ಏಪ್ರಿಲ್‌ ಅಂತ್ಯದ ವೇಳೆಗೆ ವೀಕೆಂಡ್‌ ಲಾಕ್‌ ಸಂಭವ| ಮತ್ತೆ ಲಾಕ್ಡೌನ್‌ ಭೀತಿ| ಸೋಂಕು ಹೆಚ್ಚಾಗುತ್ತಿದೆ, ಲಾಕ್‌ಡೌನ್‌ ಹೇರಿಕೆ ಬಗ್ಗೆ ಪರಿಶೀಲಿಸಿ: ಸರ್ಕಾರಕ್ಕೆ ತಜ್ಞರ ಸಲಹೆ| ಲಾಕ್‌ಡೌನ್‌ನಿಂದ ಆರ್ಥಿಕತೆಗೆ ಹೊಡೆತ, ಬೇರೆ ಸಲಹೆ ಕೊಡಿ: ಸಚಿವ ಡಾ| ಕೆ.ಸುಧಾಕರ್‌

ಬೆಂಗಳೂರು(ಏ.12): ರಾಜ್ಯದಲ್ಲಿ ಕೊರೋನಾ ಸೋಂಕಿನ ಅಬ್ಬರ ಇನ್ನಷ್ಟುಹೆಚ್ಚಾಗುತ್ತಾ ಮುಂದುವರೆದರೆ ಏಪ್ರಿಲ್‌ ಅಂತ್ಯದಿಂದ ವಾರಾಂತ್ಯದ ಲಾಕ್‌ಡೌನ್‌ ಜಾರಿ, ಬಳಿಕವೂ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಮೇ ತಿಂಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ ಜಾರಿ ಮಾಡುವ ಭೀತಿ ಎದುರಾಗಿದೆ.

ರಾಜ್ಯದಲ್ಲಿ ದಿನದಿಂದ ದಿನಕ್ಕೆ ಸೋಂಕು ಪ್ರಕರಣ ಹಾಗೂ ಸಾವಿನ ಪ್ರಮಾಣ ಹೆಚ್ಚುತ್ತಿದ್ದು, ಭಾನುವಾರ ರಾಜ್ಯದಲ್ಲಿ ಕೊರೋನಾ ಸೋಂಕು ಪ್ರಕರಣ 10 ಸಾವಿರ ಗಡಿ ದಾಟಿದೆ. ಚಿಕಿತ್ಸೆ ನೀಡಲು ಬೆಡ್‌, ಐಸಿಯು ಕೊರತೆ ಉಂಟಾಗುತ್ತಿದೆ. ಆದರೂ, ರಾಜ್ಯಾದ್ಯಂತ ಜನರು ಕೊರೋನಾ ನಿಯಂತ್ರಣ ಮಾರ್ಗಸೂಚಿ ಪಾಲಿಸದೆ ನಿರ್ಲಕ್ಷ್ಯ ವಹಿಸುತ್ತಿದ್ದಾರೆ. ಇದೇ ರೀತಿ ಪ್ರಕರಣಗಳು ಹೆಚ್ಚಾದರೆ ಮೇ ಮೊದಲ ವಾರದ ವೇಳೆಗೆ ನಿತ್ಯ 25 ಸಾವಿರ ಪ್ರಕರಣಗಳು ವರದಿಯಾಗಬಹುದೆಂದು ತಜ್ಞರು ಲೆಕ್ಕಾಚಾರ ಹಾಕಿದ್ದಾರೆ. ಹೀಗಾಗಿ ಅನಿವಾರ್ಯವಾಗಿ ಸರ್ಕಾರ ಲಾಕ್‌ಡೌನ್‌ಗೆ ಮುಂದಾಗಬಹುದು ಎಂದು ಆತಂಕ ಆವರಿಸಿದೆ.

