Asianet Suvarna News Asianet Suvarna News

ರಾಜ್ಯದಲ್ಲಿ ಮತ್ತೆ Omicron ಸ್ಫೋಟ: ಒಂದೇ ದಿನ 12 ಕೇಸ್‌, 7 ಜಿಲ್ಲೆಗೆ ಹಬ್ಬಿದ ವೈರಸ್‌!

* ವಿದೇಶದಿಂದ ಬಂದ 9 ಮಂದಿ, ಅವರ 3 ಸಂಬಂಧಿಗಳಿಗೆ ಸೋಂಕು

* ಮೈಸೂರಲ್ಲಿ ಮೊದಲ ಕೇಸ್‌ 7 ಜಿಲ್ಲೆಗೆ ಹಬ್ಬಿದ ವೈರಸ್‌

* ರಾಜ್ಯದಲ್ಲಿ ಮತ್ತೆ ಒಮಿಕ್ರೋನ್‌ ಸ್ಫೋಟ: ಒಂದೇ ದಿನ 12 ಕೇಸ್‌

Karnataka reports 12 fresh Omicron cases state tally at 31 pod
Author
Bangalore, First Published Dec 24, 2021, 4:32 AM IST
  • Facebook
  • Twitter
  • Whatsapp

ಬೆಂಗಳೂರು(ಡಿ.24): ವಿದೇಶಗಳಿಂದ ಕಳೆದ ವಾರ ರಾಜ್ಯಕ್ಕೆ ಆಗಮಿಸಿದ 9 ಪ್ರಯಾಣಿಕರು ಹಾಗೂ ಅವರ ಕುಟುಂಬದ ಮೂವರು ಸೇರಿ 12 ಮಂದಿಯಲ್ಲಿ ಒಮಿಕ್ರೋನ್‌ ಸೋಂಕು ಗುರುವಾರ ದೃಢಪಟ್ಟಿದೆ. 12 ಮಂದಿಯಲ್ಲಿ ಇಬ್ಬರು ಬಾಲಕಿಯರೂ ಇದ್ದಾರೆ. ಇದರೊಂದಿಗೆ ರಾಜ್ಯದಲ್ಲಿ ಈ ರೂಪಾಂತರಿ ಸೋಂಕಿತರ ಒಟ್ಟು ಸಂಖ್ಯೆ 31ಕ್ಕೆ ಏರಿಕೆಯಾಗಿದೆ. ಡಿ.18ರಂದು ಒಂದೇ ದಿನ 6 ಪ್ರಕರಣ ಪತ್ತೆಯಾಗಿದ್ದು ಈವರೆಗಿನ ಗರಿಷ್ಠ ಆಗಿತ್ತು. ಇದೀಗ ಒಂದೇ ದಿನ ಅದರ ದುಪ್ಪಟ್ಟು ಪ್ರಕರಣಗಳು ದೃಢಪಟ್ಟಿದೆ. ಹೈರಿಸ್ಕ್‌ ದೇಶಗಳಿಂದ ರಾಜ್ಯಕ್ಕೆ ಬಂದವರು ಮತ್ತು ಅವರ ಸಂಪರ್ಕಿತ ಸ್ಥಳೀಯರಲ್ಲಿ ಒಮಿಕ್ರೋನ್‌ ಸೋಂಕು ಹೆಚ್ಚಳವಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಡಿ.17ರಂದು ಲಂಡನ್‌ನಿಂದ ಬೆಂಗಳೂರಿಗೆ ಬಂದ ಐದು ಪ್ರಯಾಣಿಕರು (12 ವರ್ಷದ ಬಾಲಕಿ ಸೇರಿ), ಡೆನ್ಮಾರ್ಕ್ ಮತ್ತು ನೈಜೀರಿಯಾದಿಂದ ಬೆಂಗಳೂರಿಗೆ ಬಂದ ತಲಾ ಒಬ್ಬರು ವಯಸ್ಕರು, ಸ್ವಿಜರ್ಲೆಂಡ್‌ನಿಂದ ಮೈಸೂರಿಗೆ ಬಂದ 9 ವರ್ಷದ ಮಗು ಹಾಗೂ ಘಾನಾದಿಂದ ಮಂಗಳೂರಿಗೆ ಬಂದಿದ್ದ ಒಬ್ಬರಲ್ಲಿ ರೂಪಾಂತರಿ ದೃಢಪಟ್ಟಿದೆ. ಜತೆಗೆ ವಿದೇಶದಿಂದ ಬಂದ ಸೋಂಕಿತರೊಬ್ಬರ ಕುಟುಂಬದ ಮೂರು ಮಂದಿಯಲ್ಲಿ ಒಮಿಕ್ರೋನ್‌ ಪತ್ತೆಯಾಗಿದೆ.

