ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಹೈದರಾಬಾದ್‌ಗೆ ಪ್ರಯಾಣಿಸುವ ವೇಳೆ ತಡವಾಗಿ ಬಂದ ಕಾರಣಕ್ಕೆ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರನ್ನು ಬಿಟ್ಟು ಗುರುವಾರ ಏರ್‌ ಏಷ್ಯಾ ವಿಮಾನವು ಪ್ರಯಾಣ ಬೆಳೆಸಿತ್ತು. ಈ ಘಟನೆಯಿಂದ ತೀವ್ರ ಮುಜುಗರಕ್ಕೊಳಗಾಗಿದ್ದ ರಾಜ್ಯಪಾಲರು, ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಸೂಚಿಸಿದ್ದರು. 

ಬೆಂಗಳೂರು(ಜು.29):  ರಾಜ್ಯಪಾಲರಿಗೆ ವಿಮಾನ ಪ್ರಯಾಣ ತಪ್ಪಿದ ಘಟನೆ ಸಂಬಂಧ ಏರ್‌ ಏಷ್ಯಾ ವೈಮಾನಿಕ ಸಂಸ್ಥೆ ಹಾಗೂ ವಿಮಾನಯಾನ ಇಲಾಖೆ ಅಧಿಕಾರಿಗಳ ಮೇಲೆ ಕಾನೂನು ಕ್ರಮ ಜರುಗಿಸುವಂತೆ ಕೋರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪೊಲೀಸ್‌ ಠಾಣೆಗೆ ರಾಜಭವನ ಶಿಷ್ಟಾಚಾರ ವಿಭಾಗದ ಅಧಿಕಾರಿ ವೇಣುಗೋಪಾಲ್‌ ಲಿಖಿತ ದೂರು ನೀಡಿದ್ದಾರೆ.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ (ಕೆಐಎ) ಹೈದರಾಬಾದ್‌ಗೆ ಪ್ರಯಾಣಿಸುವ ವೇಳೆ ತಡವಾಗಿ ಬಂದ ಕಾರಣಕ್ಕೆ ರಾಜ್ಯಪಾಲ ಥಾವರ್‌ ಚಂದ್‌ ಗೆಹಲೋತ್‌ ಅವರನ್ನು ಬಿಟ್ಟು ಗುರುವಾರ ಏರ್‌ ಏಷ್ಯಾ ವಿಮಾನವು ಪ್ರಯಾಣ ಬೆಳೆಸಿತ್ತು. ಈ ಘಟನೆಯಿಂದ ತೀವ್ರ ಮುಜುಗರಕ್ಕೊಳಗಾಗಿದ್ದ ರಾಜ್ಯಪಾಲರು, ಶಿಷ್ಟಾಚಾರ ಉಲ್ಲಂಘಿಸಿದ ಅಧಿಕಾರಿಗಳ ಮೇಲೆ ಕಾನೂನು ಕ್ರಮಕ್ಕೆ ಸೂಚಿಸಿದ್ದರು. ಅಂತೆಯೇ ವಿಮಾನ ನಿಲ್ದಾಣ ಠಾಣೆಗೆ ಶುಕ್ರವಾರ ಶಿಷ್ಟಾಚಾರ ವಿಭಾಗದ ಅಧಿಕಾರಿ ವೇಣುಗೋಪಾಲ್‌ ದೂರು ಸಲ್ಲಿಸಿದ್ದಾರೆ.

10 ನಿಮಿಷ ತಡಮಾಡಿದ ರಾಜ್ಯಪಾಲ ಗೆಹ್ಲೋತ್‌ರನ್ನೇ ಬಿಟ್ಟು ಹಾರಿದ ವಿಮಾನ..!

ಸಮಯಕ್ಕೆ ಸರಿಯಾಗಿ ತಲುಪಿದ್ದ ರಾಜ್ಯಪಾಲರು:

