ಕಳೆದ 30 ವರ್ಷಗಳಿಂದ ಮದ್ಯ ಮತ್ತು ಗುಟ್ಕಾವನ್ನು ಸಂಪೂರ್ಣವಾಗಿ ನಿಷೇಧಿಸಿ ರಾಜ್ಯಕ್ಕೆ ಈ ಗ್ರಾಮ ಮಾದರಿಯಾಗಿದೆ. ಈ ಸಾಮೂಹಿಕ ನಿರ್ಧಾರದಿಂದಾಗಿ ಗ್ರಾಮದಲ್ಲಿ ಯುವಕರು ಸರಿದಾರಿಯಲ್ಲಿದ್ದು, ಆರೋಗ್ಯವಂತರಾಗಿದ್ದಾರೆ ಮತ್ತು ಕೃಷಿಯಲ್ಲಿ ಯಶಸ್ಸು ಕಂಡಿದ್ದಾರೆ.

ಸೋಮರೆಡ್ಡಿ ಅಳವಂಡಿ

ಕೊಪ್ಪಳ: ಕರ್ನಾಟಕ ಸರ್ಕಾರ ಈಗ ರಾಜ್ಯದಲ್ಲಿ ಗುಟ್ಕಾ ನಿಷೇಧ ಮಾಡಿ ಅದನ್ನು ಯಥಾವತ್ತಾಗಿ ಜಾರಿ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಕೊಪ್ಪಳ ತಾಲೂಕಿನ ಹನುಮಳ್ಳಿ ಗ್ರಾಮದಲ್ಲಿ ಕಳೆದ 30 ವರ್ಷಗಳಿಂದ ಗುಟ್ಕಾವನ್ನು ಸಂಪೂರ್ಣ ನಿಷೇಧಿಸಲಾಗಿದೆ. ಅಷ್ಟೇ ಅಲ್ಲದೇ ಮದ್ಯಪಾನ ಮತ್ತು ಮದ್ಯ ಮಾರಾಟವನ್ನೂ ಮಾಡುವಂತಿಲ್ಲ.

30 ವರ್ಷಗಳ ಹಿಂದೆಯೇ ಸಂಪೂರ್ಣ ನಿಷೇಧ

ಸುಮಾರು 300 ಮನೆ, 1500 ಜನಸಂಖ್ಯೆ ಇರುವ ಕೊಪ್ಪಳ ತಾಲೂಕಿನ ಹನುಮನಹಳ್ಳಿ ಗ್ರಾಮದಲ್ಲಿ ಕಳೆದ 30 ವರ್ಷಗಳ ಹಿಂದೆಯೇ ಗುಟ್ಕಾ ಸೇರಿದಂತೆ ತಂಬಾಕುಯಕ್ತ ಪದಾರ್ಥಗಳ ಸೇವನೆ ಮತ್ತು ಮಾರಾಟ ನಿಷೇಧ ಮಾಡಲಾಗಿದೆ. ಗ್ರಾಮದ ಎಲ್ಲರೂ ಸೇರಿ ತೆಗೆದುಕೊಂಡಿರುವ ಈ ತೀರ್ಮಾನ ಇಂದಿಗೂ ಚಾಚೂ ತಪ್ಪದೆ ಪಾಲಿಸಲಾಗುತ್ತಿದೆ.

ಕೃಷಿ ಜೊತೆ ಕೋಳಿ, ಕುರಿ ಸಾಕಾಣಿಕೆ

ಹನುಮನಹಳ್ಳಿಯಲ್ಲಿ ಬಹುತೇಕ ಕೃಷಿ ಕುಟುಂಬವಿದ್ದು, ಸೊಪ್ಪು ತರಕಾರಿ ಬೆಳೆಯುತ್ತಾರೆ. ಈ ಊರಲ್ಲಿ ಗುಟ್ಕಾ ಸೇರಿದಂತೆ ಮದ್ಯಪಾನ, ಮದ್ಯ ಮಾರಾಟ ಇರದೇ ಇರುವುದರಿಂದ ಗ್ರಾಮದ ಯುವಕರು ಸರಿದಾರಿಯಲ್ಲಿ ಸಾಗಿ ಬದುಕನ್ನು ಕಟ್ಟಿಕೊಳ್ಳುತ್ತಿದ್ದಾರೆ. ಎಂತಹ ಭೀಕರ ಬರಗಾಲ ಇದ್ದರೂ ಸಹ ಹನುಮನಹಳ್ಳಿ ಗ್ರಾಮಸ್ಥರು ಗುಳೆ ಹೋದ ಉದಾಹರಣೆ ಇಲ್ಲ. ಇವರು ಕೃಷಿಯನ್ನೇ ಅತ್ಯಂತ ಅರ್ಥಪೂರ್ಣವಾಗಿ ಮಾಡುತ್ತಿದ್ದಾರೆ. ಕುಲಕಸುಬು ಕೋಳಿ ಸಾಕಾಣಿಕೆ, ಕುರಿ ಸಾಕಾಣಿಕೆ ಮಾಡುತ್ತಾರೆ.