ವಿಧಾನಸೌಧದಲ್ಲಿ ಭಾನುವಾರ ನಡೆದ ಕೊರೋನಾ ತಾಂತ್ರಿಕ ಸಲಹಾ ಸಮಿತಿ ಸಭೆÜಯಲ್ಲೂ ಲಾಕ್‌ಡೌನ್‌ ಪ್ರಸ್ತಾಪವಾಗಿದ್ದು, ಆದಷ್ಟೂವಾಣಿಜ್ಯ ಚಟುವಟಿಕೆ ಹಾಗೂ ಜನರ ಜೀವನಾಧಾರಕ್ಕೆ ಅಡ್ಡಿಯಾಗದಂತೆ ಜನದಟ್ಟಣೆ ಉಂಟು ಮಾಡುವ ಕಾರ್ಯಕ್ರಮಗಳನ್ನು ಕಟ್ಟುನಿಟ್ಟಾಗಿ ನಿಷೇಧಿಸುವ ಬಗ್ಗೆ ನಿರ್ಧರಿಸಲಾಗಿದೆ. ಪರಿಸ್ಥಿತಿ ಕೈ ಮೀರಿದರೆ ಅನಿವಾರ್ಯವಾಗಿ ಲಾಕ್‌ಡೌನ್‌ ಮಾಡಬೇಕಾಗುತ್ತದೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ ಎಂದು ಮೂಲಗಳು ತಿಳಿಸಿವೆ.

ಸಭೆಯಲ್ಲಿ ತಜ್ಞರು ಮತ್ತೆ ಲಾಕ್‌ಡೌನ್‌ ಮಾಡಬೇಕಾಗಿ ಬರುವ ಅನಿವಾರ್ಯತೆಯ ಬಗ್ಗೆ ಪ್ರಸ್ತಾಪಿಸಿದರು. ಆಗ ಆರೋಗ್ಯ ಸಚಿವ ಡಾ

ಸುಧಾಕರ್‌ ಅವರು, ಲಾಕ್‌ಡೌನ್‌ನಿಂದ ಆರ್ಥಿಕತೆಗೆ ಹೊಡೆತ ಬೀಳುತ್ತದೆ. ಹೀಗಾಗಿ ಆರ್ಥಿಕತೆಗೆ ಸಮಸ್ಯೆಯಾಗದ ರೀತಿಯ ಸಲಹೆ ನೀಡಿ ಎಂದು ಕೋರಿದರು ಎಂದು ಹೇಳಲಾಗಿದೆ.

ಈಗಾಗಲೇ ಮಹಾರಾಷ್ಟ್ರದಲ್ಲಿ ವಾರಾಂತ್ಯದ ಲಾಕ್‌ಡೌನ್‌ ಘೋಷಿಸಲಾಗಿದೆ. ಇದೇ ಮಾದರಿಯಲ್ಲಿ ರಾಜ್ಯದಲ್ಲೂ ಏಪ್ರಿಲ್‌ ಕೊನೆಯ ವಾರದ ವೇಳೆಗೆ ಶುಕ್ರವಾರ ರಾತ್ರಿ 10 ಗಂಟೆಯಿಂದ ಸೋಮವಾರ ಬೆಳಗ್ಗೆ 5 ಗಂಟೆವರೆಗೆ ವಾರಾಂತ್ಯದ ಲಾಕ್‌ಡೌನ್‌ ಘೋಷಣೆಯಾಗಬಹುದು. ಬಳಿಕವೂ ಸೋಂಕು ನಿಯಂತ್ರಣಕ್ಕೆ ಬಾರದಿದ್ದರೆ ಮೇ ತಿಂಗಳಲ್ಲಿ ಸಂಪೂರ್ಣ ಲಾಕ್‌ಡೌನ್‌ ಆಗಬಹುದು ಎಂಬ ಚರ್ಚೆಗಳು ಶುರುವಾಗಿವೆ.

ಸಮಿತಿಯಿಂದ ಹಲವು ಸಲಹೆ:

ಆರೋಗ್ಯ ಸಚಿವ ಡಾ.ಕೆ. ಸುಧಾಕರ್‌ ನೇತೃತ್ವದಲ್ಲಿ ಭಾನುವಾರ ನಡೆದ ತುರ್ತು ಸಭೆಯಲ್ಲಿ ಡಾ.ಎಂ.ಕೆ. ಸುದರ್ಶನ್‌ ಅಧ್ಯಕ್ಷತೆಯ ಕೊರೋನಾ ತಾಂತ್ರಿಕ ಸಲಹಾ ಸಮಿತಿಯು ಕೊರೋನಾ ನಿಯಂತ್ರಣಕ್ಕೆ ಕೆಲವು ಸಲಹೆಗಳನ್ನು ನೀಡಿದೆ.

