ಬೆಂಗಳೂರು(ಮೇ.24): ರೆಮ್‌ಡೆಸಿವಿರ್‌ನ ಕಾಳಸಂತೆ ವ್ಯಾಪಾರ ಮತ್ತು ದುರ್ಬಳಕೆಗೆ ಕಡಿವಾಣ ಹಾಕಲು ಆಸ್ಪತ್ರೆಗೆ ದಾಖಲಾಗಿರುವ ಕೋವಿಡ್‌ ರೋಗಿಗಳಿಗೆ ನೇರವಾಗಿ ಎಸ್‌ಎಂಎಸ್‌ ಕಳುಹಿಸುವ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಪ್ರಾರಂಭಿಸಿರುವುದಾಗಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಕೆ.ಸುಧಾಕರ್‌ ತಿಳಿಸಿದ್ದಾರೆ.

ಯಾವ ರೋಗಿಯ ಹೆಸರಲ್ಲಿ ಆಸ್ಪತ್ರೆಗಳು ರೆಮ್‌ಡೆಸಿವಿರ್‌ ಅನ್ನು ನೀಡುತ್ತವೆಯೋ ಆ ರೋಗಿಗೆ ರಾಜ್ಯದ ಡ್ರಗ್ಸ್‌ ಕಂಟ್ರೋಲ್‌ ಇಲಾಖೆ ನೇರವಾಗಿ ಎಸ್‌ಎಂಎಸ್‌ ಕಳುಹಿಸಲಿದೆ. ರೋಗಿ ಕೂಡ ತನ್ನ ಎಸ್‌ಆರ್‌ಎಫ್‌ ಐಡಿಯನ್ನು ಬಳಸಿಕೊಂಡು ಕೋವಿಡ್‌ ವಾರ್‌ ರೂಮ್‌ನ ಕೊಂಡಿ www.covidwar.karnataka.gov.in/service1 ಯಲ್ಲಿ ತನಗೆ ಮಂಜೂರಾಗಿರುವ ರೆಮ್‌ಡೆಸಿವಿರ್‌ನ ಮಾಹಿತಿ ಪಡೆಯಬಹುದಾಗಿದೆ. ಅದೇ ರೀತಿ ಸಾರ್ವಜನಿಕರು ಕೂಡ ಮಾಹಿತಿ ಪರಿಶೀಲಿಸಬಹುದಾಗಿದೆ ಎಂದು ಹೇಳಿದ್ದಾರೆ.

ವೈಟ್‌ ಫಂಗಸ್‌ ಸೋಂಕು: ರಾಜ್ಯದಲ್ಲಿ ಮೊದಲ ಬಲಿ?

ಒಂದು ವೇಳೆ ರೋಗಿಯ ಹೆಸರಲ್ಲಿ ಔಷಧ ಮಂಜೂರಾಗಿದ್ದರೂ ಆತನಿಗೆ ಆಸ್ಪತ್ರೆ ಔಷಧ ನೀಡಿರದಿದ್ದರೆ ಈ ಬಗ್ಗೆ ಡ್ರಗ್ಸ್‌ ಕಂಟ್ರೋಲ್‌ ಇಲಾಖೆಗೆ ದೂರು ನೀಡುವ ಅವಕಾಶ ಕಲ್ಪಿಸಲಾಗಿದೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಡಾ.ಕೆ.ಸುಧಾಕರ್‌, ರೆಮ್‌ಡೆಸಿವಿರ್‌ ವಿತರಣೆಯಲ್ಲಿ ಪಾರದರ್ಶಕತೆ ತರುವ ಉದ್ದೇಶದಿಂದ ತಂತ್ರಜ್ಞಾನ ಆಧಾರಿತ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಲಾಗಿದೆ. ಇದರಿಂದ ರೆಮ್‌ಡೆಸಿವಿರ್‌ ವಿತರಣೆಯ ಅಕ್ರಮವನ್ನು ತಡೆಯಲು ಸರ್ಕಾರಕ್ಕೆ ಅನುಕೂಲವಾಗಲಿದೆ ಎಂದು ಹೇಳಿದ್ದಾರೆ.

ರೆಮ್‌ಡೆಸಿವಿರ್‌ ವಿತರಣೆಯಲ್ಲಿ ಅಕ್ರಮ ಎಸಗಿರುವ ಅನೇಕರನ್ನು ಸರ್ಕಾರ ಬಂಧಿಸಿದೆ. ಅದೇ ರೀತಿ ರೆಮ್‌ಡೆಸಿವಿರ್‌ ಸಿಗದೆ ಅನೇಕ ರೋಗಿಗಳು ಮತ್ತು ಅವರ ಸಂಬಂಧಿಕರು ಪರದಾಡುವಂತೆ ಆಗಿತ್ತು. ಇಂತಹ ಅನಪೇಕ್ಷಿತ ಘಟನೆಗಳಿಗೆ ಲಗಾಮು ಹಾಕಲು ಸರ್ಕಾರ ತಂತ್ರಜ್ಞಾನದ ಮೊರೆ ಹೋಗಿದೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona