ಕಾವೇರಿ ವಿವಾದ: ದೆಹಲಿಯಲ್ಲಿ ಕಾನೂನು ತಜ್ಞರು, ಅಧಿಕಾರಿಗಳೊಂದಿಗೆ ಡಿ.ಕೆ.ಶಿವಕುಮಾರ್ ಮಾತುಕತೆ
ಕಾವೇರಿ ನೀರಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಿರಿಯ ವಕೀಲ ಮೋಹನ್ ಕಾತರಕಿ, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರ ಜತೆ ದೆಹಲಿಯಲ್ಲಿ ಮಾತುಕತೆ ನಡೆಸಿದ್ದಾರೆ.
ನವದೆಹಲಿ (ಸೆ.01): ಕಾವೇರಿ ನೀರಿಗೆ ಸಂಬಂಧಿಸಿ ಸುಪ್ರೀಂ ಕೋರ್ಟ್‌ಗೆ ತಮಿಳುನಾಡು ಸಲ್ಲಿಸಿರುವ ಅರ್ಜಿ ಸುಪ್ರೀಂ ಕೋರ್ಟ್‌ನಲ್ಲಿ ವಿಚಾರಣೆಗೆ ಬರುವ ಹಿನ್ನೆಲೆಯಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಹಿರಿಯ ವಕೀಲ ಮೋಹನ್ ಕಾತರಕಿ, ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರ ಜತೆ ದೆಹಲಿಯಲ್ಲಿ ಮಾತುಕತೆ ನಡೆಸಿದ್ದಾರೆ. ನಂತರ ಸುದ್ದಿಗಾರರ ಜತೆಗೆ ಮಾತನಾಡಿದ ಡಿ.ಕೆ.ಶಿವಕುಮಾರ್, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ(ಸಿಡಬ್ಲ್ಯುಎಂಎ)ದವರು ಕರ್ನಾಟಕದ ಕಾವೇರಿ ನದಿ ಅಣೆಕಟ್ಟುಗಳಿಗೆ ಭೇಟಿ ನೀಡಿ ಅಲ್ಲಿನ ವಾಸ್ತವಾಂಶ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದೇವೆ.
ಆಗಲಾದರೂ ನಮ್ಮ ಪರಿಸ್ಥಿತಿ ಅವರಿಗೆ ಅರ್ಥವಾಗಲಿದೆ ಎಂದು ತಿಳಿಸಿದರು. ಮೇಕೆದಾಟು ಯೋಜನೆ ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ. ಮೇಕೆದಾಟು ಅಣೆಕಟ್ಟು ಇದ್ದಿದ್ದರೆ ಸಂಕಷ್ಟಸೂತ್ರದ ಮೂಲಕ ತಮಿಳುನಾಡಿಗೆ ನೀರು ಬಿಡಬಹುದಾಗಿತ್ತು. ಮೇಕೆದಾಟು ಯೋಜನೆ ತಮಿಳುನಾಡಿನ ಹಿತ ಕಾಯಲಿದೆ. ಹೀಗಾಗಿ ನಾವು ಈ ವಿಚಾರವಾಗಿ ಸುಪ್ರೀಂ ಕೋರ್ಟ್‌ನಲ್ಲಿ ಮನವಿ ಸಲ್ಲಿಸುತ್ತೇವೆ ಎಂದರು. ಕಾವೇರಿ ನೀರಿನ ವಿಚಾರವಾಗಿ ನಮ್ಮ ಅಧಿಕಾರಿಗಳ ಹೋರಾಟದ ಪರಿಣಾಮ ಕಡಿಮೆ ನೀರು ಹರಿಸುವ ಆದೇಶ ಸಿಕ್ಕಿದೆ. ಆದರೂ ಕರ್ನಾಟಕದಲ್ಲಿ ಮಳೆ ಕೊರತೆಯಿಂದಾಗಿ ಪ್ರತಿನಿತ್ಯ 5 ಸಾವಿರ ಕ್ಯುಸೆಕ್ ನೀರು ಹರಿಸುವುದು ಸವಾಲಿನ ವಿಚಾರ.
ಸುಪ್ರೀಂಕೋರ್ಟ್ನಲ್ಲಿ ನಾಳೆ ಕಾವೇರಿ ನೀರು ವಿಚಾರಣೆ ಅನುಮಾನ?: ಯಾಕೆ ಗೊತ್ತಾ!
ಹೀಗಾಗಿ ಕಾವೇರಿ ವಿಚಾರವಾಗಿ ರಾಜ್ಯದ ಪರ ವಾದ ಮಾಡುತ್ತಿರುವ ಅಡ್ವೊಕೇಟ್ ಜನರಲ್ ಹಾಗೂ ಅವರ ಕಾನೂನು ತಜ್ಞರ ತಂಡ, ಅಧಿಕಾರಿಗಳು, ಕರ್ನಾಟಕ ಪ್ರತಿನಿಧಿಗಳು ಸೇರಿ ಚರ್ಚೆ ಮಾಡಿದ್ದೇವೆ ಎಂದರು. ತಮಿಳುನಾಡಿನವರು 24 ಸಾವಿರ ಕ್ಯುಸೆಕ್ ನೀರು ಕೇಳಿದ್ದರು. ನಮ್ಮ ಅಧಿಕಾರಿಗಳು ವಾಸ್ತವಾಂಶಗಳ ದಾಖಲೆ ಮಂಡಿಸಿದ ಪರಿಣಾಮ ತಮಿಳುನಾಡಿಗೆ ಹರಿಸುವ ನೀರಿನ ಪ್ರಮಾಣ 5 ಸಾವಿರ ಕ್ಯುಸೆಕ್ಗೆ ಇಳಿಸಲಾಗಿದೆ. ರಾಜ್ಯದಲ್ಲಿ ಮಳೆ ಕೊರತೆ, ಅಣೆಕಟ್ಟುಗಳಿಗೆ ಒಳಹರಿವಿನ ಪ್ರಮಾಣ ಕುಸಿದಿರುವ ಕಾರಣ, ಈ ಪ್ರಮಾಣದಲ್ಲಿ ನೀರು ಬಿಡುವುದು ಕಷ್ಟಕರ. ನಾವು ತಮಿಳುನಾಡಿನ ಹಕ್ಕಿನ ನೀರಿನ ಬಳಕೆ ಬಗ್ಗೆ ನಾವು ಪ್ರಶ್ನಿಸಲು ಸಾಧ್ಯವಿಲ್ಲ ಎಂದರು.