ಬೆಂಗಳೂರು[ಜ.24]: ದೇಶಕ್ಕೆ ದ್ರೋಹ ಬಗೆಯುವವರು ಮತ್ತು ಪಾಕಿಸ್ತಾನದ ಪರವಾಗಿರುವಂತಹವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ಕಂದಾಯ ಸಚಿವ ಆರ್‌.ಅಶೋಕ್‌ ಹೇಳಿದ್ದಾರೆ.

ನೇತಾಜಿ ಸುಭಾಷ್‌ ಚಂದ್ರ ಬೋಸ್‌ ಜನ್ಮದಿನಾಚರಣೆ ಪ್ರಯುಕ್ತ ವಿಧಾನಸೌಧದಲ್ಲಿನ ಸುಭಾಷ್‌ ಚಂದ್ರ ಬೋಸ್‌ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಪಾಕಿಸ್ತಾನವು ಭಾರತದ ವೈರಿ ರಾಷ್ಟ್ರ ಆಗಿದೆ. ನಮ್ಮ ದೇಶವನ್ನು ನಾಶ ಮಾಡಲು ಹೊರಟಿರುವ ಪಾಕಿಸ್ತಾನ ದೇಶವನ್ನು ಮಟ್ಟಹಾಕುವಂತಹ ಕೆಲಸ ಮಾಡುವುದು ನಮ್ಮ ಕರ್ತವ್ಯವಾಗಿದೆ. ಯಾರು ದೇಶಕ್ಕೆ ದ್ರೋಹ ಬಗೆಯುತ್ತಾರೋ, ಪಾಕಿಸ್ತಾನ ಪರವಾಗಿರುತ್ತಾರೋ ಅಂತಹವರನ್ನು ಗುಂಡಿಟ್ಟು ಕೊಲ್ಲಬೇಕು ಎಂದು ತಿಳಿಸಿದರು.

ಡಿಕೆಶಿ ಶಿಲಾನ್ಯಾಸ ನೆರವೇರಿಸಿದ್ದ ಏಸು ಪ್ರತಿಮೆ ವಿವಾದ: ಸಿಎಂ ಭೇಟಿಯಾದ ಕ್ರೈಸ್ತ ನಿಯೋಗ

ದೇಶದ ಸೈನಿಕರನ್ನು ಹತ್ಯೆಗೈಯುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಜರುಗಿಸಬೇಕು. ಪಾಕಿಸ್ತಾನ ಧ್ವಜ ಕಂಡರೆ ಸಿಟ್ಟು ಬರುತ್ತದೆ. ಪಾಕಿಸ್ತಾನ ಪರವಾಗಿದ್ದವರು ಹಿಂದೂ ಆಗಲಿ, ಮುಸ್ಲಿಂ, ಕ್ರೈಸ್ತನಾಗಲಿ ಯಾರೇ ಆದರೂ ದೇಶದ್ರೋಹ ಕೆಲಸ ಮಾಡಿದಂತಾಗುತ್ತದೆ. ಕಾನೂನು ಎಲ್ಲರಿಗೂ ಒಂದೇ. ಕಳ್ಳ ಯಾವ ಧರ್ಮದವನೇ ಆಗಿರಲಿ, ಕಳ್ಳಕಳ್ಳನೇ. ಪಾಕಿಸ್ತಾನದ ಪ್ರೇರಣೆಯಿಂದ ತರಬೇತಿ ಪಡೆದು ಹಿಂದೂ ಉಗ್ರವಾದ ಮಾಡಿದರೆ ಅವನನ್ನು ಅದೇ ರೀತಿ ನೋಡುತ್ತೇವೆ ಎಂದರು. ರಾಜ್ಯಸಭಾ ಸದಸ್ಯ ಕೆ.ಸಿ.ರಾಮಮೂರ್ತಿ ಮೊದಲಾದವರು ಉಪಸ್ಥಿತರಿದ್ದರು.