ಕರ್ನಾಟಕದಲ್ಲಿ ಮುಂಗಾರು ಮಳೆ ಚುರುಕುಗೊಂಡಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ನಾಲ್ಕು ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಿದೆ. ಸಿಡಿಲು ಬಡಿದು ಓರ್ವ ರೈತ ಮೃತಪಟ್ಟಿದ್ದಾನೆ.
ಪಿರಿಯಾಪಟ್ಟಣದಲ್ಲಿ ಬೆಳೆಗೆ ನೀರು ಹಾಯಿಸುವಾಗ ಬಡಿದ ಸಿಡಿಲು ।
ಬೆಂಗಳೂರು (ಜೂ.14): ರಾಜಧಾನಿ ಬೆಂಗಳೂರು(Bengaluru) ಸೇರಿದಂತೆ ರಾಜ್ಯದಲ್ಲಿ ಮುಂಗಾರು ಮಳೆ(Monsoon Rain) ಅಬ್ಬರ ಮುಂದುವರಿದಿದ್ದು, ದಕ್ಷಿಣ ಕನ್ನಡ, ಬಳ್ಳಾರಿ, ಉತ್ತರ ಕನ್ನಡ ಸೇರಿದಂತೆ ರಾಜ್ಯದ ವಿವಿಧೆಡೆ ಶನಿವಾರ ಉತ್ತಮ ಮಳೆಯಾಗಿದೆ. ತಂಬಾಕು ಬೆಳೆಗೆ ನೀರು ಹಾಯಿಸುತ್ತಿದ್ದ ವೇಳೆ ಸಿಡಿಲು ಬಡಿದು ರೈತ ಮೃತಪಟ್ಟಿದ್ದಾನೆ.
ಸಿಡಿಲು ಬಡಿದು ರೈತ ದುರ್ಮರಣ
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನಲ್ಲಿ ತಂಬಾಕು ಬೆಳೆಗೆ ನೀರು ಹಾಯಿಸುತ್ತಿದ್ದ ವೇಳೆ ಶುಕ್ರವಾರ ಸಿಡಿಲು ಬಡಿದು ಎಸ್.ಟಿ. ಆನಂದ್ (60) ಎಂಬ ರೈತ ಮೃತಪಟ್ಟಿದ್ದಾರೆ. ಜಮೀನಿನಲ್ಲಿ ಕೃಷಿ ಕಾರ್ಯದಲ್ಲಿ ತೊಡಗಿದ್ದ ಆನಂದ್ ಅವರು, ಮಳೆ ಪ್ರಮಾಣ ಕಡಿಮೆಯಾಗಿದ್ದ ಹಿನ್ನೆಲೆ ತಂಬಾಕು ಬೆಳೆಗೆ ನೀರು ಹಾಯಿಸುತ್ತಿದ್ದರು. ಈ ವೇಳೆ ಮಳೆ ಆರಂಭವಾಗಿದೆ. ಮಳೆಯಿಂದ ರಕ್ಷಿಸಿಕೊಳ್ಳಲು ಮರದ ಕೆಳಗೆ ನಿಂತಿದ್ದಾಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ದಕ್ಷಿಣ ಕನ್ನಡದ ಮಂಗಳೂರು, ಸುಳ್ಯ, ಕಡಬ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ, ಮೂಡುಬಿದಿರೆ, ಮೂಲ್ಕಿ, ಉಳ್ಳಾಲ ತಾಲೂಕಿನ ಹಲವೆಡೆ ಉತ್ತಮ ಮಳೆಯಾಗಿದೆ. ಜಿಲ್ಲೆಯಲ್ಲಿ ಶನಿವಾರ ಬೆಳಗ್ಗಿನವರೆಗೆ ಒಟ್ಟು 17.7 ಮಿ.ಮೀ. ಮಳೆಯಾಗಿದೆ.
ಮಂಗಳೂರು ಹೊರವಲಯದಲ್ಲಿ ಗುಡ್ಡ ಕುಸಿತ
ಮಂಗಳೂರು ಹೊರವಲಯದ ವಾಮಂಜೂರು ಸಮೀಪದ ರಾಷ್ಟ್ರೀಯ ಹೆದ್ದಾರಿ ಬಳಿಯ ಕೆತ್ತಿಕಲ್ಲು ಗುಡ್ಡ ಕುಸಿದಿದ್ದು, ವಾಹನ ಸವಾರರದಲ್ಲಿ ಆತಂಕ ಶುರುವಾಗಿದೆ. ಇದು ಮಂಗಳೂರು-ಮೂಡುಬಿದಿರೆ ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿಯಾಗಿದ್ದು, ಹೆದ್ದಾರಿ ಅಗಲೀಕರಣ ಕಾಮಗಾರಿ ವೇಳೆ ಅವೈಜ್ಞಾನಿಕವಾಗಿ ಗುಡ್ಡ ಅಗೆಯಲಾಗಿದೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಈ ಗುಡ್ಡ ಮಳೆಗಾಲಕ್ಕೆ ಪದೇ ಪದೇ ಕುಸಿಯುತ್ತಿದೆ. ಘಟನೆ ಹಿನ್ನೆಲೆಯಲ್ಲಿ ಒಂದು ಬದಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ.
ಬಳ್ಳಾರೀಲಿ ಸರ್ಕಾರಿ ಕಚೇರಿ ಆವರಣ ಜಲಾವೃತ
ಬಳ್ಳಾರಿ ಜಿಲ್ಲೆಯ ಹಲವೆಡೆ ಶುಕ್ರವಾರ ರಾತ್ರಿಯಿಂದ ಒಂದು ತಾಸಿಗೂ ಅಧಿಕ ಮಳೆ ಸುರಿದಿದೆ. ಸರ್ಕಾರಿ ಕಚೇರಿ ಆವರಣಗಳು, ಶಾಲೆಗಳು, ತಗ್ಗು ಪ್ರದೇಶಗಳು ಜಲಾವೃತಗೊಂಡಿವೆ. ಇನ್ನು ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ, ಗೋಕರ್ಣ, ಕುಮಟಾ, ಹೊನ್ನಾವರ ಹಾಗೂ ಭಟ್ಕಳದಲ್ಲಿ ಉತ್ತಮ ಮಳೆಯಾಗಿದೆ.