ಗುಟ್ಕಾ ಸೇರಿದಂತೆ ತಂಬಾಕು, ಮದ್ಯಪಾನ ಇರದೇ ಇರುವುದರಿಂದ ಇಲ್ಲಿ ಹೃದಯಾಘಾತ ಸೇರಿದಂತೆ ಇತರ ಅನಾರೋಗ್ಯಕ್ಕೆ ತುತ್ತಾಗುವವರ ಸಂಖ್ಯೆಯು ಅತ್ಯಂತ ವಿರಳ. ರಾಜ್ಯ ಸರ್ಕಾರ ಈಗಷ್ಟೇ ಗುಟ್ಕಾ ನಿಷೇಧ ಮಾಡುವ ಪ್ರಸ್ತಾಪ ಮಾಡಿದೆ, ಅದನ್ನು ಪರಿಪೂರ್ಣವಾಗಿ ಜಾರಿ ಮಾಡುವ ಮುನ್ನವೇ ಅಪಸ್ವರದಿಂದ ಒತ್ತಡಕ್ಕೆ ಒಳಗಾಗಿದೆ. ಆದರೆ ಹನುಮನಹಳ್ಳಿ ರಾಜ್ಯಕ್ಕೆ ಮಾದರಿ ಎನ್ನುವಂತಿದೆ.

ನಮ್ಮೂರಲ್ಲಿ ನಮಗೆ ಗೊತ್ತಿರುವಂತೆ ಗುಟ್ಕಾ ಮಾರಾಟ ಮಾಡುತ್ತಿಲ್ಲ. ಹಾಗೆ ಮದ್ಯ ಮಾರಾಟವೂ ಇಲ್ಲ ಮತ್ತು ಹೋಟೆಲ್‌ಗಳು ಸಹ ಇಲ್ಲಿ ಇಲ್ಲ ಎಂದು ಗ್ರಾಮಸ್ಥ ರಾಘವೇಂದ್ರ ಬಡಿಗೇರ್ ಹೇಳುತ್ತಾರೆ.

ಗುಟ್ಕಾ ಮೊದಲ ಬಾರಿಗೆ ಬಂದಾಗಲೇ ಗ್ರಾಮದ ಎಲ್ಲರೂ ಸೇರಿ ನಿಷೇಧ ಮಾಡಿದ್ದೇವೆ. ಅದಕ್ಕೂ ಮೊದಲು ನಮ್ಮೂರಲ್ಲಿ ಮದ್ಯಪಾನ ಹಾಗೂ ಮದ್ಯ ಮಾರಾಟ ನಿಷೇಧ ಮಾಡಲಾಗಿದೆ ಎಂದು ಗ್ರಾಮದ ಹಿರಿಯ ಕುಬೇರಪ್ಪ ಹೇಳುತ್ತಾರೆ.

ಕೊಪ್ಪಳದ ಹಳ್ಳಿಗೆ ‘ಮದ್ಯಮುಕ್ತ ಗ್ರಾಮ’ ಪ್ರಶಸ್ತಿ ಕೊಟ್ಟ ಸರ್ಕಾರ

ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಸಂಯುಕ್ತ ಆಶ್ರಯದಲ್ಲಿ ಭಾನುವಾರ ಕೊಪ್ಪಳದ ಹಟ್ಟಿ ಗ್ರಾಮಕ್ಕೆ ರಾಜ್ಯಮಟ್ಟದ ಮದ್ಯಮುಕ್ತ ಸಂಯಮ ಪ್ರಶಸ್ತಿ ಪ್ರದಾನ ಮಾಡಲಾಯಿತು. ಸಮಾರಂಭದಲ್ಲಿ ಕೊಪ್ಪಳ ತಾಲೂಕಿನ ಹಟ್ಟಿ ಗ್ರಾಮದ ಮಹಿಳೆಯರನ್ನು ಸನ್ಮಾನಿಸಿ, ಹಟ್ಟಿ ಗ್ರಾಮಕ್ಕೆ ‘ಸಂಯಮ ಪ್ರಶಸ್ತಿ’ ಪ್ರದಾನ ಮಾಡಲಾಯಿತು.

ಜೊತೆಗೆ, ಕೊಪ್ಪಳ ತಾಲೂಕಿನ ಹಟ್ಟಿ, ತಾಳ ಕನಕಾಪುರ, ಕಾಮನೂರು, ಹನುಮನಹಳ್ಳಿ ಹಾಗೂ ಲೇಬಗೇರಿ, ಕುಕನೂರು ತಾಲೂಕಿನ ಬಿನ್ನಾಳ ಮತ್ತು ಚಿಕ್ಕೆನಕೊಪ್ಪ, ಕುಷ್ಟಗಿ ತಾಲೂಕಿನ ಮತ್ನಾಳ, ನಾಗರಾಳ, ಬೋದೂರು ತಾಂಡಾ ಹಾಗೂ ಹಿರೇಬನ್ನಿಗೋಳ ಗ್ರಾಮಗಳಿಗೆ ಮದ್ಯ ಮಾರಾಟ ಮುಕ್ತ ಅಭಿನಂದನಾ ಪ್ರಶಸ್ತಿ ವಿತರಣೆ ಮಾಡಲಾಯಿತು. ಬಳಿಕ, ಪ್ರೊ.ಕೆ.ಪುಟ್ಟರಂಗಪ್ಪ ರಚಿಸಿದ ಪಾನ ನಿರೋಧ ಚಳವಳಿ ಪುಸ್ತಕವನ್ನು ಬಿಡುಗಡೆ ಮಾಡಲಾಯಿತು.

ಕೊಪ್ಪಳದ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಚಿತ್ತರಗಿ ವಿಜಯ ಮಹಾಂತೇಶ್ವರ ಸಂಸ್ಥಾನ ಮಠ ಇಳಕಲ್‌ದ ಗುರುಮಹಾಂತ ಶ್ರೀಗಳು ಹಾಗೂ ಗುರುಸ್ವಾಮಿಗಳು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು.