ಕಾವೇರಿ ವಿವಾದ: ಕರ್ನಾಟಕ ನಿಗದಿಯಷ್ಟು ನೀರು ಬಿಟ್ಟಿದೆ, ಪ್ರಾಧಿಕಾರ
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರಾಧಿಕಾರವು ಈ ವಸ್ತುಸ್ಥಿತಿ ವರದಿ ಸಲ್ಲಿಸಿದ್ದು, ಇದಕ್ಕೆ ತಮಿಳುನಾಡಿನಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ.
ನವದೆಹಲಿ(ಸೆ.01): ಕರ್ನಾಟಕ ಸರ್ಕಾರ ನಾವು ನಿಗದಿ ಮಾಡಿದಷ್ಟುನೀರನ್ನು ಸಮರ್ಪಕವಾಗಿ ತಮಿಳುನಾಡಿಗೆ ಬಿಡುಗಡೆ ಮಾಡುತ್ತಿದೆ ಎಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (ಸಿಡಬ್ಲ್ಯುಎಂಎ) ಗುರುವಾರ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದ ವಸ್ತುಸ್ಥಿತಿ ವರದಿಯಲ್ಲಿ ಹೇಳಿದೆ. ಜತೆಗೆ, ತಮಿಳುನಾಡಿನ ಮೆಟ್ಟೂರು ಡ್ಯಾಂನಲ್ಲಿ ಸಾಕಷ್ಟು ನೀರಿದ್ದರೂ ಅದನ್ನು ಮಳೆ ಕೊರತೆ ವರ್ಷದಲ್ಲಿ ಸೂಕ್ತವಾಗಿ ಬಳಕೆ ಮಾಡಿಲ್ಲ ಎಂದೂ ತಿಳಿಸಿದೆ.
ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪ್ರಾಧಿಕಾರವು ಈ ವಸ್ತುಸ್ಥಿತಿ ವರದಿ ಸಲ್ಲಿಸಿದ್ದು, ಇದಕ್ಕೆ ತಮಿಳುನಾಡಿನಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಮಳೆ ಕೊರತೆ ವರ್ಷಗಳಲ್ಲಿ ಪಾಲಿಸಬೇಕಾದ ವೈಜ್ಞಾನಿಕ ವಿಧಾನವನ್ನು ಸಿಡಬ್ಲ್ಯುಎಂಎ ಸಿದ್ಧಪಡಿಸಿಲ್ಲ. ವೈಜ್ಞಾನಿಕ ವಿಧಾನದ ಸೂತ್ರ ಸಿದ್ಧಪಡಿಸಲು ಸುಪ್ರೀಂ ಕೋರ್ಟ್ ಸಿಡಬ್ಲ್ಯುಎಂಎಗೆ ಸೂಚಿಸಬೇಕು. ನಮ್ಮ ಉಳಿಕೆಯ ಪಾಲು 8.98 ಟಿಎಂಸಿ ನೀರನ್ನು ಬಿಡುಗಡೆ ಮಾಡಲು ಆದೇಶಿಸಬೇಕು ಎಂದು ಸುಪ್ರೀಂ ಕೋರ್ಚ್ ಮುಂದೆ ಸಲ್ಲಿಸಿರುವ ಆಕ್ಷೇಪಣೆಯಲ್ಲಿ ಮನವಿ ಮಾಡಿದೆ.