ಡಿ.1ರಿಂದ 22ವರೆಗೂ 6 ವಿದೇಶಿ ಪ್ರಯಾಣಿಕರು, 13 ಸ್ಥಳೀಯರು ಸೇರಿ 19 ಮಂದಿಯಲ್ಲಿ ಒಮಿಕ್ರೋನ್‌ ಪತ್ತೆಯಾಗಿತ್ತು. ವಿದೇಶದಿಂದ ಬಂದವರಿಗಿಂತ ಸ್ಥಳೀಯರಲ್ಲೇ ರೂಪಾಂತರಿ ಹೆಚ್ಚು ಕಾಣಿಸಿಕೊಂಡು ಆತಂಕ ಮೂಡಿಸಿತ್ತು. ಆದರೆ, ಕಳೆದ ಒಂದು ವಾರದಿಂದ ವಿದೇಶದಿಂದ ಬರುತ್ತಿರುವವರಲ್ಲಿ ಕೊರೋನಾ ಹೆಚ್ಚು ಪತ್ತೆಯಾಗುತ್ತಿದೆ. ಅವರೆಲ್ಲರನ್ನು ವಂಶವಾಹಿ ಪರೀಕ್ಷೆಗೆ ಒಳಪಡಿಸಲಾಗಿದ್ದು, ಹಲವರಲ್ಲಿ ಒಮಿಕ್ರೋನ್‌ ಕಾಣಿಸಿಕೊಳ್ಳುತ್ತಿದೆ.

ಯಾರಿಗೂ ಸೋಂಕು ಲಕ್ಷಣ ಇಲ್ಲ:

12 ಸೋಂಕಿತರಲ್ಲಿ ಬೌರಿಂಗ್‌, ವೆನ್ಲಾಕ್‌ ಆಸ್ಪತ್ರೆಗೆ ತಲಾ ಒಬ್ಬರು ದಾಖಲಾಗಿದ್ದರೆ, 10 ಮಂದಿ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಾರೊಬ್ಬರಿಗೂ ಸೋಂಕಿನ ಲಕ್ಷಣಗಳಿಲ್ಲ. ಎಲ್ಲರ ಆರೋಗ್ಯಸ್ಥಿರವಾಗಿದೆ. ಸರ್ಕಾರದ ನಿಯಮದಂತೆ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. 10 ದಿನಗಳ ಆಸ್ಪತ್ರೆ ಚಿಕಿತ್ಸೆ ಬಳಿಕ ಎರಡು ಬಾರಿ ಪರೀಕ್ಷೆ ನಡೆಸಿ ನೆಗೆಟಿವ್‌ ಬಂದ ಬಳಿಕ ಬಿಡುಗಡೆ ಮಾಡಲಾಗುವುದು ಎಂದು ಆರೋಗ್ಯ ಇಲಾಖೆ ತಿಳಿಸಿದೆ.

ಒಂದೇ ಕುಟುಂಬದ ನಾಲ್ವರಿಗೆ ಸೋಂಕು:

ಡಿ.12ರಂದು ಇಂಗ್ಲೆಂಡ್‌ನಿಂದ ಬೆಂಗಳೂರಿಗೆ ಬಂದಿದ್ದ ಪ್ರಯಾಣಿಕರೊಬ್ಬರಿಗೆ ಸೋಂಕು ದೃಢಪಟ್ಟಿತ್ತು. ಅವರ ತಂಗಿ (22), ತಂದೆ (56), ತಾಯಿ(54)ಗೆ ಒಮಿಕ್ರೋನ್‌ ತಗುಲಿದೆ. ಈ ಮೂಲಕ ಒಂದೇ ಕುಟುಂಬದ ನಾಲ್ಕು ಮಂದಿಯೂ ಸೋಂಕಿತರಾಗಿದ್ದು, ಮಣಿಪಾಲ್‌ ಆಸ್ಪತ್ರೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಏಳು ಜಿಲ್ಲೆಗೆ ಹಬ್ಬಿದ ಸೋಂಕು:

