ವೈಯಕ್ತಿಕ ಕಾರಣಗಳಿಂದಾಗಿ ಸಂಬಂಧಿಸಿದ ಜವಾಬ್ದಾರಿಯನ್ನು ನಾನು ಸ್ವೀಕರಿಸುವುದಿಲ್ಲ .ಈ ಕುರಿತು ಸಂಬಂಧಿಸಿದ ಯಾವುದೇ ಇಲಾಖೆಯ ವ್ಯಕ್ತಿಗಳು, ಅಧಿಕಾರಿಗಳು ನನ್ನನ್ನು ಈವರೆಗೆ ಸಂಪರ್ಕಿಸಿಯೂ ಇಲ್ಲ .ಅಂತಹ ಪತ್ರ- ಆದೇಶ ನನಗೆ ಬಂದಿಲ್ಲ. ಒಂದು ವೇಳೆ ಅದು ಬಂದಾಗಲೂ ನನ್ನ ಈ ಅಭಿಪ್ರಾಯ ಬದಲಾಗುವುದಿಲ್ಲ. ದಯವಿಟ್ಟು ಯಾರೂ ಕೂಡಾ ಇದನ್ನು ನನ್ನ ಅಹಂ, ಉದ್ದಟತನವೆಂದು ಭಾವಿಸಬಾರದು .ಇಂಥ ಸರಳ ಸೌಜನ್ಯ- ನಿರಾಕರಣೆಗೆ ನನಗೆ ತೇಜಸ್ವಿ ಅವರೇ ಸ್ಪೂರ್ತಿ.  

ಸರಕಾರ ಮುಂದೆ ಯಾರನ್ನೇ ಬೇಕಾದರೂ ಆಯ್ಕೆ ಮಾಡಲಿ, ತೇಜಸ್ವಿಯ ವಿಚಾರದಲ್ಲಿ ಅವರಿಗೆ ನನ್ನ ಸಹಾಯ ಇದ್ದೇ ಇದೆ. ಆದರೆ ಇಂಥ ಪ್ರತಿಷ್ಠಾನ ಪ್ರಾಧಿಕಾರ ಅಕಾಡೆಮಿಗಳಿಗೆ ನೇಮಕ ಮಾಡುವಾಗ ಸೌಜನ್ಯಕ್ಕಾದರೂ ಅವರನ್ನು ಸಂಪರ್ಕಿಸಿ ಪೂರ್ವಾನುಮತಿ ಪಡೆಯುವುದು ಹೆಚ್ಚು ಸೂಕ್ತ. ಆಗ ಇಂತಹ ಅನಪೇಕ್ಷಿತ ಮುಜುಗರವೂ ತಪ್ಪುತ್ತದೆ .ದಯವಿಟ್ಟು ಸಂಸ್ಕೃತಿ ಇಲಾಖೆ ಇದನ್ನು ಗಮನಿಸಬೇಕೆಂದು ವಿನಮ್ರ ಕೋರಿಕೆ ಎಂದು ನರೇಂದ್ರ ರೈ ದೇರ್ಲ ಅವರು ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. 

 ಕೆ.ಪಿ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ 9 ಮಂದಿಯನ್ನ ನೇಮಿಸಲಾಗಿದೆ. ಈ‌‌ ಪ್ರತಿಷ್ಠಾನದಲ್ಲಿ ಮೃತಪಟ್ಟಿರುವ ರಾಜೇಶ್ವರಿ ‌ಪೂರ್ಣಚಂದ್ರ ತೇಜಸ್ವಿ ಅವರನ್ನೂ ಸದಸ್ಯರನ್ನ ಸೇರಿಸಲಾಗಿದೆ. ರಾಜೇಶ್ವರಿ ಅವರು ಪೂರ್ಣಚಂದ್ರ ತೇಜಸ್ವಿ ಅವರ ಪತ್ನಿಯಾಗಿದ್ದು, ಅವರು ಮೃತಪಟ್ಟು 8 ತಿಂಗಳಾಗಿದೆ. ಆದರೂ ಪೂರ್ಣಚಂದ್ರ ತೇಜಸ್ವಿ ಪ್ರತಿಷ್ಠಾನಕ್ಕೆ ರಾಜೇಶ್ವರಿ ಅವರನ್ನ ಸದಸ್ಯರನ್ನಾಗಿ ನೇಮಿಸಿರುವ ಮೂಲಕ ಸರ್ಕಾರ ಎಡವಟ್ಟು ಮಾಡಿಕೊಂಡಿದೆ.

