ನಿವೃತ್ತಿ ದಿನಾಂಕದ ಮಧ್ಯಾಹ್ನದ ನಂತರವೂ ಬಡ್ತಿ ಪಡೆದ ಹುದ್ದೆ ಜವಾಬ್ದಾರಿ ವಹಿಸಿಕೊಳ್ಳುವ ಸರ್ಕಾರಿ ನೌಕರನು, ಆ ದಿನಾಂಕದಿಂದ ಬಡ್ತಿ ಮತ್ತು ಪಿಂಚಣಿ ಪ್ರಯೋಜನಗಳಿಗೆ ಅರ್ಹನಾಗಿರುತ್ತಾನೆ ಎಂದು ಹೈಕೋರ್ಟ್‌ ತೀರ್ಪು ನೀಡಿದೆ.

 ಬೆಂಗಳೂರು (ಜು.8): ನಿವೃತ್ತಿ ದಿನಾಂಕದ ಮಧ್ಯಾಹ್ನದ ನಂತರವೂ ಬಡ್ತಿ ಪಡೆದ ಹುದ್ದೆ ಜವಾಬ್ದಾರಿ ವಹಿಸಿಕೊಳ್ಳುವ ಸರ್ಕಾರಿ ನೌಕರನು, ಆ ದಿನಾಂಕದಿಂದ ಬಡ್ತಿ ಮತ್ತು ಪಿಂಚಣಿ ಪ್ರಯೋಜನಗಳಿಗೆ ಅರ್ಹನಾಗಿರುತ್ತಾನೆ ಎಂದು ಹೈಕೋರ್ಟ್‌ ತೀರ್ಪು ನೀಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಸಾರ್ವಜನಿಕ ಶಿಕ್ಷಣ ಇಲಾಖೆ ನಿವೃತ್ತ ಪ್ರಾಧ್ಯಾಪಕರ ಪರ ಕರ್ನಾಟ‌ಕ‌ ಆಡಳಿತಾತ್ಮಕ ನ್ಯಾಯಾಧಿಕರಣ (ಕೆಎಟಿ) ನೀಡಿದ್ದ ಆದೇಶ ಪ್ರಶ್ನಿಸಿ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿ ವಜಾಗೊಳಿಸಿರುವ ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ನೇತೃತ್ಬದ ವಿಭಾಗೀಯ ಪೀಠ ಈ ಆದೇಶ ನೀಡಿದೆ.

ಶಾಲಾ ಮುಖ್ಯೋಪಾಧ್ಯರಾಗಿದ್ದ ಬೆಂಗಳೂರಿನ ಬ್ಯಾಡರಹಳ್ಳಿಯ ಎ.ಆರ್‌.ರಂಗಸ್ವಾಮಿ ಅವರು 2023ರ ಮೇ 31ರಂದು ಪ್ರೊಪೆಸರ್‌ ಹುದ್ದೆಗೆ ಪದೋನ್ನತಿ ಪಡೆದಿದ್ದರು. ಅದೇ ದಿನ ಅವರು ಸೇವಾ ಅವಧಿ ಪೂರೈಸಿ ನಿವೃತ್ತಗೊಳ್ಳಬೇಕಿತ್ತು. ಆ ದಿನ ಸಂಜೆ 5.20ಕ್ಕೆ ಸರ್ಕಾರ ಪದೋನ್ನತಿ ನೀಡಲಾಗಿದ್ದ ಹುದ್ದೆಯನ್ನು ರಂಗಸ್ವಾಮಿ ವಹಿಸಿಕೊಂಡಿದ್ದರು. ನಿವೃತ್ತಿಯ ದಿನಾಂಕದಂದು ಉನ್ನತ ವೃಂದಕ್ಕೆ ಬಡ್ತಿ ನೀಡಿದ ಸರ್ಕಾರ, ಆ ಹುದ್ದೆಯ ಬಡ್ತಿ ಸೌಲಭ್ಯಗಳನ್ನು ನಿರಾಕರಿಸಿರುವುದು ಸರಿಯಲ್ಲ‌ ಎಂದು‌‌ ಪೀಠ ಆದೇಶದಲ್ಲಿ ಹೇಳಿದೆ.

ಬಡ್ತಿ ಸೌಲಭ್ಯ ನಿರಾಕರಿಸುವಂತಿಲ್ಲ:

ಅಲ್ಲದೆ, ಸರ್ಕಾರ ತನ್ನ ಉದ್ಯೋಗಿಗೆ ಅವರ ನಿವೃತ್ತಿ ದಿನಾಂಕದಂದು ಬಡ್ತಿ ನೀಡಿದಾಗ ಮತ್ತು ಅವರು ಉನ್ನತ ಹುದ್ದೆಯ ಜವಾಬ್ದಾರಿ ವಹಿಸಿಕೊಂಡಿದ್ದರೆ. ಆ ನಂತರ ಸರ್ಕಾರ ಬಡ್ತಿ ಸೌಲಭ್ಯಗಳನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಆದೇಶಿಸಿದೆ.

ತನಗೆ ಪದೋನ್ನತಿ ನೀಡಲಾದ ದಿನಾಂಕದಿಂದ ಪಿಂಚಣಿ ಮತ್ತಿತರ ಭತ್ಯೆಗಳನ್ನು ನೀಡುವಂತೆ ಶಿಕ್ಷಣ ಇಲಾಖೆಗೆ ರಂಗಸ್ವಾಮಿ ಮನವಿ ಸಲ್ಲಿಸಿದ್ದರು. ಆದರೆ ಇಲಾಖೆ ಅವರ ಮನವಿ ತಿರಸ್ಕರಿಸಿತ್ತು . ಹಾಗಾಗಿ, ಅವರು ಕೆಎಟಿ ಮೊರೆ ಹೋಗಿದ್ದರು. ಅವರ ಅರ್ಜಿ ಪುರಸ್ಕರಿಸಿದ್ದ ಕೆಎಟಿ, ಬಡ್ತಿ ನಂತರದ ಎಲ್ಲಾ ಸವಲತ್ತುಗಳನ್ನು ಒದಗಿಸುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಆ ಆದೇಶ ಪ್ರಶ್ನಿಸಿ ಸರ್ಕಾರ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು.