ರಾಜ್ಯ ಹವಾಮಾನ ಇಲಾಖೆಯು ಮುಂದಿನ ಮೂರು ದಿನಗಳ ಕಾಲ ಕರ್ನಾಟಕದಲ್ಲಿ, ವಿಶೇಷವಾಗಿ ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ಅತ್ಯಂತ ಭಾರೀ ಮಳೆಯಾಗುವ ಬಗ್ಗೆ ತೀವ್ರ ಎಚ್ಚರಿಕೆ ನೀಡಿದೆ. ಗಂಟೆಗೆ 60 ಕಿ.ಮೀ ವೇಗದ ಬಿರುಗಾಳಿ, ಭೂಕುಸಿತದ ಆತಂಕವಿದ್ದು, ಸಾರ್ವಜನಿಕರಿಗೆ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.
ಬೆಂಗಳೂರು: ವರುಣನ ಆರ್ಭಟಕ್ಕೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಯದ ವಾತಾವರಣ ನಿರ್ಮಾಣವಾಗಿದೆ. ಮುಂದಿನ ಮೂರು ದಿನಗಳ ಕಾಲ ರಾಜ್ಯಾದ್ಯಂತ ಅತ್ಯಂತ ಭಾರೀ ಮಳೆಯಾಗಲಿದೆ ಎಂದು ರಾಜ್ಯ ಹವಾಮಾನ ಇಲಾಖೆ (IMD) ತೀವ್ರ ಎಚ್ಚರಿಕೆ ನೀಡಿದೆ. ವಿಶೇಷವಾಗಿ ಕರಾವಳಿ, ಮಲೆನಾಡು ಹಾಗೂ ಘಟ್ಟ ಪ್ರದೇಶಗಳಲ್ಲಿ ಮಳೆಯ ತೀವ್ರತೆ ವಿಪರೀತವಾಗಿರಲಿದ್ದು, ಸಾರ್ವಜನಿಕರು ಕಡ್ಡಾಯವಾಗಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕೆಂದು ಕಟ್ಟು ನಿಟ್ಟಿನ ಸೂಚನೆ ನೀಡಲಾಗಿದೆ. ಮುಂದಿನ 24 ರಿಂದ 48 ಗಂಟೆಗಳ ಕಾಲ ರಾಜ್ಯದ ಬಹುತೇಕ ಭಾಗಗಳಲ್ಲಿ ದಟ್ಟ ಮೋಡ ಕವಿದ ವಾತಾವರಣ ಇರಲಿದ್ದು, ಬಿರುಗಾಳಿ ಸಹಿತ ಸಾಧಾರಣದಿಂದ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.
ಕರಾವಳಿ-ಮಲೆನಾಡಿಗೆ 60 ಕಿ.ಮೀ ವೇಗದ ಬಿರುಗಾಳಿ ತಲ್ಲಣ!
ಹವಾಮಾನ ಇಲಾಖೆಯ ವರದಿಯ ಪ್ರಕಾರ, ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ಗಂಟೆಗೆ 50 ರಿಂದ 60 ಕಿ.ಮೀ ವೇಗದಲ್ಲಿ ಬೀಸಲಿರುವ ಬಲವಾದ ಗಾಳಿಯೊಂದಿಗೆ ಭಾರೀ ಮಳೆ ಸುರಿಯಲಿದೆ. ಸಮುದ್ರ ತೀರ ಹಾಗೂ ತಗ್ಗು ಪ್ರದೇಶಗಳಲ್ಲಿ ವಾಸಿಸುವ ಜನರಿಗೆ ಈಗಾಗಲೇ ಎಚ್ಚರಿಕೆ ರವಾನಿಸಲಾಗಿದೆ. ಮತ್ತೊಂದೆಡೆ ಮಲೆನಾಡು ಮತ್ತು ಘಟ್ಟ ಪ್ರದೇಶಗಳಾದ ಬೆಳಗಾವಿ ಘಟ್ಟ ಪ್ರದೇಶ, ಶಿವಮೊಗ್ಗ, ಚಿಕ್ಕಮಗಳೂರು, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ವಿಪರೀತ ಮಳೆಯಾಗುವ ಸಾಧ್ಯತೆ ದಟ್ಟವಾಗಿದೆ.
- ಜುಲೈ 8 : ಕರಾವಳಿ ಕರ್ನಾಟಕದಾದ್ಯಂತ ಮಳೆಯ ಆರ್ಭಟ ಮುಂದುವರಿಯಲಿದ್ದು, ಭಾರೀ ಮಳೆಯಾಗಲಿದೆ. ಇದರೊಂದಿಗೆ ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲೂ ಮುಂಜಾನೆಯಿಂದಲೇ ವರುಣನ ಅಬ್ಬರ ಜೋರಾಗಿರಲಿದೆ.
- ಜುಲೈ 9: ಕರಾವಳಿಯ ಮೂರು ಜಿಲ್ಲೆಗಳು ಹಾಗೂ ಬೆಳಗಾವಿ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗಿನಲ್ಲಿ ಮಳೆಯ ತೀವ್ರತೆ ಮತ್ತಷ್ಟು ಹೆಚ್ಚಾಗಲಿದ್ದು, ಜನಜೀವನ ಅಸ್ತವ್ಯಸ್ತಗೊಳ್ಳುವ ಸಾಧ್ಯತೆ ಇದೆ.
- ಜುಲೈ 10: ಕರಾವಳಿ ಜಿಲ್ಲೆಗಳಲ್ಲಿ ಜುಲೈ 10ರವರೆಗೂ ಯಾವುದೇ ಬಿಡುಗಿಲ್ಲದೆ ನಿರಂತರವಾಗಿ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಸ್ಪಷ್ಟಪಡಿಸಿದೆ.
ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನಲ್ಲಿ ಮಧ್ಯಮ ಮಳೆ
ರಾಜಧಾನಿ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಕೋಲಾರ, ಚಿಕ್ಕಬಳ್ಳಾಪುರ ಹಾಗೂ ರಾಮನಗರ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳ ಕಾಲ ಸಾಧಾರಣದಿಂದ ಮಧ್ಯಮ ಗಾತ್ರದ ಮಳೆಯಾಗಲಿದೆ. ಆದರೆ, ಈ ಭಾಗಗಳಲ್ಲೂ ಗಂಟೆಗೆ 50-60 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಹಳೆಯ ಕಟ್ಟಡಗಳು ಹಾಗೂ ಮರಗಳ ಕೆಳಗೆ ವಾಹನ ನಿಲ್ಲಿಸದಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.
ಭೂಕುಸಿತದ (Landslide) ಭೀತಿ, ಘಟ್ಟ ಪ್ರದೇಶಗಳಲ್ಲಿ ಸಂಚರಿಸುವ ಮುನ್ನ ಗಮನಿಸಿ
ಮಲೆನಾಡು ಹಾಗೂ ಕರಾವಳಿಯನ್ನು ಸಂಪರ್ಕಿಸುವ ಪ್ರಮುಖ ಘಟ್ಟ ರಸ್ತೆಗಳಲ್ಲಿ ಜುಲೈ 11ರವರೆಗೆ ಭೂಕುಸಿತ (Landslide) ಸಂಭವಿಸುವ ತೀವ್ರ ಆತಂಕವಿದೆ. ಹೀಗಾಗಿ, ಸಾರ್ವಜನಿಕರು ತುರ್ತು ಕೆಲಸಗಳಿಲ್ಲದೆ ಘಟ್ಟ ರಸ್ತೆಗಳಲ್ಲಿ ಪ್ರಯಾಣಿಸುವುದನ್ನು ಆರು ದಿನಗಳ ಕಾಲ ಮುಂದೂಡುವುದು ಒಳಿತು. ಸಾರ್ವಜನಿಕರ ಸುರಕ್ಷತೆಗಾಗಿ ಈ ಕೆಳಗಿನ ಪ್ರಮುಖ ಸೂಚನೆಗಳನ್ನು ಅಧಿಕಾರಿಗಳು ಹೊರಡಿಸಿದ್ದಾರೆ.
ನದಿಗಳು ಮತ್ತು ಹಳ್ಳಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿರುವುದರಿಂದ ಸಾರ್ವಜನಿಕರು ಸೆಲ್ಫಿ ತೆಗೆದುಕೊಳ್ಳಲು ಅಥವಾ ವೀಕ್ಷಿಸಲು ನದಿ ತೀರಕ್ಕೆ ಹೋಗಬಾರದು.
ಮಳೆ ನೀರು ನುಗ್ಗುವ ಸಾಧ್ಯತೆ ಇರುವ ತಗ್ಗು ಪ್ರದೇಶಗಳ ನಿವಾಸಿಗಳನ್ನು ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಗೊಳ್ಳಲು ಸೂಚಿಸಲಾಗಿದೆ.
ಬಿರುಗಾಳಿ ಹಾಗೂ ಸಿಡಿಲು ಸಹಿತ ಮಳೆಯಾಗುತ್ತಿರುವುದರಿಂದ ರೈತರು ತಮ್ಮ ಜಾನುವಾರುಗಳನ್ನು ವಿದ್ಯುತ್ ಕಂಬ ಹಾಗೂ ಮರಗಳ ಕೆಳಗೆ ಕಟ್ಟಬಾರದು.
ರಾಜ್ಯಾದ್ಯಂತ ಎನ್‌ಡಿಆರ್‌ಎಫ್ (NDRF) ಹಾಗೂ ಎಸ್‌ಡಿಆರ್‌ಎಫ್ (SDRF) ಸಿಬ್ಬಂದಿಗಳು ತರ್ತು ಸಂದರ್ಭಕ್ಕೆ , ಯಾವುದೇ ತುರ್ತು ಪರಿಸ್ಥಿತಿಗೆ ಜಿಲ್ಲಾಡಳಿತಗಳು ಕಂಟ್ರೋಲ್ ರೂಮ್‌ಗಳನ್ನು ತೆರೆದಿವೆ.