ಕಾವೇರಿ ವಿವಾದ: ದೆಹಲಿಯಲ್ಲಿ ಕಾನೂನು ತಜ್ಞರು, ಅಧಿಕಾರಿಗಳೊಂದಿಗೆ ಡಿ.ಕೆ.ಶಿವಕುಮಾರ್ ಮಾತುಕತೆ
ನಿತ್ಯ24 ಸಾವಿರ ಕ್ಯುಸೆಕ್ ನೀರು ಬಿಡುಗಡೆಗೆ ಕರ್ನಾಟಕಕ್ಕೆ ಆದೇಶಿಸುವಂತೆ ಕೋರಿ ತಮಿಳುನಾಡು ಸರ್ಕಾರ ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ಕಳೆದ ಶುಕ್ರವಾರ ನಡೆಸಿದ್ದ ನ್ಯಾಯಾಲಯ, ತಮಿಳುನಾಡಿಗೆ ಸಮರ್ಪಕವಾಗಿ ನೀರು ಬಿಡುಗಡೆ ಆಗುತ್ತಿದೆಯೇ ಇಲ್ಲವೇ ಎಂಬುದರ ಕುರಿತು ವಸ್ತುಸ್ಥಿತಿ ವರದಿಯನ್ನು ಮುಂದಿನ ವಿಚಾರಣೆಯೊಳಗೆ ಸಲ್ಲಿಸುವಂತೆ ಸಿಡಬ್ಲ್ಯುಎಂಎಗೆ ಸೂಚಿಸಿತ್ತು. ಅದರಂತೆ ಇದೀಗ ಸಿಡಬ್ಲ್ಯುಎಂಎ ತನ್ನ ವರದಿ ಸಲ್ಲಿಸಿದೆ.
ಆ.11ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಸಭೆಯಲ್ಲಿ ಹೊರಡಿಸಿದ ಆದೇಶವನ್ನು ಕರ್ನಾಟಕ ಸಂಪೂರ್ಣವಾಗಿ ಪಾಲಿಸಿದೆ. ಆ.12ರಿಂದ 26ರ ವರೆಗೆ 14,9898 ಕ್ಯುಸೆಕ್ ನೀರನ್ನು ತಮಿಳುನಾಡಿಗೆ ಬಿಡುಗಡೆ ಮಾಡಿದೆ. ಆ.28ರಂದು ನಡೆದ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ತುರ್ತು ಸಭೆಯಲ್ಲಿ ಮುಂದಿನ 15 ದಿನಗಳ ವರೆಗೆ ಸೆಕೆಂಡಿಗೆ 5 ಸಾವಿರ ಘನ ಅಡಿಯಂತೆ ನೀರು ಹರಿಸಲು ಆದೇಶ ಹೊರಡಿಸಲಾಗಿದೆ. ಅದನ್ನೂ ಕರ್ನಾಟಕ ಪಾಲಿಸುತ್ತಿದೆ ಎಂದು ಸಿಡಬ್ಲ್ಯುಎಂಎ ವರದಿಯಲ್ಲಿ ಪ್ರಸ್ತಾಪಿಸಲಾಗಿದೆ.
ತ.ನಾಡು ಆಕ್ಷೇಪ:
ಸಿಡಬ್ಲ್ಯುಎಂಎ ವರದಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್ ಮುಂದೆ ಆಕ್ಷೇಪಣೆ ಸಲ್ಲಿಸಿರುವ ತಮಿಳುನಾಡು, ಮಳೆ ಕೊರತೆ ವರ್ಷ ಎಂದು ತೀರ್ಮಾನಿಸಿ ತಮಿಳುನಾಡಿನ ಪಾಲು ಹಂಚಿಕೆ ಮಾಡುವಾಗ ಪಾರದರ್ಶಕತೆ ಕಾಯ್ದುಕೊಳ್ಳುವಂತೆ, ನ್ಯಾಯಪರತೆ ಕಾಯ್ದುಕೊಳ್ಳುವಂತೆ ಸಿಡಬ್ಲ್ಯುಎಂಎಗೆ ನಿರ್ದೇಶನ ನೀಡಬೇಕು. 10 ದಿನಕ್ಕೊಮ್ಮೆ ನೀರು ಹಂಚಿಕೆ ಕುರಿತು ಸೂಕ್ತ ನಿರ್ದೇಶನ ನೀಡುತ್ತಿರಬೇಕು ಎಂದು ಹೇಳಿದರು.