ಅಧ್ಯಕ್ಷ ಸ್ಥಾನ ತಿರಸ್ಕರಿಸಿದ್ದ ಸೂಲಿಬೆಲೆ
ಗಳಗನಾಥರ ಕುರಿತಂತೆ ಅಪಾರ ಗೌರವ ಹೊಂದಿರುವ ನನಗೆ, ನನ್ನನ್ನು ಗಳಗನಾಥ ಮತ್ತು ರಾಜ ಪುರೋಹಿತ ಪ್ರತಿಷ್ಠಾನಕ್ಕೆ ಅಧ್ಯಕ್ಷನನ್ನಾಗಿ ಆಯ್ಕೆ ಮಾಡಿದ್ದು ಅಚ್ಚರಿಯೂ ಮತ್ತು ಸಂತಸವೂ ಆಯ್ತು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಇದಕ್ಕೆ ಸಮಯ ಕೊಡುವಷ್ಟು ಪುರಸೊತ್ತಿಲ್ಲದಿರುವುದರಿಂದ ಅತ್ಯಂತ ವಿನೀತನಾಗಿಯೇ ಈ ಗೌರವವನ್ನು ಮರಳಿಸಬೇಕಾಗಿ ಬಂದಿದೆ. ಗಳಗನಾಥರ ಕುರಿತಂತೆ ನನ್ನಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಪ್ರೀತ್ಯಾದರಗಳನ್ನು ಹೊಂದಿರುವ ಕೆಲವು ವ್ಯಕ್ತಿಗಳು ನನ್ನ ದೃಷ್ಟಿಯಲ್ಲಿದ್ದಾರೆ. ಸಂಬಂಧಪಟ್ಟವರಿಗೆ ಅದನ್ನು ತಿಳಿಸುವೆ. ಸೂಕ್ತವೆನಿಸಿದರೆ ಅವರನ್ನು ಆಯ್ಕೆ ಮಾಡಬಹುದು.

ಇದನ್ನೂ ಓದಿ: ತೇಜಸ್ವಿ ಪ್ರತಿಷ್ಠಾನ ಅಧ್ಯಕ್ಷ ಸ್ಥಾನ ನಿರಾಕರಿಸಿದ ನರೇಂದ್ರ ರೈ ದೇರ್ಲ 

ಗಳಗನಾಥರ ಕನ್ನಡ ಸೇವೆಗೆ ನಾವೆಷ್ಟು ಋಣಿಯಾದರೂ ಕಡಿಮೆಯೇ. ಅವರ ಕೆಲಸ ಮಾಡುವ ಈ ಅವಕಾಶ ಸ್ವೀಕರಿಸಲಾಗದಿರುವುದಕ್ಕೆ ಖಂಡಿತವಾಗಿಯೂ ಖೇದವಿದೆ. ನನ್ನನ್ನು ಸೂಕ್ತವೆಂದು ಆಯ್ಕೆ ಮಾಡಿದವರಿಗೆ ಧನ್ಯವಾದಗಳು ಎಂದು ಚಕ್ರವರ್ತಿ ಸೂಲಿಬೆಲೆ ಪ್ರತಿಕ್ರಿಯೆ ನೀಡಿದ್ದರು. ಇದೀಗ ಎಲ್ಲಾ 21 ಟ್ರಸ್ಟ್‌ ಮತ್ತು ಪ್ರತಿಷ್ಠಾನಗಳ ನೇಮಕಾತಿಯನ್ನೂ ರದ್ದುಗೊಳಿಸಿ ಸರ್ಕಾರ ಆದೇಶಿಸಿದೆ.

Follow Us:
Download App:
  • android
  • ios