ರಾಜ್ಯದ ಕೆಲೆವೆಡೆ ಭಾರಿ ಮಳೆಯಾಗುತ್ತಿದೆ. ಇತ್ತ ಕೊಡಗು ಜಿಲ್ಲೆಯಲ್ಲಿ ಆರೇಂಜ್ ಅಲರ್ಟ್ ಘೋಷಿಸಲಾಗಿದ್ದು, ನಾಳೆ (ಆ.06) ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ.

ಬೆಂಗಳೂರು (ಆ.05) ಕರ್ನಾಟಕದ ಹಲೆವೆಡೆ ಭಾರಿ ಮಳೆಯಾಗುತ್ತಿದೆ. ಕಳೆದೆರಡು ದಿನ ಬೆಂಗಳೂರಲ್ಲೂ ಉತ್ತಮ ಮಳೆಯಾಗಿತ್ತು. ಚಿತ್ರದುರ್ಗ, ಹುಬ್ಭಳ್ಳಿ ಸೇರಿದಂತೆ ಹಲವು ಭಾಗದಲ್ಲಿ ಭಾರಿ ಮಳೆಯಾಗುತ್ತಿದೆ. ಭಾರತೀಯ ಹವಾಮಾನ ಇಲಾಖೆ ರಾಜ್ಯದ ಕೆಲ ಜಿಲ್ಲೆಗಳಲ್ಲಿ ನಾಳೆ (ಆ.06) ಭಾರಿ ಮಳೆಯಾಗಲಿದೆ ಎಂದಿದೆ. ಇತ್ತ ಕೊಡಗು ಜಿಲ್ಲೆಯಲ್ಲಿ ನಾಳೆ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಹೀಗಾಗಿ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ನಾಳೆ (ಆಗಸ್ಟ್ 6) ಜಿಲ್ಲೆಯ ಶಾಲಾ ಕಾಲೇಜಿಗೆ ರಜೆ ಘೋಷಿಸಿದ್ದಾರೆ.

ಯಾರಿಗೆಲ್ಲಾ ನಾಳೆ ರಜೆ

ಕೊಡುಗು ಜಿಲ್ಲೆಯಲ್ಲಿ ನಾಳೆ 150 ಮಿಲಿ ಮೀಟರ್‌ಗಿಂತ ಹೆಚ್ಚು ಮಳೆಯಾಗಲಿದೆ ಎಂದ ಹವಾಮಾನ ಇಲಾಖೆ ಹೇಳಿದೆ. ಆರೇಂಜ್ ಅಲರ್ಟ್ ಘೋಷಿಸಿರುವ ಹಿನ್ನಲೆಯಲ್ಲಿ ಮುನ್ನಚ್ಚೆರಿಕಾ ಕ್ರಮವಾಗಿ ಶಾಲಾ ಕಾಲೇಜಿಗೆ ರಜೆ ಘೋಷಿಸಲಾಗಿದೆ. ಅಂಗನವಾಡಿ, ಪ್ರಾಥಮಿಕ ಶಾಲೆ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ನಾಳೆ ರಜೆ ಘೋಷಿಸಲಾಗಿದೆ.

ದೇಶದ ಹಲೆವೆಡೆ ಮಳೆಯಾಗುತ್ತಿದೆ. ಉತ್ತರಖಂಡದಲ್ಲಿ ಮೇಘಸ್ಫೋಟದಲ್ಲಿ ದುರಂತವೇ ಸಂಭವಿಸಿದೆ. ಹವಾಮಾನ ಇಲಾಖೆ ಸೂಚನೆ ಪ್ರಕಾರ ಮಳೆ ಪ್ರಮಾಣ ಹೆಚ್ಚಾಗಲಿದೆ ಎಂದಿದೆ. ಇತ್ತ ಕರ್ನಾಟಕದ ಹಲವು ಭಾಗದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದಿದೆ. ಬೆಟ್ಟದ ತಪ್ಪಲು, ನದಿ ಪಾತ್ರ, ಗುಡ್ಡಗಾಡು ಪ್ರದೇಶದಗಳ ಜನರಿಗೆ ಎಚ್ಚರಿಕೆ ನೀಡಲಾಗಿದೆ.

ಚಿತ್ರದುರ್ಗದಲ್ಲಿ ಸುರಿದ ಭಾರಿ ಮಳೆಗೆ ರಸ್ತೆ ಜಲಾವೃತ

ಚಿತ್ರದುರ್ಗದ ಹಲವೆಡೆ ಭಾರಿ ಮಳೆಯಾಗಿದೆ. ಇಂದು (ಆಗಸ್ಟ್ 5) ಸಂಜೆ ಸುರಿದ ಮಳೆಗೆ ಹಲವು ರಸ್ತೆಗಳು ಜಲಾವೃತಗೊಂಡಿದೆ. ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದಲ್ಲಿ ಧಾರಾಕಾರ ಮಳೆಯಾಗಿದೆ. ಹಿರಿಯೂರು ರಸ್ತೆಗಳ ಮಳೆ ನೀರಿನಿಂದ ತುಂಬಿ ಹರಿದಿದೆ. ರಸ್ತೆ ಬದಿ ನಿಲ್ಲಿಸಿದ್ದ ಬೈಕ್‌ಗಳು, ವಾಹನಗಳು ಜಲಾವೃತಗೊಂಡಿದೆ.

ಹುಬ್ಬಳ್ಳಿಯಲ್ಲಿ ಭಾರಿ ಮಳೆ

ಹುಬ್ಬಳ್ಳಿಯಲ್ಲಿ ಇಂದು ಸಂಜೆ ಭಾರಿ ಮಳೆಯಾಗಿದೆ. ಅರ್ಧಗಂಟೆಗೂ ಹೆಚ್ಚು ಕಾಲ ನಿರಂತರವಾಗಿ ಸುರಿದ ಮಳೆಯಿಂದ ಜನಜೀವನ ಅಸ್ತವ್ಯಸತಗೊಂಡಿದೆ. ಅನೇಕ ತಗ್ಗು ಪ್ರದೇಶದ ರಸ್ತೆಗಳು ಜಲಾವೃತಗೊಂಡಿದೆ. ದಾಜಿಬಾನಪೇಟೆ ಸೇರಿದಂತೆ ಕೆಲ ರಸ್ತೆಗಳು ಜಲಾವೃತಗೊಂಡಿದ್ದು, ವಾಹನ ಸವಾರರು ಪರದಾಡಿದ್ದಾರೆ.

ಬೆಳಗಾವಿ ಮಳೆಯಿಂದ ಹೆದ್ದಾರಿಯಲ್ಲಿ ಟ್ರಾಫಿಕ್ ಜಾಮ್

ಬೆಳಗಾವಿಯಲ್ಲಿ ಭಾರಿ ಮಳೆಯಿಂದ ಟ್ರಾಫಿಕ್ ಜಾಮ್ ಸೃಷ್ಟಿಯಾಗಿದೆ. ಬೆಳಗಾವಿ ತಾಲೂಕಿನ ಬಡೇಕೊಳ್ಳಮಠದ ರಾಷ್ಟ್ರೀಯ ಹೆದ್ದಾರಿ ಮಳೆಯಿಂದ ಜಲಾವೃತಗೊಂಡಿದೆ. ಒಂದು ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಯಿಂದ ಹೆದ್ದಾರಿ ಜಾಮ್ ಆಗಿದೆ. ಬೆಳಗಾವಿಯಿಂದ ಧಾರವಾಡಕ್ಕೆ ಹೋಗುವ ವಾಹನ ಸವಾರರು ಪರದಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಮೂರು‌ ಕಿಮೀಗೂ ಅಧಿಕ ವ್ಯಾಪ್ತಿಯಲ್ಲಿ ಟ್ರಾಫಿಕ್ ಸಮಸ್ಯೆ ಸೃಷ್ಟಿಯಾಗಿದೆ.