ಈ ಹಿಂದೆ ಬೆಂಗಳೂರು, ಉಡುಪಿ, ದಕ್ಷಿಣ ಕನ್ನಡ, ಶಿವಮೊಗ್ಗ, ಧಾರವಾಡ, ಬೆಳಗಾವಿ ಸೇರಿ ಆರು ಜಿಲ್ಲೆಗಳಲ್ಲಿ ಒಮಿಕ್ರೋನ್‌ ಪತ್ತೆಯಾಗಿತ್ತು. ಡಿ.19ರಂದು ಸ್ವಿಜರ್ಲೆಂಡ್‌ನಿಂದ ಮೈಸೂರಿಗೆ ಬಂದಿದ್ದ 9 ವರ್ಷದ ಬಾಲಕಿಗೆ ಒಮಿಕ್ರೋನ್‌ ದೃಢವಾಗಿದೆ. ಈ ಮೂಲಕ ಒಮಿಕ್ರೋನ್‌ ಕಾಣಿಸಿಕೊಂಡ ಜಿಲ್ಲೆಗಳ ಸಂಖ್ಯೆ 7ಕ್ಕೆ ಹೆಚ್ಚಳವಾಗಿದೆ.

ಸೋಂಕಿತನಿಗೆ 6 ಜಿಲ್ಲೆ ಸಂಪರ್ಕ:

ಡಿ.15ರಂದು ಘಾನಾದಿಂದ ಮಂಗಳೂರಿಗೆ ಬಂದಿದ್ದ ಸೋಂಕಿತನಿಗೆ ವಿಮಾನ ನಿಲ್ದಾಣದಲ್ಲಿ ಸೋಂಕು ದೃಢಪಟ್ಟಿದೆ. ಆತನಿಗೆ ತಗುಲಿರುವುದು ಒಮಿಕ್ರೋನ್‌ ಎಂದು ಪತ್ತೆಯಾಗಿದ್ದು, ಪ್ರಾಥಮಿಕ ಸಂಪರ್ಕ ಹೊಂದಿದ್ದ ದಕ್ಷಿಣ ಕನ್ನಡದ 17, ಉಡುಪಿಯ 5, ಶಿವಮೊಗ್ಗ, ಚಿಕ್ಕಮಗಳೂರು, ಉತ್ತರ ಕನ್ನಡ ಹಾಗೂ ಮೈಸೂರಿನ ತಲಾ ಒಬ್ಬರನ್ನು ಗುರುತಿಸಿ ಸೋಂಕು ಪರೀಕ್ಷೆಗೊಳಪಡಿಸಲಾಗಿದೆ. ದಕ್ಷಿಣ ಕನ್ನಡದ 17 ಮಂದಿಯಲ್ಲಿ ಯಾರೊಬ್ಬರಲ್ಲೂ ಸೋಂಕು ಕಾಣಿಸಿಕೊಂಡಿಲ್ಲ.

ವಿದೇಶದಿಂದ ಬಂದ 40 ಮಂದಿಗೆ ಸೋಂಕು

ಒಮಿಕ್ರೋನ್‌ ಹೆಚ್ಚಿರುವ ಹೈರಿಸ್ಕ್‌ ದೇಶಗಳಿಂದ ಡಿ.1 ರಿಂದ 22ವರೆಗೂ ರಾಜ್ಯಕ್ಕೆ 12 ಸಾವಿರಕ್ಕೂ ಅಧಿಕ ಪ್ರಯಾಣಿಕರು ಆಗಮಿಸಿದ್ದಾರೆ. ಈ ಪೈಕಿ 40 ಮಂದಿಯಲ್ಲಿ ತಪಾಸಣೆ ವೇಳೆ ಕೊರೋನಾ ಸೋಂಕು ಕಾಣಿಸಿಕೊಂಡಿದೆ. ಈ ಪೈಕಿ 30 ಮಂದಿ ವಂಶವಾಹಿ ವರದಿ ಬಂದಿದ್ದು, 15 ಮಂದಿಗೆ ತಗುಲಿರುವುದು ಒಮಿಕ್ರೋನ್‌ ರೂಪಾಂತರಿ ಎಂದು ದೃಢಪಟ್ಟಿದೆ.

Follow Us:
Download App:
  • android
  • ios