ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯ ದತ್ತಾಂಶವನ್ನು ಒಳಮೀಸಲಾತಿಯ ಹೊರತಾಗಿ ಇತರ ಯೋಜನೆಗಳಿಗೆ ಬಳಸುವುದಿಲ್ಲ ಎಂದು ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ತಿಳಿಸಿದ್ದಾರೆ. ಬಿಬಿಎಂಪಿ ವ್ಯಾಪ್ತಿಯಲ್ಲಿ ಸಮೀಕ್ಷಾ ಕಾರ್ಯ ಯಶಸ್ವಿಯಾಗಲು ಹೆಚ್ಚಿನ ಪ್ರಚಾರದ ಅಗತ್ಯವಿದೆ ಎಂದು ಅವರು ಹೇಳಿದರು.

ಬೆಂಗಳೂರು (ಮೇ 30): ಪರಿಶಿಷ್ಟ ಜಾತಿಯ ಸಮಗ್ರ ಸಮೀಕ್ಷೆಯ ದತ್ತಾಂಶವನ್ನು ಒಳಮೀಸಲಾತಿಯ ಹೊರತಾಗಿ ಇತರ ಯೋಜನೆಗಳ ಸೌಲಭ್ಯಗಳು ನೀಡುವಾಗ ಪರಿಗಣಿಸಲಾಗುವುದಿಲ್ಲ ಎಂದು ಕರ್ನಾಟಕ ವಿಧಾನಮಂಡಲದ ಅನುಸೂಚಿತ ಜಾತಿ ಮತ್ತು ಅನುಸೂಚಿತ ಪಂಗಡಗಳ ಕಲ್ಯಾಣ ಸಮಿತಿ ಅಧ್ಯಕ್ಷರು ಹಾಗೂ ಮಳವಳ್ಳಿ ಶಾಸಕ ಪಿ.ಎಂ.ನರೇಂದ್ರ ಸ್ವಾಮಿ ತಿಳಿಸಿದರು.

ಬಿಬಿಎಂಪಿ ಪಶ್ಚಿಮ ವಲಯದ ಗಾಂಧಿನಗರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ ಹನುಮಂತಪ್ಪ ಕಾಲೋನಿಯ ಸಮುದಾಯ ಭವನದಲ್ಲಿ ಏರ್ಪಡಿಸಿದ್ದ ಪರಿಶಿಷ್ಟ ಜಾತಿ ಸಮೀಕ್ಷಾ ಕಾರ್ಯದ 2ನೇ ಹಂತದ ವಿಶೇಷ ಶಿಬಿರದ ಪರಿಶೀಲನೆ ವೇಳೆ ಮಾತನಾಡಿದರು. ಬಿಬಿಎಂಪಿ ವ್ಯಾಪ್ತಿಯಲ್ಲಿ ಪರಿಶಿಷ್ಟ ಜಾತಿ ಸಮೀಕ್ಷಾ ಕಾರ್ಯ ಯಶಸ್ವಿಯಾಗಿ ನಡೆಯುವ ಸಲುವಾಗಿ, ರೇಡಿಯೋ ಜಿಂಗಲ್ಸ್ ಹಾಗೂ ಕಸ ಸಂಗ್ರಹಿಸುವ ಆಟೋ ಟಿಪ್ಪರ್ ಗಳಲ್ಲಿ ಧ್ವನಿವರ್ಧಕಗಳ ಮೂಲಕ ಹೆಚ್ಚು ಪ್ರಚಾರ ಮಾಡಬೇಕು. ಇದರಿಂದ ಪರಿಣಾಮಕಾರಿಯಾಗಿ ಸಮೀಕ್ಷೆ ನಡೆಸುವಂತೆ ಸೂಚಿಸಿ ನಾಗರಿಕರು ಈ ಸಮೀಕ್ಷೆಗೆ ಸಹಕರಿಸುವಂತೆ ಮನವಿ ಮಾಡಿದರು.

ವಿಧಾನ ಪರಿಷತ್ ಸದಸ್ಯರಾದ ಶ್ರೀ ಸುಧಾಮ್ ದಾಸ್ ರವರು ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ನಿರೀಕ್ಷೆಗಿಂತ ಕಡಿಮೆ ಪ್ರಮಾಣದಲ್ಲಿ ಜನರು ಸಮೀಕ್ಷೆಯಲ್ಲಿ ಪಾಲ್ಗೊಂಡಿದ್ದಾರೆ. ಜನರು ಯಾವುದೇ ಆತಂಕ, ಭಯ, ಗೊಂದಲಗಳಿಗೆ ಒಳಗಾಗುವ ಅವಶ್ಯಕತೆಯಿಲ್ಲ. ಒಳ ಮೀಸಲಾತಿಗೆ ಹೊರತಾಗಿ ಇತರೆ ಸೌಲಭ್ಯ ನೀಡುವಲ್ಲಿ ಈ ದತ್ತಾಂಶಗಳನ್ನು ಬಳಸಲಾಗುವುದಿಲ್ಲ. ಜನರು ನಿರ್ಭೀತರಾಗಿ ಸಮೀಕ್ಷಾ ಕಾರ್ಯದಲ್ಲಿ ಪಾಲ್ಗೊಳ್ಳಬೇಕು. ಗಣತಿದಾರರು ಸರಿಯಾಗಿ ಕಾರ್ಯನಿರ್ವಹಿಸದಿರುವುದು ಕಂಡುಬಂದಲ್ಲಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡುವಂತೆ ಜನರಲ್ಲಿ ಮನವಿ ಮಾಡಿದರು.