ತೆಲಂಗಾಣ ರಾಜ್ಯದ ಹೈದರಾಬಾದ್‌ಗೆ ಪೂರ್ವನಿಗದಿತ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಏರ್‌ಏಷ್ಯಾ ವಿಮಾನದಲ್ಲಿ ಗುರುವಾರ ಮಧ್ಯಾಹ್ನ 2.05 ಗಂಟೆಗೆ ರಾಜ್ಯಪಾಲರು ಪ್ರಯಾಣಕ್ಕೆ ಟಿಕೆಟ್‌ ಕಾಯ್ದಿರಿಸಲಾಗಿತ್ತು. ಅಂತೆಯೇ ರಾಜಭವನದಿಂದ ಮಧ್ಯಾಹ್ನ 1.10ಕ್ಕೆ ಹೊರಟ ರಾಜ್ಯಪಾಲರು, ವಿಮಾನ ನಿಲ್ದಾಣದ ಟರ್ಮಿನಲ್‌-1ಕ್ಕೆ 1.35ಕ್ಕೆ ತಲುಪಿದ್ದರು. ಅದೇ ವೇಳೆ ಆ ವಿಮಾನಕ್ಕೆ ರಾಜ್ಯಪಾಲರ ಲಗೇಜ್‌ ಸಹ ತಲುಪಿದ್ದವು. ಆಗ ಏರ್‌ ಏಷ್ಯಾ ವೈಮಾನಿಕ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸಂಸ್ಕೃತಿ ಅವರು, ರಾಜ್ಯಪಾಲರ ವಿಶೇಷ ಕರ್ತವ್ಯಾಧಿಕಾರಿಯನ್ನು ಭೇಟಿಯಾಗಿ ಟರ್ಮಿನಲ್‌-2ಕ್ಕೆ ರಾಜ್ಯಪಾಲರನ್ನು ಕರೆತರುವಂತೆ ಕೋರಿದರು. ಅಂತೆಯೇ ವಿಮಾನ ಹತ್ತಲು ಟರ್ಮಿನಲ್‌-2ಕ್ಕೆ ರಾಜ್ಯಪಾಲರು ತೆರಳಿದರು. ಆಗ ವಿಮಾನ ಟೇಕ್‌ಆಫ್‌ಗೆ ಇನ್ನು ಸಮಯವಿತ್ತು. ಆದರೆ ವಿಳಂಬವಾಗಿದೆ ಎಂದು ಹೇಳಿ ರಾಜ್ಯಪಾಲರನ್ನು ಒಳ ಪ್ರವೇಶಿಸಲು ಏರ್‌ಏಷ್ಯಾ ಸಿಬ್ಬಂದಿ ಅವಕಾಶ ಕೊಡಲಿಲ್ಲ ಎಂದು ಶಿಷ್ಟಾಚಾರ ಅಧಿಕಾರಿ ವೇಣುಗೋಪಾಲ್‌ ದೂರಿನಲ್ಲಿ ಉಲ್ಲೇಖಿಸಿರುವುದಾಗಿ ತಿಳಿದು ಬಂದಿದೆ.

ವಿಪಕ್ಷ ನಾಯಕರ ಸ್ವಾಗತಕ್ಕೆ ಐಎಎಸ್‌ ಬಳಕೆ ಬಗ್ಗೆ ವರದಿ ಕೇಳಿದ ಗವರ್ನರ್‌

ವಿಮಾನವು 2.05 ಗಂಟೆಗೆ ಟೇಕ್‌ಆಫ್‌ ಆಗಬೇಕಿತ್ತು. ಆದರೆ ವಿಮಾನದ ಲ್ಯಾಂಡರ್‌ ಬಳಿಗೆ 2.06 ನಿಮಿಷಕ್ಕೆ ರಾಜ್ಯಪಾಲರು ತಲುಪಿದ್ದರು. ಆಗಿನ್ನು ವಿಮಾನದ ಬಾಗಿಲುಗಳು ತೆರೆದಿದ್ದವು. ಆದಾಗ್ಯೂ ರಾಜ್ಯಪಾಲರಿಗೆ ಪ್ರಯಾಣಿಸಲು ಅನುಮತಿ ನಿರಾಕರಿಸಿ ಅಗೌರವ ತಂದಿದ್ದಾರೆ ಎಂದು ವೇಣುಗೋಪಾಲ್‌ ಆರೋಪಿಸಿದ್ದಾರೆ.

ಈ ಘಟನೆಯಿಂದ ರಾಜ್ಯಪಾಲರಿಗೆ ತುಂಬಾ ನೋವಾಗಿದೆ. ಸ್ಪಷ್ಟಶಿಷ್ಟಾಚಾರ ಉಲ್ಲಂಘನೆಯಾಗಿದೆ. ಹೀಗಾಗಿ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ತಪ್ಪಿತಸ್ಥರ ವಿರುದ್ಧ ಕಾನೂನು ಜರುಗಿಸಬೇಕು ಎಂದು ಕೋರಿದ್ದಾರೆ.