ಯಾವುದೇ ವಾಣಿಜ್ಯ ಚಟುವಟಿಕೆಗೆ ತೊಂದರೆ ಆಗದಂತೆ ಜನದಟ್ಟಣೆ ಉಂಟಾಗುವ ಸ್ಥಳಗಳಲ್ಲಿ ಮಾತ್ರ 144 ಸೆಕ್ಷನ್‌ ಅನ್ನು ಪರಿಣಾಮಕಾರಿಯಾಗಿ ಜಾರಿ ಮಾಡಬೇಕು. ಜಾತ್ರೆ, ಮದುವೆ, ಉತ್ಸವಗಳಲ್ಲಿ ಜನರು ಸೇರದಂತೆ ನಿರ್ಬಂಧಿಸಬೇಕು. ಐಸ್‌ಕ್ರೀಂ ಪಾರ್ಲರ್‌, ಚಾಟ್‌ ಸೆಂಟರ್‌, ದರ್ಶಿನಿ ಹೋಟೆಲ್‌ಗಳ ಮುಂದೆ ಜನರು ಸರದಿ ಸಾಲಲ್ಲಿ ನಿಲ್ಲುವುದನ್ನು ಕಡ್ಡಾಯವಾಗಿ ನಿಯಂತ್ರಿಸಬೇಕು ಎಂಬ ಸಲಹೆ ವ್ಯಕ್ತವಾಗಿದೆ.

ಲಾಕ್‌ಡೌನ್‌ ಬಗ್ಗೆ ಪ್ರಸ್ತಾಪವಾದ ವೇಳೆ, ಮೊದಲ ಅಲೆಯ ವೇಳೆ ಅಗತ್ಯವಿರುವ ವೈದ್ಯಕೀಯ ವ್ಯವಸ್ಥೆಗಳನ್ನು ಮಾಡಿಕೊಳ್ಳಲು ಸಮಯಾವಕಾಶ ಬೇಕಾಗಿತ್ತು. ಏಕಾಏಕಿ ಸೋಂಕು ಹೆಚ್ಚಾದರೆ ಬೆಡ್‌ ಸಮಸ್ಯೆಯಾಗಿ ಚಿಕಿತ್ಸೆ ದೊರೆಯುವುದಿಲ್ಲ ಎಂಬ ಭಯವಿತ್ತು. ಈಗ ಅಂತಹ ಪರಿಸ್ಥಿತಿ ಇಲ್ಲ. ತುರ್ತಾಗಿ ಅಗತ್ಯ ಚಿಕಿತ್ಸಾ ಸಿದ್ಧತೆಗಳನ್ನು ಮಾಡಿಕೊಂಡರೆ ಸಾಕು. ಆದರೆ ಮೊದಲ ಅಲೆ ವೇಳೆ ದಿನವೊಂದರಲ್ಲಿ ವರದಿಯಾಗಿದ್ದ ಪ್ರಕರಣಗಳಿಗಿಂತ ಶೇ.50 ರಷ್ಟುಹೆಚ್ಚು ಸೋಂಕು ಈ ಬಾರಿ ವರದಿಯಾಗುವ ಸಾಧ್ಯತೆ ಇದೆ. ಒಂದೇ ದಿನ 25 ಸಾವಿರದಷ್ಟುಪ್ರಕರಣ ವರದಿಯಾದರೆ, ಆ್ಯಂಬುಲೆನ್ಸ್‌ ಹಾಗೂ ವೆಂಟಿಲೇಟರ್‌ಗಳ ಕೊರತೆ ಉಂಟಾಗುತ್ತದೆ. ಆ ರೀತಿ ಏಕಾಏಕಿ ಸೋಂಕು ಹೆಚ್ಚಾಗಬಾರದು ಎಂದಾದರೆ ಲಾಕ್‌ಡೌನ್‌ ಅನಿವಾರ್ಯವಾಗಲಿದೆ. ಈ ಬಗ್ಗೆ ಕೂಲಂಕಷವಾಗಿ ಪರಿಶೀಲಿಸಿ ಕ್ರಮ ಕೈಗೊಳ್ಳಬೇಕು ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯರೊಬ್ಬರು ಸಲಹೆ ನೀಡಿದರು ಎಂದು ತಿಳಿದು ಬಂದಿದೆ.