ವಲಯ ಜಂಟಿ ಆಯುಕ್ತರಾದ ಸಂಗಪ್ಪ ರವರು ಮಾತನಾಡಿ, ಸಮೀಕ್ಷೆ ಯಶಸ್ವಿಯಾಗಿ ನಡೆಸಬೇಕೆಂಬ ಉದ್ದೇಶದಿಂದ ಪ್ರತಿನಿತ್ಯ ಅಧಿಕಾರಿಗಳ ಜೊತೆ ಪರಿಶೀಲನೆ ಸಭೆ ನಡೆಸಿ ತ್ವರಿತವಾಗಿ ಮುಗಿಸಲು ಸೂಚನೆ ನೀಡಲಾಗುತ್ತಿದೆ. ಜೊತೆಗೆ ಸಮುದಾಯದ ಮುಖಂಡರ ಜೊತೆ ಸಭೆ ನಡೆಸಿ ಸಮೀಕ್ಷಾ ಕಾರ್ಯಕ್ಕೆ ಸಹಕಾರ ನೀಡಲು ಮನವಿ ಮಾಡಲಾಗಿದೆ. ಬೀದಿ ನಾಟಕ, ಭಿತ್ತಿಪತ್ರಗಳು, ಕರ ಪತ್ರಗಳ ವಿತರಣೆ ಹಾಗೂ ಸ್ಥಳೀಯ ಮುಖಂಡರ ಸಹಾಯದಿಂದ ಜನರಲ್ಲಿ ಜಾಗೃತಿ ಮೂಡಿಸಿ ಸಮೀಕ್ಷೆ ಕಾರ್ಯ ನಡೆಸಲಾಗುತ್ತಿದೆ ಎಂದು ತಿಳಿಸಿದರು.

ಪರಿಶಿಷ್ಟ ಜಾತಿ ಸಮುದಾಯದ ಮುಖಂಡರು ನೀಡಿದ ಪ್ರಮುಖ ಸಲಹೆಗಳು:

  • ಪರಿಶಿಷ್ಟ ಜಾತಿ ಸಮೀಕ್ಷೆಯ ಕುರಿತಾಗಿ ಸಮುದಾಯದವರಿಗೆ ಸಮಗ್ರ ಮಾಹಿತಿಯ ಕೊರತೆಯಿದ್ದು, ಸಮೀಕ್ಷಾ ಕಾರ್ಯದ ಬಗ್ಗೆ ಅರಿವು ಮೂಡಿಸುವ ಕೆಲಸ ಮಾಡಿ.
  • ಸೌಲಭ್ಯಗಳನ್ನು ತಡೆಹಿಡಿಯುವ ಪ್ರಯತ್ನ ನಡೆಯುತ್ತದೆ ಎನ್ನುವ ಸುಳ್ಳು ಮಾಹಿತಿಯಿಂದಾಗಿ ಜನರು ಸಮೀಕ್ಷೆಗೆ ಒಳಪಡುತ್ತಿಲ್ಲ. ಇದರ ಬಗ್ಗೆ ಸಮುದಾಯದವರಿಗೆ ಮಾಹಿತಿ ನೀಡಿ.
  • ನಾಗರಿಕರಿಗೆ ತಾವು ಗಣತಿದಾರರಿಗೆ ನೀಡಿರುವ ನೀಡಿರುವ ಮಾಹಿತಿಗಳ ದಾಖಲೆಗಳನ್ನು ಒದಗಿಸುವ ವ್ಯವಸ್ಥೆ ಮಾಡಬಹುದಾಗಿತ್ತು.

ಈ ವೇಳೆ ಗಾಂಧಿನಗರ ಕಂದಾಯ ಅಧಿಕಾರಿಯಾದ ಕೆ.ಶ್ರೀನಿವಾಸ್, ಪರಿಶಿಷ್ಟ ಜಾತಿ ಸಮುದಾಯದ ಮುಖಂಡರು/ಪ್ರತಿನಿಧಿಗಳು ಸೇರಿದಂತೆ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.